ಸಾರ್ವಜನಿಕ ತಾಣದಲ್ಲಿ ಹರಿದಾಡಿದ ಫೋಟೊ: ಎಸ್ಪಿ ಅಣ್ಣಾಮಲೈ ಸ್ಪಷ್ಟನೆ

ಚಿಕ್ಕಮಗಳೂರು, ಡಿ.16: ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರು ದಕ್ಷ ಮತ್ತು ಪ್ರಾಮಾಣಿಕತೆ ಮೂಲಕ ಮನೆ ಮಾತಾಗುತ್ತಿದ್ದಾರೆ.
ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿರುವ ಕೆಲವರ ಮನಸ್ಥಿತಿಯು ಬಗ್ಗೆ, ಎಸ್ಪಿಅಣ್ಣಾಮಲೈ ಪ್ರಕಟನೆ ಮೂಲಕ ಸಾರ್ವಜನಿಕ ತಿಳುವಳಿಕೆ ನೀಡಿದ್ದಾರೆ. ‘ಸಾರ್ವಜನಿಕರು ನನ್ನ ಜೊತೆ ಬಹಳಷ್ಟು ಪ್ರಸಂಗಗಳಲ್ಲಿ ತಮ್ಮ ಮೊಬೈಲ್ ಫೋನ್ ಮತ್ತು ಕ್ಯಾಮರಾಗಳಿಂದ ಫೋಟೊ ಹಾಗೂ ಸೆಲ್ಫಿ ಗಳನ್ನು ತೆಗೆದುಕೊಳ್ಳುತ್ತಾರೆ. ಸಾರ್ವಜನಿಕರ ಖುಷಿಗೋಸ್ಕರ ಹಾಗೂ ಸರಕಾರಿ ನೌಕರರಾಗಿ ಸಾರ್ವಜನಿಕರ ಕೋರಿಕೆಯನ್ನು ಸ್ಪಂದಿಸುವ ಸಲುವಾಗಿ ಯಾವುದೇ ಭೇದಭಾವವನ್ನು ನೋಡದೇ ಅವರ ಕೋರಿಕೆಗೆ ನಾನು ಸ್ಪಂದಿಸುತ್ತಿದ್ದೇನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆದರೆ, ಕೆಲವು ಸಾರ್ವಜನಿಕರು ತನ್ನ ಜೊತೆ ತೆಗೆದುಕೊಂಡ ಫೋಟೊ-ಸೆಲ್ಫಿಗಳನ್ನು ಫೇಸ್‌ಬುಕ್ ಅಥವಾ ವಾಟ್ಸ್‌ಆ್ಯಪ್‌ನಲ್ಲಿ ವ್ಯತಿರಿಕ್ತವಾಗಿ ರಾಜಕೀಯ ಅಥವಾ ಒಂದು ಕೋಮಿನ ಜನರ ಪರವಾಗಿರುವ ರೀತಿಯಲ್ಲಿ ಬಿಂಬಿಸಿ ವ್ಯತಿರಿಕ್ತವಾಗಿ ಹಾಕುತ್ತಿರುವುದು ತನ್ನ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿದ್ದಾರೆ.
‘ಎಲ್ಲ ಸಾರ್ವಜನಿಕರಲ್ಲಿ ಕೋರಿ ಕೊಳ್ಳುವುದೇನೆಂದರೆ, ನನ್ನ ಜೊತೆ ತೆಗೆದುಕೊಂಡ ಫೋಟೊ/ಸೆಲ್ಫಿಗಳನ್ನು ಯಾವುದೇ ವ್ಯತಿರಿಕ್ತ ಕಾರಣಗಳಿಗೆ ಬಳಸಿಕೊಳ್ಳಬಾರದೆಂದು ಕೋರುತ್ತೇನೆ. ನಾನು ಸಾರ್ವಜನಿಕರ ನೌಕರರನಾಗಿದ್ದು, ಯಾವುದೇ ಧರ್ಮ, ಜಾತಿ, ರಾಜಕೀಯ ಪಕ್ಷ ಅಥವಾ ಯಾವುದೇ ರೀತಿಯ ಭೇದಭಾವವಿಲ್ಲದೇ ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತೇನೆ’ ಎಂಬುದಾಗಿ ಎಲ್ಲರ ಗಮನಕ್ಕೆ ತಂದಿರುವುದಾಗಿ ಅವರು ಪ್ರಕಟನೆೆಯಲ್ಲಿ ಸ್ಪಷ್ಟಪಡಿಸಿದ್ದಾರೆ.







