ಮಂಗಳೂರು : ಡಿ.23ರಿಂದ ಕರಾವಳಿ ಉತ್ಸವ
ಮಂಗಳೂರು, ಡಿ. 16: ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವವನ್ನು ಡಿ.23ರಿಂದ ಜ.1ರವರೆಗೆ ಆಯೋಜಿಸಲು ಜಿಲ್ಲಾ ಕರಾವಳಿ ಉತ್ಸವ ಸಮಿತಿ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವಿ.ರಮಾನಾಥ ರೈ ನೇತೃತ್ವದಲ್ಲಿ ನಡೆದ ಕರಾವಳಿ ಉತ್ಸವ ಸಮಿತಿಯ ತಯಾರಿ ಸಭೆಯಲ್ಲಿ ಅವರು ಮಾತನಾಡಿದರು.
ಉತ್ಸವವನ್ನು ಕರಾವಳಿ ಉತ್ಸವ ಮೈದಾನ, ಕದ್ರಿ ಉದ್ಯಾನವನ, ಪಣಂಬೂರು ಕಡಲ ತೀರದಲ್ಲಿ ಏರ್ಪಡಿಸಲಾಗಿದೆ. ಡಿ.23ರಂದು ಸಂಜೆ 4 ಗಂಟೆಗೆ ಕರಾವಳಿ ಉತ್ಸವದ ಅಂಗವಾಗಿ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ. ಸಚಿವ ಬಿ.ರಮಾನಾಥ ರೈ, ವಸ್ತು ಪ್ರದರ್ಶನದ ಉದ್ಫಾಟನೆಯನ್ನು ನೆರವೇರಿಸಲಿದ್ದಾರೆ. ಅಂದು ಸಂಜೆ 4:30ಕ್ಕೆ ಕರಾವಳಿ ಉತ್ಸವ ಮೈದಾನದಿಂದ ಕದ್ರಿ ಉದ್ಯಾನವನದವರೆಗೆ ಕರಾವಳಿ ಉತ್ಸವದ ಮೆರವಣಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಚಿವ ಯು.ಟಿ ಖಾದರ್ ಮೆರವಣಿಗೆಯ ಉದ್ಫಾಟನೆಯನ್ನು ನೆರವೇರಿಸಲಿದ್ದಾರೆ ಎಂದರು.
ಸಂಜೆ 6.00 ಗಂಟೆಗೆ ಕದ್ರಿ ಉದ್ಯಾನವನದಲ್ಲಿ ಕರಾವಳಿ ಉತ್ಸವದ ಉದ್ಫಾಟನಾ ಸಮಾರಂಭವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಕಲಾಯಮಾಮಣಿ ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್ ನೆರವೇರಿಸಲಿದ್ದಾರೆ. ಉತ್ಸವದ ಅಂಗವಾಗಿ ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಉದ್ಯಾನವನದಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಡಿ.29 ಹಾಗೂ 30ರಂದು ಸಂಜೆ 5 ಗಂಟೆಗೆ ಕದ್ರಿ ಉದ್ಯಾನವನದಲ್ಲಿ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಡಿ.24ರಂದು ಬೆಳಗ್ಗೆ 9:30ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಡಿ. 31ರಂದು ಬೆಳಿಗ್ಗೆ 10ಗಂಟೆಗೆ ಕರಾವಳಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಪುರುಷರ ಮುಕ್ತ ಹಾಕಿ ಪಂದ್ಯಾಟ ನಡೆಯಲಿದೆ. ಜ. 1ರಂದು ಬೆಳಗ್ಗೆ 9ಗಂಟೆಗೆ ಲೇಡಿಹಿಲ್‌ನ ಮಹಾನಗರಪಾಲಿಕೆ ಈಜುಕೊಳದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈಜು ಸ್ಪರ್ಧೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಡಿ.30 ಮತ್ತು ಜ. 1ರಂದು ಪಣಂಬೂರು ಕಡತ ಕಿನಾರೆಯಲ್ಲಿ ಬೀಚ್ ಉತ್ಸವವನ್ನು ಆಯೋಜಿಸಲಾಗಿದೆ. ಆ ಪ್ರಯುಕ್ತ ಬೆಳಗ್ಗೆ ವಿವಿಧ ಕ್ರೀಡಾ ಪಂದ್ಯಾಟಗಳು ಜರಗಲಿದ್ದು, ಸಂಜೆ ಆಹಾರೋತ್ಸವ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಾಳಿಪಟ ಸ್ಪರ್ಧೆ, ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜ.1ರಂದು ಸಂಜೆ 6 ಗಂಟೆಗೆ ಪಣಂಬೂರು ಕಡಲ ತೀರದಲ್ಲಿ ಕರಾವಳಿ ಉತ್ಸವದ ಸಮಾರೋಪ ಸಮಾರಂಭ ಹಾಗೂ ಕರಾವಳಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬಿ. ರಮಾನಾಥ ರೈ, ಕರಾವಳಿ ಉತ್ಸವದ ಸಮಾರೋಪ ಸಮಾರಂಭ ಹಾಗೂ ಕರಾವಳಿ ಗೌರವ ಪ್ರಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಭೆಯಲ್ಲಿ ಮನಪಾ ಮೇಯರ್ ಹರಿನಾಥ್, ಅಪರ ಜಿಲ್ಲಾಧಿಕಾರಿ ಕುಮಾರ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.







