"ನನಗೆ ಭಿಕ್ಷೆ ಬೇಡ, ನನ್ನ ದುಡ್ಡು ಕೊಟ್ಟುಬಿಡಿ" : ಪಾಕ್ ವಿರುದ್ಧ ಹೋರಾಡಿದ ನಿವೃತ್ತ ಯೋಧನ ಅಳಲು

ಮುಂಬೈ, ಡಿ.16: ಬ್ಯಾಂಕಿನಿಂದ ಹಣ ಪಡೆಯಲು ಗುರ್ಗಾಂವ್‌ನ ಬ್ಯಾಂಕೊಂದರ ಎದುರು ಮಾರುದ್ದದ ಸರದಿ ಸಾಲಿನಲ್ಲಿ ನಿಂತುಕೊಂಡಿದ್ದ ವೃದ್ಧನೋರ್ವ, ಹಣ ಪಡೆಯಲಾಗದೆ ಅಳುತ್ತಿದ್ದ ಚಿತ್ರ ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಈತನ ಮನೆಗೆ ಭೇಟಿ ನೀಡಿದ ಮಿತ್ರರು, ಸಂಬಂಧಿಕರು ಹಣಕಾಸಿನ ನೆರವು ನೀಡುವುದಾಗಿ ತಿಳಿಸಿದ್ದರು.
ಆದರೆ ಈ ಸ್ವಾಭಿಮಾನಿ ವೃದ್ಧ ಅವೆಲ್ಲವನ್ನೂ ಸಾರಾಸಗಟಾಗಿ ನಿರಾಕರಿಸಿದ್ದು, ನನಗೆ ಪಿಂಚಣಿ ಬರುತ್ತಿದೆ. ಇತರರ ಹಣದ ಅಗತ್ಯವಿಲ್ಲ . ನನ್ನ ಹಣ ನನಗೆ ಸಿಗುವಂತೆ ಮಾಡಿ. ಅಷ್ಟು ಸಾಕು ಎಂದು ಹೇಳಿದ್ದಾನೆ. ನಿವೃತ್ತ ಯೋಧನಾಗಿರುವ ಈ ವೃದ್ಧನ ಹೆಸರು ನಂದಲಾಲ್. 1971ರ ಭಾರತ-ಪಾಕ್ ಯುದ್ದದ ವೇಳೆ ಈತ ಸೈನ್ಯದಲ್ಲಿದ್ದ . ಸೇನೆಯಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ನಂದಲಾಲ್ 1991ರಲ್ಲಿ ನಿವೃತ್ತನಾಗಿದ್ದ. ದೇಶ ವಿಭಜನೆಯ ಸಂದರ್ಭ ನಂದಲಾಲ್ ಪಾಕಿಸ್ತಾನದಿಂದ ಮುಂಬೈಗೆ ಸ್ಥಳಾಂತರಗೊಂಡಿದ್ದ. ಈತನ ಪತ್ನಿ ಸುಮಾರು 30 ವರ್ಷಗಳ ಹಿಂದೆ ಮೃತಪಟ್ಟಿದ್ದಾಳೆ.
ತನಗೆ ಬರಬೇಕಿದ್ದ ಪಿಂಚಣಿಯ ಮೊತ್ತವನ್ನು ಪಡೆಯಲು ಈತ ಬುಧವಾರ ಗುರೆಗಾಂವ್‌ನ ಬ್ಯಾಂಕೊಂದರ ಹೊರಗೆ ಕ್ಯೂ ನಿಂತಿದ್ದ. ಕ್ಯೂ ಅದಾಗಲೇ ಸಾಕಷ್ಟು ಉದ್ದ ಬೆಳೆದಿತ್ತು. ಈ ಸಂದರ್ಭ ಯಾವುದೋ ಕಾರಣಕ್ಕೆ ಜಾಗ ಬಿಟ್ಟು ಹೊರ ಹೋಗಿದ್ದ ನಂದಲಾಲ್, ವಾಪಾಸು ಬಂದಾಗ ಕ್ಯೂ ಇನ್ನಷ್ಟು ಬೆಳೆದಿತ್ತು. ತನಗೆ ಇವತ್ತು ಕೂಡಾ ಹಣ ದೊರಕದು ಎಂಬ ಹತಾಶೆಯಿಂದ ನಂದಲಾಲ್ ಬ್ಯಾಂಕ್‌ನ ಹೊರಗೆ ಕಣ್ಣೀರಿಟ್ಟಿದ್ದ. ಈ ಬಗ್ಗೆ ಸುದ್ದಿ ಪ್ರಸಾರ ಆಗುತ್ತಿದ್ದಂತೆಯೇ ಈತನ ಮನೆಗೆ ಹಲವಾರು ಮಂದಿ ಆಗಮಿಸಿ ಹಣಕಾಸಿನ ನೆರವು ನೀಡುವುದಾಗಿ ತಿಳಿಸಿದ್ದರು.
ಲಂಡನ್‌ನಿಂದ ಮಿತ್ರನೋರ್ವ ನಂದಲಾಲ್‌ನ ಬಗ್ಗೆ ಪ್ರಕಟವಾದ ಸುದ್ದಿಯನ್ನು ಈಮೇಲ್ ಮೂಲಕ ತಿಳಿಸಿದಾಗ ನಾನು ನೆರವು ನೀಡಲು ಮುಂದಾದೆ. ಆದರೆ ಆತ ನಿರಾಕರಿಸಿದ ಎಂದು ನಿವೃತ್ತ ಸೇನಾಧಿಕಾರಿ ಅಜಿತ್ ಸಿಂಗ್ ರಾಣಾ ತಿಳಿಸಿದ್ದಾರೆ. ಇದೀಗ ಬ್ಯಾಂಕ್ ಆತನಿಗೆ ಹಣ ಪಾವತಿಸಿದೆ ಎಂದು ಅವರು ತಿಳಿಸಿದ್ದಾರೆ.
ನಂದಾಲಾಲ್‌ಗೆ 10 ಸಾವಿರ ಮತ್ತು 5 ಸಾವಿರ ರೂ. ಪಿಂಚಣಿ ಮೊತ್ತವನ್ನು ಪಾವತಿಸಲಾಗಿದೆ ಎಂದು ಬ್ಯಾಂಕ್‌ನ ಮ್ಯಾನೇಜರ್ ತಿಳಿಸಿದ್ದಾರೆ.







