ಆಶ್ರಯ ನಿವೇಶನ ವಿತರಣೆಯಲ್ಲಿ ಪಾರದರ್ಶಕತೆ: ಶಾಸಕರ ಭರವಸೆ
ಶಿವಮೊಗ್ಗ,ಡಿ.16: ನಗರದ ಹೊರವಲಯ ಗೋಪಿಶೆಟ್ಟಿಕೊಪ್ಪ ಹಾಗೂ ಗೋವಿಂದಪುರಗಳಲ್ಲಿ ಆಶ್ರಯ ಯೋಜನೆಯಡಿ 3,300 ನಿವೇಶನಗಳು ಹಂಚಿಕೆಗೆ ಲಭ್ಯವಿದ್ದು, ಆಶ್ರಯ ಸಮಿತಿಯ ಮೂಲಕ ಪಾರದರ್ಶಕವಾಗಿ ನಿವೇಶನಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ರಯ ಸಮಿತಿ ಅಧ್ಯಕ್ಷರೂ ಆದ ಾಸಕ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದ್ದಾರೆ. ಶುಕ್ರವಾರ ನಗರದ ನೆಹರೂ ರಸ್ತೆಯಲ್ಲಿರುವ ಶಾಸಕರ ಕಚೇರಿಯ ಸಂಕೀರ್ಣದಲ್ಲಿ ಆಶ್ರಯ ಸಮಿತಿ ಕಾರ್ಯಾಲಯ ಉದ್ಘಾಟಿಸಿ ನಂತರ ಅವರು ಮಾತನಾಡಿದರು. ಸ್ಲಂ ನಿವಾಸಿಗಳಿಗೆ ಮತ್ತು ಈಗಾಗಲೇ 94 ಸಿಸಿ ಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಶೀಘ್ರದಲ್ಲಿ ಮಾಲಕತ್ವ ದೊರೆಯಲಿದ್ದು, ಅವರನ್ನು ಬಿಟ್ಟು ಈಗಾಗಲೇ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಆಶ್ರಯ ನಿವೇಶನಗಳನ್ನು ಪಾರದರ್ಶಕವಾಗಿ ವಿತರಿಸಲಾಗುವುದು ಎಂದರು.
ಸಮಿತಿ ಕಾರ್ಯದರ್ಶಿಯಾಗಿ ಪಾಲಿಕೆ ಆಯುಕ್ತರು ಇರುವುದರಿಂದ ಶಾಸಕರ ಕಚೇರಿಯ ಬಳಿ ಆಶ್ರಯ ಸಮಿತಿ ಕಚೇರಿ ಇದ್ದರೆ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಪಾಲಿಕೆ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಆಶ್ರಯ ನಿವೇಶನಗಳಿಗೆ ಸಂಬಂಧಿಸಿದ ಎಲ್ಲ ಕಾರ್ಯಗಳು ಇಲ್ಲಿಂದಲೇ ನಡೆಯಲಿದೆ ಎಂದು ತಿಳಿಸಿದರು. ಆಶ್ರಯ ಸಮಿತಿ ಸದಸ್ಯರಾದ ಪಿ. ಪ್ರಕಾಶ್, ಶಿವನಂದಪ್ಪ, ರುಕ್ಮಿಣಿ ವೇದವ್ಯಾಸ್, ಆಯುಕ್ತೆ ತುಷಾರಮಣಿ, ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ, ರಾಜಶೇಖರ್, ಸುನೀತಾ ಅಣ್ಣಪ್ಪ, ಸುರೇಖಾ ಮುರುಳೀಧರ್ ಮೊದಲಾದವರು ಇದ್ದರು.







