ಗುಜ್ಜರ್ಮೆ ತೆಪ್ಪ ದುರಂತ : ನೀರು ಪಾಲಾದವರ ಶವ ಪತ್ತೆ
ಬೆಳ್ಳಾರೆ, ಡಿ.16 : ಕಡಬ ಠಾಣಾ ವ್ಯಾಪ್ತಿಯ ಚಾರ್ವಾಕ ಗ್ರಾಮದ ಗುಜ್ಜರ್ಮೆ ಸಮೀಪ ಕುಮಾರಧಾರ ಹೊಳೆಯಲ್ಲಿ ಗುರುವಾರ ತೆಪ್ಪ ಮಗುಚಿ ಬಿದ್ದು ನಾಪತ್ತೆಯಾಗಿದ್ದ ಕುಂಞಣ್ಣ ಗೌಡ(70)ಹಾಗೂ ಗಣೇಶ್ ಚೊಕ್ಕಾಡಿ(60)ಯವರ ಮೃತ ದೇಹ ಪತ್ತೆಯಾಗಿದೆ.
ತಣ್ಣೀರು ಬಾವಿ ಮುಳುಗು ತಜ್ಞರು ಮೃತ ದೇಹಗಳನ್ನು ತೆಪ್ಪ ಅವಘಡಕ್ಕೀಡಾದ ಸ್ಥಳಲ್ಲಿಯೇ ಪತ್ತೆ ಹಚ್ಚಿ ಮೇಲಕ್ಕೆತ್ತಿದರು. ಆಲಂಕಾರು ಗ್ರಾಮದ ಬುಡೇರಿಯಾ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮೋತ್ಸವ ತೆಪ್ಪದಲ್ಲಿ ತೆರಳುತ್ತಿದ್ದ ಕುಂಞಣ್ಣ ಹಾಗೂ ಗಣೇಶ್ ನದಿ ಮದ್ಯೆ ತೆಪ್ಪ ಪಲ್ಟಿಯಾಗಿ ಗುರುವಾರ ಮದ್ಯಾಹ್ನ ಜಲಸಮಾಧಿಯಾಗಿದ್ದರು. ಅವರ ಪತ್ತೆಗಾಗಿ ಪುತ್ತೂರು ಅಗ್ನಿ ಶಾಮಕ ದಳದವರು ಮತ್ತು ಸ್ಥಳೀಯ ಈಜುಪಟುಗಳು ರಾತ್ರಿಯ ತನಕ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.
ಉಪ್ಪಿನಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ, ಕಡಬ ಠಾಣಾ ಎಎಸ್‌ಐ ರವಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳದಲ್ಲೇ ಉಪಸ್ಥಿತರಿದ್ದು ಕಾರ್ಯಚರಣೆಯಲ್ಲಿ ಸಹಕರಿಸಿದ್ದರು. ಶುಕ್ರವಾರ ತಣ್ಣೀರು ಬಾವಿಯ ಮುಗುಳು ತಜ್ಞರು ಆಗಮಿಸಿ ಮೃತದೇವನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿಯೇ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತದೇಹವನ್ನು ವಾರೀಸುದಾರರಿಗೆ ನೀಡಲಾಯಿತು.
ಈ ವೇಳೆ ಕಡಬ ತಹಶೀಲ್ದಾರ್ ಬಿ. ಲಿಂಗಯ್ಯ, ಆರ್‌ಐ ಕೊರಗಪ್ಪ ಹೆಗ್ಡೆ, ಕಡಬ ಠಾಣಾ ಎಎಸ್‌ಐ ರವಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸುಳ್ಯ ಶಾಸಕ ಎಸ್. ಅಂಗಾರ, ಚಾರ್ವಾಕ ಸಿಎ ಬ್ಯಾಂಕ್ ಅಧ್ಯಕ್ಷ ಗೋಪಾಲಕೃಷ್ಣ ಗೌಡ ಪಟೇಲ್, ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಸೀತಮ್ಮ ಖಂಡಿಗ, ಪಿಡಿಓ ಯೋಗಿನಿ, ಗ್ರಾ.ಪಂ. ಸದಸ್ಯ ಪದ್ಮನಾಭ ಅಂಬುಲ, ಸಾಮಾಜಿಕ ಕಾರ್ಯಕರ್ತರಾದ ಎ.ಪಿ. ಮೋಹನ್, ಪ್ರದೀಪ್ ಬೊಬ್ಬೆಕೇರಿ, ವೀರಪ್ಪ ಕಾಣಿಯೂರು, ಹರೀಂದ್ರನಾಥ, ಹರೀಶ್ ರೈ ಕಾಣಿಯೂರು ಸ್ಥಳಕ್ಕಾಗಮಿಸಿ ಮೃತರ ಮನೆಯವರಿಗೆ ಸಾಂತ್ವನ ಹೇಳಿದರು.







