ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ : ರಾಜ್ಯಕ್ಕೆ ಮಿಶ್ರಫಲ
ಶಿಖಾ ಪರಾಭವ, ರಘು ಎಂ ಸೆಮಿಫೈನಲಿಗೆ

ಉಡುಪಿ, ಡಿ.16: ಅಜ್ಜರಕಾಡಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಮಣಿಪಾಲ ವಿವಿಗಳ ಜಂಟಿ ಆಶ್ರಯದಲ್ಲಿ ನಡೆದಿರುವ 41ನೇ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್‌ನಲ್ಲಿ ಕರ್ನಾಟಕ ಮಿಶ್ರ ಫಲ ಅನುಭವಿಸಿತು. ಬಾಲಕಿಯರ ವಿಭಾಗದ ಅಗ್ರಸೀಡ್ ಶಿಖಾ ಗೌತಮ್ ಪರಾಜಿತರಾದರೆ, ಬಾಲಕರ ವಿಭಾಗದಲ್ಲಿ ರಘು ಎಂ. ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಘು ಎಂ. ಅವರು ಕೇರಳದ ಅಜಯ್ ಸತೀಶ್‌ಕುಮಾರ್ ನಾಯರ್ ಅವರನ್ನು 21-14, 21-13ರ ನೇರ ಅಂತರದಿಂದ ಹಿಮ್ಮೆಟ್ಟಿಸಿ ಅಂತಿಮ ನಾಲ್ಕರ ಹಂತಕ್ಕೇರಿದರೆ, ಬಾಲಕಿಯರ ವಿಭಾಗದಲ್ಲಿ ಅಗ್ರಸೀಡ್ ಪಡೆದಿದ್ದ ರಾಜ್ಯದ ಶಿಖಾ ಗೌತಮ್ ಅವರನ್ನು 11ನೇ ಸೀಡ್ ಆಟಗಾರ್ತಿ ಹರ್ಯಾಣದ ಇರಾ ಶರ್ಮ ಅವರು 21-15,21-18ರ ನೇರ ಆಟಗಳಿಂದ ಸೋಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.
ಆದರೆ, 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅಗ್ರಸೀಡ್ ಉತ್ತರಾಂಚಲದ ಲಕ್ಷಾ ಸೇನ್ ಅವರು ನಿರಾಯಾಸವಾಗಿ ಸೆಮಿಫೈನಲ್ ಗೇರಿದ್ದಾರೆ. ಅವರ ಕ್ವಾರ್ಟರ್ ಫೈನಲ್ ಎದುರಾಳಿ ಕೇರಳದ 14ನೇ ಸೀಡ್ ಆಟಗಾರ ಕಿರಣ್ ಜಾರ್ಜ್ ಅವರು ಮೊದಲ ಗೇಮ್‌ನಲ್ಲಿ 13-18ರ ಹಿನ್ನೆಡೆಯಲ್ಲಿದ್ದಾಗ ಅಸೌಖ್ಯದಿಂದ ಆಟದಿಂದ ನಿವೃತ್ತರಾದರು.
ಉಳಿದಂತೆ ಕರ್ನಾಟಕದ ಧ್ರುವ ಕಪಿಲಾ ಮತ್ತು ಮಿಥುಲಾ ಯು.ಕೆ.ಜೋಡಿ 19 ವರ್ಷದೊಳಗಿನ ಬಾಲಕರ ಮಿಕ್ಸೆಡ್ ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೇರಿದೆ. ಇಂದು ಮೂರನೇ ಸೀಡ್ ಈ ಜೋಡಿ, 7ನೇ ಸೀಡ್ ಹೊಂದಿರುವ ತನ್ನದೇ ರಾಜ್ಯದ ನಿಖಿಲ್‌ಶ್ಯಾಮ್ ಶ್ರೀರಾಮ್ ಹಾಗೂ ಅಪೇಕ್ಷಾ ನಾಯಕ್ ಜೋಡಿಯನ್ನು 21-11, 21-11ರ ಅಂತರದಿಂದ ಹಿಮ್ಮೆಟ್ಟಿಸಿತು.
17 ವರ್ಷದೊಳಗಿನ ಬಾಲಕಿಯರ ಡಬಲ್ಸ್‌ನಲ್ಲಿ ರಾಜ್ಯದ ಎರಡು ಜೋಡಿ ಸೆಮಿಫೈನಲ್‌ಗೇರಿದೆ.
ಅಗ್ರಸೀಡ್ ಅಶ್ವಿನಿ ಭಟ್ ಕೆ. ಮತ್ತು ಮಿಥುಲಾ ಯು.ಕೆ. ಜೋಡಿ ಮಹಾರಾಷ್ಟ್ರದ ಜಾಹ್ನವಿ ಜಗ್ತಾಪ್ ಮತ್ತು ಆರ್ಯ ಶೆಟ್ಟಿ ಜೋಡಿಯನ್ನು 21-13, 21-12ರಿಂದ ಮಣಿಸಿದರೆ, ನಾಲ್ಕನೇ ಸೀಡ್ ತ್ರಿಶಾ ಹೆಗ್ಡೆ ಮತ್ತು ಧೃತಿ ಯತೀಶ್ ಜೋಡಿ ಗೋವಾದ ಅಂಜನ ಕುಮಾರಿ ಮತ್ತು ಮಂಜುಶ್ರಿ ರಾವತ್ ಜೋಡಿಯನ್ನು 21-7, 21-13ರ ಅಂತರದಿಂದ ಸೋಲಿಸಿದೆ.
19 ವರ್ಷದೊಳಗಿನ ಬಾಲಕಿಯರ ಡಬಲ್ಸ್‌ನಲ್ಲೂ ಕರ್ನಾಟಕದ ಎರಡು ಜೋಡಿ ಸೆಮಿಫೈನಲ್‌ಗೇರಿದೆ.
ಅಗ್ರಸೀಡ್ ಎಂ.ಅಗರ್ವಾಲ್ ಮತ್ತು ಶಿಖಾ ಗೌತಮ್ ಜೋಡಿ, ಮಹಾರಾಷ್ಟ್ರದ ಜಾಹ್ನವಿ ಜಗ್ತಾಪ್ ಮತ್ತು ಆರ್ಯ ಶೆಟ್ಟಿ ಅವರನ್ನು 21-14, 21-15ರಿಂದ ಸೋಲಿಸಿದರೆ, ಎರಡನೇ ಸೀಡ್ ಅಶ್ವಿನಿ ಭಟ್ ಕೆ. ಮತ್ತು ಮಿಥುಲಾ ಯು.ಕೆ. ಅವರು ಕೇರಳದ ಆದಿತ್ಯ ಬಿನೊಯ್ ಮತ್ತು ನಫಿಸಾ ಸಾರಾ ಸಿರಾಜ್‌ರನ್ನು 21-10, 21-15ರಿಂದ ಹಿಮ್ಮೆಟ್ಟಿಸಿದರು.
ಉಳಿದಂತೆ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ಅಗ್ರಸೀಡ್ ಏರಿಂಡಿಯಾದ ಕಾರ್ತಿಕೇಯ ಗುಲ್ಶನ್ ಕುಮಾರ್, ಮಹಾರಾಷ್ಟ್ರದ ಅಮನ್ ಫಿರೋಜ್ ಸಂಜಯ್, ಮಧ್ಯಪ್ರದೇಶದ ಆಲಾಪ್ ಮಿಶ್ರಾ ಹಾಗೂ ಕೇರಳದ ಕಿರಣ್ ಜೋರ್ಜ್ ಸೆಮಿಫೈನಲ್‌ಗೇರಿದರೆ, ಬಾಲಕಿಯರ ವಿಭಾಗದಲ್ಲಿ ಅಗ್ರಸೀಡ್ ಚಂಡೀಗಢದ ಆಕರ್ಷಿ ಕಶ್ಯಪ್, ಮಹಾರಾಷ್ಟ್ರದ ರಿತಿಕಾ ಠಾಕೂರ್, ಉತ್ತರಾಂಚಲದ ಉನ್ನತಿ ಬಿಸ್ತ್ ಹಾಗೂ ಏರಿಂಡಿಯಾದ ಪ್ರಾಶಿ ಜೋಷಿ ಅಂತಿಮ ನಾಲ್ಕರ ಹಂತವನ್ನೇರಿದರು.
19 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ಆಂಧ್ರದ ಜಸ್ವಂತ್‌ಡಿ., ಏರಿಂಡಿಯಾದ ಮಿಥುನ್ ಎಂ. ಅವರು ಸೆಮಿಫೈನಲ್‌ಗೇರಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಹರ್ಯಾಣದ ಇರಾ ಶರ್ಮ, ಅಸ್ಸಾಂನ ಅಸ್ಮಿತಾ ಚಾಲಿಹಾ, ಉತ್ತರ ಪ್ರದೇಶದ ರಿಯಾ ಮುಖರ್ಜಿ, ಚಂಡೀಗಢದ ಎ.ಕಶ್ಯಪ್ ಅವರು ಅಂತಿಮ ನಾಲ್ಕರ ಹಂತಕ್ಕೇರಿದ್ದಾರೆ.
ಶಿಖಾ ಗೌತಮ್-ಅಗರ್ವಾಲ ಫೈನಲಿಗೆ
ಇಂದು ಸಂಜೆ ನಡೆದ 19 ವರ್ಷದೊಳಗಿನ ಬಾಲಕಿಯರ ಡಬಲ್ಸ್ ಸೆಮಿಫೈನಲ್‌ನಲ್ಲಿ ಅಗ್ರಸೀಡ್ ಪಡೆದಿರುವ ಕರ್ನಾಟಕದ ಶಿಖಾ ಗೌತಮ್ ಹಾಗೂ ಎಂ.ಅಗರ್ವಾಲ್ ಜೋಡಿ, ಕೇರಳದ ಅನುರಾಗ ಮತ್ತು ರಿಝಾ ಫರತ್ ಜೋಡಿಯನ್ನು 21-11,21-12ರ ನೇರ ಆಟಗಳಿಂದ ಹಿಮ್ಮೆಟ್ಟಿಸಿ ಫೈನಲ್‌ಗೇರಿದೆ.
ಉಳಿದ ಸೆಮಿಫೈನಲ್ ಪಂದ್ಯಗಳಲ್ಲಿ ಜಯ ಪಡೆದ ಏರಿಂಡಿಯಾದ ಪ್ರಾಶಿ ಜೋಷಿ ಹಾಗೂ ಚಂಡೀಗಢದ ಎ.ಕಶ್ಯಪ್ 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ, ಏರಿಂಡಿಯಾದ ಕಾರ್ತಿಕೇಯ ಗುಲ್ಶನ್ ಕುಮಾರ್, ಕೇರಳದ ಕಿರಣ್ ಜೋರ್ಜ್ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ, ಕೃಷ್ಣ ಪ್ರಸಾದ್ ಜಿ ಮತ್ತು ಧ್ರುವ ಕಪಿಲ್ 19 ವರ್ಷದೊಳಗಿನ ಬಾಲಕರ ಡಬಲ್ಸ್ ಮತ್ತು ಮಧ್ಯಪ್ರದೇಶದ ಅಮನ್ ರಾಯ್ಕರ್ ಮತ್ತು ಯಶ್ ರಾಯ್ಕರ್ ಜೋಡಿ 17ವರ್ಷದೊಳಗಿನ ಬಾಲಕರ ಡಬಲ್ಸ್‌ನಲ್ಲಿ ಜಯ ಗಳಿಸಿ ನಾಳಿನ ಫೈನಲ್‌ಗೆ ತೇರ್ಗಡೆಗೊಂಡರು.







