ವಿಕಲಚೇತನರ ಹಕ್ಕು ಮಸೂದೆಗೆ ಸಂಸತ್ ಅಂಗೀಕಾರ

ಹೊಸದಿಲ್ಲಿ, ಡಿ.16: ವಿಕಲಚೇತನರ ಬಗ್ಗೆ ಪಕ್ಷಪಾತ ಮಾಡುವವರಿಗೆ ಗರಿಷ್ಠ 5 ಲಕ್ಷ ದಂಡ ಮತ್ತು ಎರಡು ವರ್ಷದ ಜೈಲುಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುವ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರ ದೊರೆತಿದೆ.
ಸಂಸತ್ ಅಧಿವೇಶನದ ಅಂತಿಮ ದಿನವಾದ ಇಂದು ಕಿರು ಅವಧಿಯ ಚರ್ಚೆಯ ಬಳಿಕ ಮಸೂದೆಗೆ ಅಂಗೀಕಾರ ದೊರಕಿತು. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು. ಬುಧವಾರ ರಾಜ್ಯಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ದೊರೆತಿತ್ತು.
ಸಾಮಾಜಿಕ ನ್ಯಾಯ ಸಚಿವ ಥಾವರ್‌ಚಂದ್ ಗೆಹ್ಲೋಟ್ ಅವರು ಮಾತನಾಡಿ, ವಿಕಲಾಂಗರಿಗೆ ವಿಶಿಷ್ಟ ಗುರುತು ಚೀಟಿ ನೀಡುವ ಯೋಜನೆ ಸಿದ್ಧವಾಗುತ್ತಿದೆ .ಈ ಉದ್ದೇಶಿತ ಗುರುತು ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಜೋಡಿಸುವ ಮೂಲಕ ದೇಶದಾದ್ಯಂತದ ವಿಕಲಚೇತನ ವ್ಯಕ್ತಿಗಳು ಸುಲಭವಾಗಿ ಸರಕಾರದ ಯೋಜನೆಗಳ ಸದುಪಯೋಗ ಪಡೆುಕೊಳ್ಳಬಹುದು ಎಂದು ತಿಳಿಸಿದರು.
ವಿಕಲಾಂಗ ವ್ಯಕ್ತಿಗಳಿಗೆ ಅಗತ್ಯವಿರುವ ಅತ್ಯಾಧುನಿಕ ಕೃತಕ ಅಂಗಾಂಗ ಸೌಲಭ್ಯವನ್ನು ಒದಗಿಸಲು ಸರಕಾರವು ಜರ್ಮನ್ ಮತ್ತು ಬ್ರಿಟಿಷ್ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದೆ ಎಂದವರು ತಿಳಿಸಿದರು.
ಮಸೂದೆಯಲ್ಲಿ ವಿಕಲಾಂಗ ವ್ಯಕ್ತಿಗಳಿಗೆ ಶೇ.4ರಷ್ಟು ಮೀಸಲು ಎಂದಿರುವುದನ್ನು ಶೇ.5ಕ್ಕೆ ಏರಿಸಬೇಕು ಎಂದು ಕಾಂಗ್ರೆಸ್ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷಗಳು ತಿದ್ದುಪಡಿಗೆ ಒತ್ತಾಯಿಸಿದಾಗ , ಈ ಪ್ರಸ್ತಾಪವು 121-43 ಮತಗಳ ಅಂತರದಿಂದ ತಿರಸ್ಕೃತಗೊಂಡಿತು. ಈ ಮಹತ್ವದ ಮಸೂದೆಗೆ ಅಂಗೀಕಾರ ನೀಡುವ ಸಂದರ್ಭ ಆಡಳಿತ ಪಕ್ಷ ಮತ್ತು ವಿಪಕ್ಷಗಳು ತಮ್ಮೆಲ್ಲಾ ಭಿನ್ನಾಭಿಪ್ರಾಯ ಮರೆತು ಸರ್ವಾನುಮತದ ತೀರ್ಮಾನಕ್ಕೆ ಬಂದಿರುವುದು ಗಮನಾರ್ಹವಾಗಿದೆ.







