ಬಂಟ್ವಾಳದಲ್ಲಿ ಎಂಟು ವರ್ಷಗಳ ಬಳಿಕ ಕರಾವಳಿ ಉತ್ಸವ

ಬಂಟ್ವಾಳ, ಡಿ.16 : ಜಿಲ್ಲೆಯ ಸಾಂಸ್ಕೃತಿಕ ವೈಭವ ಬಿಂಭಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಮಟ್ಟದ ಕರಾವಳಿ ಉತ್ಸವವನ್ನು ಆಚರಿಸಲಾಗುತ್ತಿದ್ದು ಪ್ರತೀ ತಾಲೂಕು ಮಟ್ಟದಲ್ಲೂ ಕರಾವಳಿ ಉತ್ಸವವನ್ನು ಆಚರಿಸಬೇಕೆಂಬ ಉದ್ದೇಶದಿಂದ ಬಂಟ್ವಾಳ ತಾಲೂಕಿನಲ್ಲೂ ಸುಮಾರು ಎಂಟು ವರ್ಷಗಳ ಬಳಿಕ ಕರಾವಳಿ ಉತ್ಸವವನ್ನು ಡಿಸೆಂಬರ್ 19ರಂದು ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಸಂಜೆ 5ರಿಂದ ರಾತ್ರಿ 10ರವರೆಗೆ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ತಿಳಿಸಿದ್ದಾರೆ.
ಶುಕ್ರವಾರ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಧ್ಯಾಹ್ನ 3 ಗಂಟೆಗೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ರಾಜಾ ರಸ್ತೆಯಲ್ಲಿ ವೈಭವ ಪೂರ್ಣವಾದ ಮೆರವಣಿಗೆ ಆರಂಭಗೊಳ್ಳಲಿದ್ದು ಕೈಕಂಬಕ್ಕೆ ತೆರಳಿ ಅಲ್ಲಿಂದ ವಾಪಾಸ್ ಬಂದು ರಂಗೋಲಿ ಸಂಭಾಂಗಣದಲ್ಲಿ ಸಂಪನ್ನಗೊಳ್ಳಲಿದೆ. ದ.ಕ. ಜಿಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.
ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದ್ದು ಈ ಸಂದರ್ಭದಲ್ಲಿ ಹೆಬ್ಬಾವಿನೊಂದಿಗೆ ಸೆಣಸಾಡಿ ಪ್ರಾಣಾಪಾಯದಿಂದ ಪಾರಾದ ಸಜೀಪ ಮೂಡಾ ಶಾಲಾ ಬಾಲಕ ವೈಶಾಕ್‌ನನ್ನು ಸನ್ಮಾನಿಸಲಾಗುವುದು.
ಇದೇ ವೇಳೆ ಬಂಟ್ವಾಳದ ಇತಿಹಾಸ, ಸಾಂಸ್ಕೃತಿಕ ಹಿನ್ನೆಲೆಯ ಕುರಿತು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಸಚಿವ ಯು.ಟಿ.ಖಾದರ್, ಸಂಸದ ನಳೀನ್ ಕುಮಾರ್ ಕಟೀಲ್, ವಿಪ ಸದಸ್ಯರು ಹಾಗೂ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಭಾಗವಹಿಸಲಿದ್ದಾರೆ. ಈಗಾಗಲೇ ಕರಾವಳಿ ಉತ್ಸಕ್ಕೆ ಸಂಬಂಧಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಂದಿನ ವರ್ಷದಿಂದ ಇನ್ನಷ್ಟು ಅದ್ದೂರಿ ಹಾಗೂ ಅರ್ಥ ಪೂರ್ಣವಾಗಿ ನಡೆಸಲು ಚಿಂತಿಸಲಾಗಿದೆ ಎಂದ ಸಚಿವರು, ಬಿ.ಸಿ.ರೋಡಿನಲ್ಲಿ ರಂಗ ಮಂದಿರ ಅಥವಾ ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗಲಿದೆ ಎಂದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಮಂಗಳೂರು ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್ ಮಾತನಾಡಿ, ಕರಾವಳಿ ಉತ್ಸವದ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಿದ ಬಳಿಕ ಭರತನಾಟ್ಯ, ಜಾನಪದ ನೃತ್ಯ, ಗಾಯನ, ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ಅಂಗನವಾಡಿ ಕಾರ್ಯಕರ್ತೆಯರಿಂದ ನೃತ್ಯ, ಹಾಸ್ಯ ತುಣುಕು, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಜಾನಪದ ನೃತ್ಯಗಳು, ಹಾಸ್ಯಲೋಕ ನಗೆಹಬ್ಬ ನಡೆಯಲಿದೆ ಎಂದು ತಿಳಿಸಿದ ಅವರು ಉತ್ಸವದ ಯಶಸ್ವಿಗಾಗಿ ಏಳು ಸಮಿತಿಗಳನ್ನು ರಚಿಸಲಾಗಿದೆ. ಅಂದು ವಿವಿಧ ಕಾರ್ಯಕ್ರಮದ ನಿಮಿತ್ತ ಬಂಟ್ವಾಳ ಪರಿಸರದ ಎಲ್ಲಾ ಸಭಾಂಗಣಗಳು ಮೀಸಲಾಗಿರುವುದರಿಂದ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಕರಾವಳಿ ಉತ್ಸವ ಮೆರಣಿಗೆ ಸಮಿತಿ ಸಂಚಾಲಕ ಸುದರ್ಶನ್ ಜೈನ್, ತಹಶೀಲ್ದಾರ್‌ಪುರಂದರಹೆಗ್ಡೆ,ತಾಪಂಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಉಪಸ್ಥಿತರಿದ್ದರು.







