ನೋಟು ಅಮಾನ್ಯ: ಸಿಂಧುತ್ವ ನಿರ್ಧಾರ ಪಂಚ ಸದಸ್ಯ ಪೀಠಕ್ಕೆ

ಹೊಸದಿಲ್ಲಿ, ಡಿ.16: ಸರಕಾರದ ನೋಟು ರದ್ದತಿ ನಿರ್ಧಾರದ ಸಿಂಧುತ್ವದ ಕುರಿತು ನಿರ್ಧಾರವನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠಕ್ಕೆ ಒಪ್ಪಿಸಿದೆ.
ಆದಾಗ್ಯೂ, ರದ್ದಾದ ನೋಟುಗಳ ಬಳಕೆಯನ್ನು ಸಾರ್ವಜನಿಕ ಸೌಲಭ್ಯ, ಸರಕಾರಿ ಆಸ್ಪತ್ರೆ ಹಾಗೂ ರೈಲು ಟಿಕೆಟುಗಳಿಗಾಗಿ ಬಳಸುವುದನ್ನು ನಿಲ್ಲಿಸುವ ಕ್ರಮದ ಬಗ್ಗೆ ಕೈ ಹಾಕಲು ಅದು ನಿರಾಕರಿಸಿದೆ.
ಸರಕಾರದ ನೋಟು ರದ್ದತಿ ನಿರ್ಧಾರದ ಕುರಿತು ಪಂಚ ಸದಸ್ಯ ಪೀಠವು ಅಧಿಕಾರ ಬದ್ಧ ತೀರ್ಪು ನೀಡುವುದಕ್ಕಾಗಿ 9 ಪರಿಶೀಲನಾ ವಿಷಯಗಳನ್ನು ಸುಪ್ರೀಂ ಕೋರ್ಟ್ ರೂಪಿಸಿದೆ.
1. ನ.8ರ ಅಧಿಸೂಚನೆಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ-1934ರ ಸೆ. 26(2), 7, 17, 23, 24, 29 ಹಾಗೂ 42ಕ್ಕೆ ವಿರುದ್ಧವಗಿದೆಯೇ?
2. ಅಧಿಸೂಚನೆ ಸಂವಿಧಾನದ 300(ಎ) ವಿಧಿಯನ್ನು ಉಲ್ಲಂಘಿಸಿದೆಯೇ?
3. ಅಧಿಸೂಚನೆಯು ರಿಸರ್ವ್ ಬ್ಯಾಂಕ್ ಕಾಯ್ದೆಯನ್ವಯ ಸಿಂಧುವೆಂದು ಭಾವಿಸಿದರೂ, ಸಂವಿಧಾನದ 14 ಹಾಗೂ 19 ವಿಧಿಗಳನ್ನು ಉಲ್ಲಂಘಿಸುತ್ತದೆಯೇ.
4. ಬ್ಯಾಂಕ್ ಖಾತೆಗಳಲ್ಲಿ ಠೇವಣಿಯಿರಿಸಿದ ಹಣ ಹಿಂದೆಗೆತಕ್ಕೆ ಮಿತಿ ಹೇರಿಕೆಗೆ ಕಾನೂನು ಆಧಾರವಿಲ್ಲ ಹಾಗೂ ಸಂವಿಧಾನದ 16, 19 ಹಾಗೂ 21ರ ಉಲ್ಲಂಘನೆಯೇ?
5. ಹಿಂದೆಗೆದ ಅಧಿಸೂಚನೆ(ಗಳ) ಜಾರಿಯು ಪ್ರಕ್ರಿಯಾತ್ಮಕ ಭಾರೀ ಅಕಾರಣದ ಬಾಧೆಗೊಳಗಾಗುವುದೇ ಹಾಗೂ ಆ ಮೂಲಕ 14 ಹಾಗೂ 19ನೆ ವಿಧಿಗಳನ್ನು ಉಲ್ಲಂಘಿಸುತ್ತದೆಯೇ? ಹೌದಾದರೆ ಎಲ್ಲಿಯವರೆಗೆ?
6. ಸೆ.26(2) ನೋಟು ರದ್ದತಿಗೆ ಅನುಮತಿ ನೀಡುತ್ತರಾದರೆ, ಅದು ಮಿತಿಮೀರಿದ ಶಾಸನಾತ್ಮಕ ಅಧಿಕಾರ ನೀಡುವ ಮೂಲಕ ಸಂವಿಧಾನವನ್ನು ಉಲ್ಲಂಘಿಸುತ್ತದೆಯೇ?
7. ಸರಕಾರದ ಹಣಕಾಸು ಹಾಗೂ ಆರ್ಥಿಕ ನೀತಿಗೆ ಸಂಬಂಧಿಸಿದ ವಿಷಯಗಳ ನ್ಯಾಯಾಂಗ ಪರಾಮರ್ಶೆಗೆ ಎಷ್ಟು ಅವಕಾಶವಿದೆ?
8. ಈ ವಿಷಯದಲ್ಲಿ ರಾಜಕೀಯ ಪಕ್ಷವೊಂದರ ಅರ್ಜಿಯು, 32ನೆ ವಿಧಿಯನ್ವಯ ಪರಿಶೀಲನಾರ್ಹವೇ?
9. ರದ್ದಾದ ನೋಟುಗಳನ್ನು ಠೇವಣಿ ಪಡೆಯಲು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ಅವಕಾಶ ನೀಡದೆ ತಾರತಮ್ಯ ಮಾಡಲಾಗಿದೆಯೇ? ಎಂಬ 9 ವಿಷಯಗಳನ್ನು ಪಂಚ ಸದಸ್ಯ ಪೀಠದ ಪರಿಶೀಲನೆಗೆ ಒಪ್ಪಿಸಲಾಗಿದೆ.





