ಫ್ಲಿಪ್ ಕಾರ್ಟ್ ನಲ್ಲಿ 20,000 ರೂ. ಗಿಂತ ಕಡಿಮೆಗೆ ಒನ್ ಪ್ಲಸ್ 3 ಮೊಬೈಲ್ !
ಆದರೆ ಒನ್ ಪ್ಲಸ್ ಕಂಪೆನಿ ಹೇಳುತ್ತಿರುವುದೇ ಬೇರೆ

ಹೊಸದಿಲ್ಲಿ, ಡಿ. 16 : ಶುಕ್ರವಾರ ಒನ್ ಪ್ಲಸ್ ೩ ಸ್ಮಾರ್ಟ್ ಫೋನ್ ನ ಟೀಸರ್ ಒಂದನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಿದ ಫ್ಲಿಫ್ ಕಾರ್ಟ್ ಮುಂಬರುವ ತನ್ನ ' ಬಿಗ್ ಶಾಪಿಂಗ್ ಡೇಸ್ ' ಸೇಲ್ ನಲ್ಲಿ ಇದು 20,000 ರೂ. ಗಿಂತ ಕಡಿಮೆಗೆ ಇದು ಲಭ್ಯ ಎಂದು ಎಂದು ಪ್ರಕಟಣೆ ನೀಡಿತ್ತು. ಇದು ಅಮೇಝನ್ ನಲ್ಲಿ ಒನ್ ಪ್ಲಸ್ 3 ಪ್ರಸಕ್ತ ಅಧಿಕೃತ ಬೆಲೆ 27,999 ರೂ. ಗಿಂತ 8000 ರೂ. ಕಡಿಮೆ !
ಆದರೆ ಇದು ಗ್ರಾಹಕರಿಗಿಂತ ಹೆಚ್ಚು ಒನ್ ಪ್ಲಸ್ ಮೊಬೈಲ್ ಕಂಪೆನಿಗೆ ಅಚ್ಚರಿ ಉಂಟು ಮಾಡಿರುವುದು ವಿಶೇಷ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಒನ್ ಪ್ಲಸ್ ಸಿಇಒ ಕಾರ್ಲ್ ಪಿ ಅಚ್ಚರಿ ವ್ಯಕ್ತಪಡಿಸಿದರು. ಫ್ಲಿಪ್ ಕಾರ್ಟ್ ಸಿಇಒ ಸಚಿನ್ ಬನ್ಸಲ್ ಅವರಿಗೇ ನೇರವಾಗಿ ".@_sachinbansal brother, what's this? We're exclusive with @amazonIN (ಸಚಿನ್ ಬನ್ಸಲ್ , ಬ್ರದರ್ ಏನಿದು ? ನಾವು ಅಮೆಝನ್ ಜೊತೆ ಎಕ್ಸ್ ಕ್ಲುಸಿವ್ ಭಾಗೀದಾರಿಕೆಯಲ್ಲಿದ್ದೇವೆ " ಎಂದು ಕಾರ್ಲ್ ಕೇಳಿದರು. ಆದರೆ ಈ ಟ್ವೀಟ್ ಗೆ ಬನ್ಸಲ್ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.
ಈ ನಡುವೆ ಟ್ವೀಟ್ ಮಾಡಿದ ಒನ್ ಪ್ಲಸ್ ನ ಭಾರತದ ಜನರಲ್ ಮ್ಯಾನೇಜರ್ ವಿಕಾಸ್ ಅಗರ್ವಾಲ್ ಅವರು " ನಿಮಗೆ ಅಧಿಕೃತ ಒನ್ ಪ್ಲಸ್ 3 ಮೊಬೈಲ್ ಬೇಕಿದ್ದರೆ ನೀವು ಅಮೆಝನ್ ಗೆ ಭೇಟಿ ನೀಡಿ " ಎಂದು ಹೇಳುವ ಮೂಲಕ ಫ್ಲಿಪ್ ಕಾರ್ಟ್ ಗೆ ಭಾರೀ ಮುಖಭಂಗ ಉಂಟಾಗಿದೆ.
ಫ್ಲಿಪ್ ಕಾರ್ಟ್ ನ ವೆಬ್ ಸೈಟ್ ನಲ್ಲಿ ಒನ್ ಪ್ಲಸ್ 3 ಮೊಬೈಲ್ ನ ಲಿಸ್ಟಿಂಗ್ ಪೇಜ್ ಕೂಡ ಇದೆ. ಅದರ ಪ್ರಕಾರ ಫ್ಲಿಪ್ ಕಾರ್ಟ್ ಒನ್ ಪ್ಲಸ್ 3 ನ 64 ಜಿಬಿ ಗೋಲ್ಡ್ ವೆರಿಯಂಟ್ ಮೊಬೈಲ್ ಅನ್ನು ಮಾರುತ್ತಿದೆ. ಆದರೆ ಈ ಲಿಸ್ಟಿಂಗ್ ಪೇಜ್ ನಲ್ಲಿ ಮಾತ್ರ ಅದರ ಬೆಲೆ ಅಮೆಝನ್ ನಂತೆ 27,999 ರೂ. ಎಂದು ನಮೂದಿಸಲಾಗಿದೆ.







