ಗುಡಿಸಲು ತೆರವು: ತೀವ್ರಗೊಂಡ ಪ್ರತಿಭಟನೆ
ನಟ ಚೇತನ್ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿ
.jpg)
ಸಿ್ದಾಪುರ, ಡಿ. 16: ಮಾಲ್ದಾರೆ ಸಮೀಪದ ದಿಡ್ಡಳ್ಳಿಯಲ್ಲಿ ಗಿರಿಜನರ ಗುಡಿಸಲು ತೆರವು ಗೊಳಿಸಿದ ಬಳಿಕ ಹಾಡಿಯಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಕನ್ನಡ ಚಿತ್ರರಂಗದ ನಾಯನಟ ಚೇತನ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ನಟ ಚೇತನ್ ಅವರು, ಬೆಂಗಳೂರಿನಲ್ಲಿ ಶ್ರೀಮಂತರು, ರಾಜಕಾರಣಿಗಳು ಹಾಗೂ ಚಿತ್ರನಟರು ರಾಜ ಕಾಲುವೆ ಒತ್ತುವರಿ ಮಾಡಿದ್ದು, ಅವರಿಗೆ ನೋಟಿಸ್ ನೀಡಿ ಅವರ ಕಟ್ಟಡವನ್ನು ತೆರವುಗೊಳಿಸದೆ, ಕಾಡನ್ನು ಪ್ರೀತಿಸಿ, ರಕ್ಷಿಸಿಕೊಂಡಿರುವ ಆದಿವಾಸಿಗಳನ್ನು ಅರಣ್ಯದಿಂದ ತೆರವುಗೊಳಿಸಿರುವ ಘಟನೆಯನ್ನು ಪ್ರಶ್ನಿಸಿದರು. ಅಹಿಂದ ಹೆಸರಿನಲ್ಲಿ ಮತ ಪಡೆದು ಅಧಿಕಾರಕ್ಕೆ ಬಂದಿರುವ ಸರಕಾರಕ್ಕೆ ಬಡವರ, ಹಿಂದುಳಿದ ವರ್ಗದ, ಆದಿವಾಸಿಗಳ ಬಗ್ಗೆ ಕಾಳಜಿ ಇಲ್ಲದಾಗಿದೆ ಎಂದರು. ತಾನೊಬ್ಬ ನಟನಾಗಿ ಪ್ರತಿಭಟನೆಗೆ ಬಂದಿಲ್ಲ.
ಬಡವರ ಹಾಗೂ ಆದಿವಾಸಿಗಳ ಮೇಲಿನ ಕಾಳಜಿಯಿಂದ ಹೋರಾಟಕ್ಕೆ ಬಂದಿರುವುದಾಗಿ ಅವರು ತಿಳಿಸಿದರು. ಚಿಂತಕರಾದ ಡಾ.ಕೃಷ್ಣ ುೂರ್ತಿ ಮಾತನಾಡಿ, ಸಮಾ ಜದಲ್ಲಿ ಶ್ರೀಮಂತರಿಗೆ ರಕ್ಷಣೆಯಿದ್ದು, ಬಡವರಿಗೆ ರಕ್ಷಣೆ ಇಲ್ಲದಂತಾಗಿದೆ. ಬಡವರು ತಮ್ಮ ರಕ್ಷಣೆ ಹಾಗೂ ಹಕ್ಕಿಗಾಗಿ ಟೊಂಕ ಕಟ್ಟಿಕೊಂಡು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ನೆಲ, ಜಲಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಪ್ರತಿಯೊಬ್ಬ ಮನುಷ್ಯನ ಜೀವಕ್ಕೆ ಬೆಲೆ ಇದ್ದು, ಪ್ರಾಣಿಗಳೊಂದಿಗೆ ಹೊಂದಾಣಿಕೆಯಿಂದ ವಾಸವಾಗಿದ್ದ ಆದಿವಾಸಿಗಳಿಗೆ ಮನುಷ್ಯ ಎಂಬ ಪ್ರಾಣಿಯಿಂದ ತೊಂದರೆಯಾಗಿದೆ ಎಂದರು. ಬಂಡೀಪುರದಲ್ಲಿ ಸಾಕಷ್ಟು ವರ್ಷದಿಂದ ಆದಿವಾಸಿಗಳು ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದು, ಅವರನ್ನು ಈವರೆಗೂ ಒಕ್ಕಲೆಬ್ಬಿಸಲು ಸಾಧ್ಯವಾಗಲಿಲ್ಲ.
ಆದಿವಾಸಿಗಳು ಸಂಘಟಿತರಾಗಿ ಹೋರಾಟದ ಮೂಲಕ ತಮ್ಮ ಹಕ್ಕನ್ನು ಪಡೆಯಬೇಕು ಎಂದರು. ಕರ್ನಾಟಕ ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಜೋಗನಳ್ಳಿ ಗುರುಮೂರ್ತಿ ಮಾತನಾಡಿ, ಪೊಲೀಸರು ಬೆತ್ತವನ್ನು ತಮ್ಮ ಆತ್ಮರಕ್ಷಣೆಗೆ ಬಳಸಿಕೊಳ್ಳಬೇಕಾಗಿದ್ದು, ಆದಿವಾಸಿಗಳ ಮೇಲೆ ಲಾಠಿ ಪ್ರಹಾರ ಮಾ ಡಿರುವುದು ಖಂಡನೀಯ. ಗಿರಿಜನರ ಮೇಲೆ ದೌರ್ಜನ್ಯ ನಡೆಸಿರುವುದನ್ನು ವಿರೋಧಿಸಿ, ವಿವಿಧ ಸಂಘಟನೆಯನ್ನು ಒಗ್ಗೂಡಿಸಿ ಹೋರಾಟ ಮಾಡಲಾಗುವುದು ಎಂದರು. ಗಿರಿಜನ ಮುಖಂಡ ಜೇನುಕುರುಬರ ಅಪ್ಪಾಜಿ ಮಾತನಾಡಿ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗುಡಿಸಲು ತೆರವುಗೊಳಿಸುವುದಿಲ್ಲ ಎಂದು ಹೇಳಿದ್ದು, ಬಳಿಕ ಏಕಾಏಕಿ ಅರಣ್ಯ ಇಲಾಖೆಗೆ ಆದೇಶ ನೀಡಿ ಗುಡಿಸಲು ನೆಲಸಮ ಮಾಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಗೆ ಕೋಟಿಗಟ್ಟಲೆ ಅನುದಾನ ಬರುತ್ತಿದ್ದರೂ, ಆದಿವಾಸಿಗಳು ಹಾಗೂ ಗಿರಿಜನರಿಗೆ ನೀಡದೆ ಹಣ ದುರುಪಯೋಗ ಆಗುತ್ತಿದೆ. ಹಾಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲವೆಂದು ಆರೋಪಿಸಿದ ಅವರು, ಏನೇ ಒತ್ತಡಗಳಿದ್ದರೂ ಈ ಜಾಗದಿಂದ ಕದಲುವುದಿಲ್ಲ ಎಂದರು. ಈ ಸಂದರ್ಭ ಭೂಮಿ ಮತ್ತು ವಸತಿ ಹೋರಾಟ ಸಮಿತಿ ಜಿಲ್ಲಾ ಸದಸ್ಯ ಡಿ.ಎಸ್ ನಿರ್ವಾಹಣಪ್ಪ, ಜನಶಕ್ತಿ ಸಂಘಟನೆಯ ಮಲ್ಲಿಗೆ, ಸಿದ್ದರಾಜು, ಮಾನವ ಹಕ್ಕು ಕಾರ್ಯಕರ್ತರಾದ ಎಸ್.ಆರ್. ವಸಂತ್, ಜಿಪಂ ಮಾಜಿ ಉಪಾಧ್ಯಕ್ಷೆ ಎಚ್.ಎಂ ಕಾವೇರಿ,ಕೊಡಗು ಜಿಲ್ಲಾ ರೈತ ಸಂಘದ ಎಸ್.ಕೆ ಮಂಜು, ರೈತ ಸಂಘದ ಕಂದಗಲ್ ಶ್ರೀನಿವಾಸ್, ಕಾರ್ಮಿಕ ಮುಖಂಡ ಸಣ್ಣಪ್ಪ, ಗಿರಿಜನ ಮುಖಂಡೆ ಜೇನುಕುರುಬರ ಮುತ್ತಮ್ಮ, ನೇಮಿಚಂದ್ ಹಾಜರಿದ್ದರು.
ಮಾಜಿ ಜಿಪಂ ಅಧ್ಯಕ್ಷ ರಾಜಾರಾವ್‌ರಿಂದ ನಿರಾಶ್ರಿತರಿಗೆ 5 ಕ್ವಿಂಟಾಲ್ ಅಕ್ಕಿ ವಿತರಣೆ ಸಿದ್ದಾಪುರ: ಮಾಲ್ದಾರೆ ಸಮೀಪ ತಟ್ಟಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನಿರಾಶ್ರಿತ ಗಿರಿಜನರಿಗೆ ಜಿಪಂ ಮಾಜಿ ಅಧ್ಯಕ್ಷ ರಾಜಾರಾವ್ 5 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಿದರು. ದೇವಮಚ್ಚಿ ಅರಣ್ಯ ವ್ಯಾಪ್ತಿಯ ದಿಡ್ಡಳ್ಳಿ ಅರಣ್ಯದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ 577 ಕುಟುಂಬಗಳ ಗುಡಿಸಲುಗಳನ್ನು ತೆರವುಗೊಳಿಸಿದ ಬಳಿಕ ಸಮೀಪದ ಆಶ್ರಮ ಶಾಲೆಯ ಮುಂಭಾಗ ಬೀಡುಬಿಟ್ಟಿರುವ ಗಿರಿಜನರನ್ನು ಭೇಟಿ ಮಾಡಿ ಅಕ್ಕಿಯನ್ನು ವಿತರಿಸಿದ್ದಾರೆ.
ಬಳಿಕ ಮಾತನಾಡಿದ ಅವರು. ಆದಿವಾಸಿಗಳ ನೋವು ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೊತ್ತಿಲ್ಲ. ಸೌಜನ್ಯಕ್ಕಾದರೂ ಹಾಡಿಗೆ ಭೇಟಿ ನೀಡಬೆೇಕಿತ್ತು. ಸರಕಾರ ಅದಿವಾಸಿಗಳ ಬದುಕನ್ನು ಕಿತ್ತುಕೊಂಡಿದೆ ಎಂದು ಅರೋಪಿಸಿದರು. ಕೊರೆಯುವ ಚಳಿಯಲ್ಲಿ ಹೊದಿಕೆಗಳೂ ಇಲ್ಲದೆ ವಾಸವಾಗಿರುವ ಗಿರಿಜನರ ಸ್ಥ್ಥಿತಿ ಶೋಚನೀಯವಾಗಿದೆ. ಸರಕಾರ ಅಥವಾ ಅಧಿಕಾರಿಗಳು ಕಣ್ಣಿದ್ದರೂ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಆಹಾರವಿಲ್ಲದೆ ಮಕ್ಕಳು ಮಹಿಳೆಯರು ಪರದಾಡುವುದನ್ನು ಕಂಡು ಅಕ್ಕಿ ವಿತರಿಸಿದ್ದೇನೆ ಎಂದರು. ಬಡಪಾಯಿಗಳು ಪುಟ್ಟ ಗುಡಿಸಲು ನಿರ್ಮಿಸಿರುವಾಗ ಏಕಾಏಕಿ ಜೆೆ.ಸಿ.ಬಿ ಮೂಲಕ ಗುಡಿಸಲುಗಳನ್ನು ಕೆಡವಿದ್ದಾರೆ. ಆರ್‌ಟಿಸಿ ಯಲ್ಲಿ ಅರಣ್ಯ ಪೈಸಾರಿ ಎಂದು ನಮೂದಿಸಾಲಾಗಿದ್ದು, ಇದೇ ಜಾಗದಲ್ಲಿ ಗಿರಿಜನರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.
ಗಿರಿಜನರಿಗೆ ಶೀಘ್ರ ಪುನರ್ ವಸತಿ ಕಲ್ಪಿಸಲು ಪ್ರಯತ್ನ: ಡಿಸಿ
ಮಡಿಕೇರಿ: ದಿಡ್ಡಳ್ಳಿಯಲ್ಲಿ ನಿರಾಶ್ರಿತರಾಗಿರುವ ಗಿರಿಜನರಿಗೆ ಶೀಘ್ರ ಪುನರ್ ವಸತಿ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಭರವಸೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆನ್ನಯ್ಯನ ಕೋಟೆ ಗ್ರಾಪಂ ವ್ಯಾಪ್ತಿಯ ದಿಡ್ಡಳ್ಳಿಯಲ್ಲಿನ ಮೀಸಲು ಅರಣ್ಯದಲ್ಲಿ ಗಿರಿಜನರು ಟೆಂಟ್ ಹಾಕಿಕೊಂಡಿದ್ದಾರೆ. ಇವರಿಗೆ ಪುನರ್ ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ವಸತಿ ಹಾಗೂ ನಿವೇಶನ ರಹಿತರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂಬುದು ಜಿಲ್ಲಾಡಳಿತದ ಆಶಯವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಮೂಲ ನಿವಾಸಿ ಗಿರಿಜನರು ಸಹಕರಿಸಬೇಕೆಂದು ತಿಳಿಸಿದರು.
ಗಿರಿಜನರು ವಾಸಮಾಡುವ ಗ್ರಾಪಂ ವ್ಯಾಪ್ತಿಯಲ್ಲಿಯೇ ಪುನರ್ ವಸತಿ ಕಲ್ಪಿಸಲು ಪ್ರಯತ್ನಿಸಲಾಗುವುದು. ಜೊತೆಗೆ ಗಿರಿಜನರ ಕಲ್ಯಾಣ ಇಲಾಖೆಯಿಂದ ಎಲ್ಲ್ಲ ರೀತಿಯ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಜಿಲ್ಲೆಯ ಹಲವು ಭಾಗಗಳಲ್ಲಿ ಭೂಮಿಯನ್ನು ಗುರುತಿಸಲಾಗಿದ್ದು, ಅಂತಹ ಕಡೆಗಳಲ್ಲಿ ಪುನರ್ ವಸತಿ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುವರ್ಣ ಸೇನ್ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ಸಮುದಾಯ ಹಕ್ಕುಗಳನ್ನು ನೀಡಬಹುದಾಗಿದೆ. ಆದರೆ ಮೀಸಲು ಅರಣ್ಯ ಪ್ರದೇಶದಲ್ಲಿ ವಸತಿ ನಿರ್ಮಾಣಕ್ಕೆ ಅವಕಾಶವಿಲ್ಲ. ದಿಡ್ಡಳ್ಳಿಯಲ್ಲಿ ಟೆಂಟ್ ನಿರ್ಮಿಸಿಕೊಂಡಿರುವ ಗಿರಿಜನರಿಗೆ ಭೂಮಿ ಲಭ್ಯವಿರುವ ಕಡೆ ಪುನರ್ ವಸತಿ ಕಲ್ಪಿಸಲು ಜಿಲ್ಲಾಡಳಿತದೊಂದಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪವಿಭಾಗಾಧಿಕಾರಿ ಡಾ.ನಂಜುಂಡೇಗೌಡ ಮತ್ತಿತರರು ಹಾಜರಿದ್ದರು.
ದಿಡ್ಡಳ್ಳಿಯಲ್ಲಿ ಗಿರಿಜನರ ಹಾದಿ ತಪ್ಪಿಸಲಾಗಿದೆ: ಆರೋಪ
ಮಡಿಕೇರಿ: ಅರಣ್ಯ ಪ್ರದೇಶದಲ್ಲಿ ಭೂಮಿ ಮಂಜೂರಾಗುವುದಿಲ್ಲ ಎನ್ನುವ ಮಾಹಿತಿಯಿದ್ದರೂ ಚೆನ್ನಯ್ಯನ ಕೋಟೆ ಗ್ರಾಪಂ ವ್ಯಾಪ್ತಿಯ ದಿಡ್ಡಳ್ಳಿ ಮೀಸಲು ಅರಣ್ಯ ಪ್ರದೇಶಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಅಮಾಯಕರನ್ನು ಕರೆ ತಂದು ಗುಡಿಸಲು ನಿರ್ಮಿಸಲು ಕುಮ್ಮಕ್ಕು ನೀಡುವ ಮೂಲಕ ಗಿರಿಜನರ ಹಾದಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡಿದ್ದಾರೆ ಎಂದು ಕರ್ನಾಟಕ ಆದಿವಾಸಿ ಬುಡಕಟ್ಟು ಜನರ ಹಕ್ಕುಗಳ ಸಮನ್ವಯ ಸಮಿತಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ವೈ.ಕೆ. ಗಣೇಶ್, ಜಿಲ್ಲೆಯಲ್ಲಿ ಸುಮಾರು 56 ಸಾವಿರ ಆದಿವಾಸಿಗಳಿದ್ದು, ಶೇ.45 ರಷ್ಟು ಮಂದಿಗೆ ಹಲವಾರು ವರ್ಷಗಳಿಂದ ನೆಲೆ ನಿಂತಿರುವ ಮೂಲ ಜಾಗದ ಹಕ್ಕುಪತ್ರವನ್ನೇ ಇಲ್ಲಿಯವರೆಗೆ ನೀಡಿಲ್ಲ. ಆದರೆ ಗ್ರಾಪಂ ಸದಸ್ಯರಾಗಿರುವ ಬಿಜೆಪಿಯ ಅಪ್ಪಾಜಿ ಹಾಗೂ ಗಿರಿಜನ ಮುಖಂಡರೆಂದು ಹೇಳಿಕೊಳ್ಳುತ್ತಿರುವ ಮುತ್ತಮ್ಮ ಅವರು ಅರಣ್ಯ ಪ್ರದೇಶಕ್ಕೆ ಅಮಾಯಕರನ್ನು ಕರೆ ತಂದು ಹಾದಿ ತಪ್ಪಿಸಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕರಾದ ರವಿ ಹಾಗೂ ಗುರುರಾಜ್ ಉಪಸ್ಥಿತರಿದ್ದರು.







