Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕಾಡಿನ ಮಕ್ಕಳಿಗೆ ಅನ್ಯಾಯ

ಕಾಡಿನ ಮಕ್ಕಳಿಗೆ ಅನ್ಯಾಯ

ವಾರ್ತಾಭಾರತಿವಾರ್ತಾಭಾರತಿ16 Dec 2016 11:39 PM IST
share

ಕಾಡಿನ ಜೊತೆಗೆ ಆದಿವಾಸಿಗಳಿಗಿರುವ ತಾಯಿಬೇರಿನ ಸಂಬಂಧವನ್ನು ಕತ್ತರಿಸಲು ಆಳುವವರು ನಡೆಸುತ್ತಿರುವ ಕಾರ್ಯಾಚರಣೆ ಇಂದು ನಿನ್ನೆಯದಲ್ಲ. ಕಾಡನ್ನು ಹೊರತು ಪಡಿಸಿ ಬದುಕುವುದೇ ಗೊತ್ತಿಲ್ಲದ ಈ ಜನರನ್ನು ಅಲ್ಲಿಂದ ಒದ್ದೋಡಿಸಿ ಪರಿಹಾರದ ಹೆಸರಿನಲ್ಲಿ ಬಂಜರು ಭೂಮಿಯನ್ನು ಕೊಟ್ಟು ಅಕ್ಷರಶಃ ಅವರನ್ನು ಬೀದಿ ಪಾಲು ಮಾಡಿದ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಸರಕಾರದ ಈ ಬಲವಂತದ ಕಾರ್ಯಾಚರಣೆ ಈಶಾನ್ಯ ಭಾರತದಲ್ಲಿ ಉಗ್ರವಾದವನ್ನು ಹುಟ್ಟಿಸಿ ಹಾಕಿರುವುದು ಇತಿಹಾಸ. ಆದಿವಾಸಿಗಳನ್ನು ಮನುಷ್ಯರಂತೆ ಕಾಣದೆ ಅವರನ್ನು ಹೊಸಕಿ ಹಾಕಿ ಅವರು ತಲೆ ತಲಾಂತರದಿಂದ ಬದುಕಿ ಬಂದ ಕಾಡಿನ ಮೇಲೆ ಹಕ್ಕು ಸಾಧಿಸಲು ಹೊರಟ ಸರಕಾರದ ಅಂತಿಮ ಪರಿಣಾಮ, ಈಶಾನ್ಯ ಭಾರತ ಯುದ್ಧಭೂಮಿಯಾಗಿ ಪರಿವರ್ತನೆಯಾಯಿತು. ಹಸಿರು ಕಾಡು ರಕ್ತ ವರ್ಣರೂಪವನ್ನು ತಾಳಿದೆ. ಕಾಡಿನ ಜನರು ಮತ್ತು ನಾಡಿನ ಜನರ ಈ ಸಂಘರ್ಷ ಎಲ್ಲ ರಾಜ್ಯಗಳಲ್ಲೂ ನಡೆಯುತ್ತಲೇ ಇದೆ. ರಾಷ್ಟ್ರೀಯ ಉದ್ಯಾನವನ ಘೋಷಣೆಯ ಬಳಿಕವಂತೂ ಈ ಸಂಘರ್ಷ ತೀವ್ರ ರೂಪವನ್ನು ಪಡೆಯಿತು. ಇಂದು ಅರಣ್ಯದ ಸಂಪತ್ತನ್ನು, ಭೂಮಿಯನ್ನು ಅನಧಿಕೃತ ಜನರು ಒತ್ತುವರಿ ಮಾಡಿಕೊಂಡು ಕಳ್ಳ ಸಾಗಣೆ ಮಾಡಿಕೊಂಡು ಒಂದೆಡೆ ದೋಚುತ್ತಿದ್ದರೆ, ಮಗದೊಂದೆಡೆ ಈ ಆದಿವಾಸಿಗಳು ಕಾಡನ್ನು ತಾಯಿಯೆಂದು ನಂಬಿ ಅದನ್ನು ಪೋಷಿಸಿಕೊಂಡು ಬಂದವರು. ಕಾಡನ್ನು ಕೊಳ್ಳೆ ಹೊಡೆದ ಜನರು ಇಂದು ನಾಡಿನಲ್ಲಿ ನಾಯಕರಾಗಿ ಮೆರೆಯುತ್ತಿದ್ದರೆ, ಕಾಡನ್ನೇ ನಂಬಿ, ಅದನ್ನು ರಕ್ಷಿಸಿಕೊಂಡು ಬಂದ ಈ ಜನರು ಅರಣ್ಯ ಇಲಾಖೆಯ ದೃಷ್ಟಿಯಲ್ಲಿ ಕಾಡುಗಳ್ಳರಾಗಿ ಗುರುತಿಸುತ್ತಿದ್ದಾರೆ. ಅವರನ್ನು ವಿವಿಧ ಚಿತ್ರಹಿಂಸೆಗಳ ಮೂಲಕ ಕಾಡಿನಿಂದ ಒದ್ದೋಡಿಸುವ ಕೆಲಸ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ. ಕುದುರೆ ಮುಖದಲ್ಲಿ ಅರಣ್ಯ ಇಲಾಖೆಯ ಕ್ರೌರ್ಯ, ಅಲ್ಲಿನ ಆದಿವಾಸಿ ತರುಣರನ್ನು ನಕ್ಸಲರನ್ನಾಗಿ ಪರಿವರ್ತಿಸಿತು.

ಅಂತಿಮವಾಗಿ ಹಲವು ತರುಣರು ಪೊಲೀಸರ ಗುಂಡೇಟಿಗೆ ಬಲಿಯಾದರು. ಕೊಡಗಿನಲ್ಲೂ ಈ ತಿಕ್ಕಾಟ ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿದೆ. ನಾಗರಹೊಳೆ ಸೇರಿದಂತೆ ಆಸುಪಾಸಿನಲ್ಲಿರುವ ಆದಿವಾಸಿಗಳನ್ನು ಅರಣ್ಯದಿಂದ ಒಕ್ಕಲೆಬ್ಬಿಸಲು ಇಲ್ಲಿನ ರಾಜಕಾರಣಿಗಳು ವಿವಿಧ ತಂತ್ರಗಳನ್ನು, ಆಮಿಷಗಳನ್ನು, ಕ್ರೌರ್ಯಗಳನ್ನು ಜಾರಿಗೊಳಿಸುತ್ತಾ ಬಂದಿದ್ದಾರೆ. ಅಭಿವೃದ್ಧಿಯ ಹೆಸರನ್ನು ಪಠಿಸುತ್ತಾ, ಪರಿಹಾರವನ್ನು ನೀಡುವ ಭರವಸೆ ನೀಡಿ ಇಲ್ಲಿ ಸಾವಿರಾರು ಆದಿವಾಸಿಗಳನ್ನು ಸರಕಾರ ಅತಂತ್ರಗೊಳಿಸಿದೆ. ಮಾತು ಮಾತಿಗೆ ಅರಣ್ಯ ಸಂರಕ್ಷಣಾ ಕಾಯ್ದೆಯ ಹೆಸರನ್ನು ಬಳಸುವ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಆದಿವಾಸಿಗಳು ಯಾವ ರೀತಿಯಲ್ಲಿ ಅರಣ್ಯಕ್ಕೆ ಕುತ್ತು ತಂದಿದ್ದಾರೆ ಎನ್ನುವುದನ್ನು ವಿವರಿಸಲು ವಿಫಲರಾಗಿದ್ದಾರೆ. ಹಾಗೆ ನೋಡಿದರೆ, ಕಾಡುಗಳ್ಳರಿಗೆ ಈ ಆದಿವಾಸಿಗಳೇ ಒಂದು ದೊಡ್ಡ ಸಮಸ್ಯೆಯಾಗಿದ್ದರು. ತಲೆತಲಾಂತರದಿಂದ ಕಾಡನ್ನು ಗೌರವಿಸುತ್ತಾ ಅಲ್ಲಿ ಬದುಕುತ್ತಿದ್ದ ಆದಿವಾಸಿಗಳನ್ನು ಸ್ಥಳಾಂತರ ಮಾಡದೇ ಇದ್ದರೆ ಕಾಡುಗಳ್ಳರಿಗೆ ಕಾಡನ್ನು ದೋಚುವುದು ಅಸಾಧ್ಯವಾಗಿತ್ತು ಎನ್ನುವ ಕಾರಣಕ್ಕಾಗಿಯೇ ಆದಿವಾಸಿಗಳನ್ನು ಕಾಡಿನ ಶತ್ರುಗಳಾಗಿ ಬಿಂಬಿಸುತ್ತಾ ಬರಲಾಯಿತು.

ಈಗಾಗಲೇ ಆದಿವಾಸಿಗಳನ್ನು ಭಾಗಶಃ ಕಾಡಿನಿಂದ ಒದ್ದೋಡಿಸುವಲ್ಲಿ ಸರಕಾರ ಯಶಸ್ವಿಯಾಗಿದೆ. ಈ ಮಧ್ಯೆ, ಅಲ್ಲಿ ಇಲ್ಲಿ ಅಲ್ಪಸ್ವಲ್ಪ ಜಾಗದಲ್ಲಿ ಬೇರು ಬಿಟ್ಟಿದ್ದ ಆದಿವಾಸಿಗಳನ್ನು ಪೊಲೀಸರು ತಮ್ಮ ಲಾಠಿ ಮತ್ತು ಬೂಟಿನಿಂದ ಒದ್ದೋಡಿಸುವ ಪ್ರಯತ್ನ ಇದೀಗ ನಡೆಯುತ್ತಿದೆ. ಅದರ ಭಾಗವಾಗಿಯೇ ವೀರಾಜಪೇಟೆ ತಾಲೂಕಿನ ಬಿದ್ದಳ್ಳಿ ಮತ್ತು ತಟ್ಟಳ್ಳಿ ಗ್ರಾಮಗಳು 400ಕ್ಕೂ ಅಧಿಕ ಆದಿವಾಸಿ ಕುಟುಂಬಗಳನ್ನು ಪೊಲೀಸರು ಬೀದಿ ಪಾಲು ಮಾಡಿದ್ದಾರೆ. ಅವರ ಗುಡಿಸಲುಗಳನ್ನು ರಾತ್ರೋರಾತ್ರಿ ಬುಲ್ಡೋಜರ್ ಬಳಸಿ ನಾಶ ಮಾಡಿದ್ದಾರೆ. ಬಹುಶಃ ಒಂದಿಷ್ಟು ಆದಿವಾಸಿಗಳು ಎಚ್ಚರ ತಪ್ಪಿದ್ದರೆ, ಬುಲ್ಡೋಜರ್‌ಗಳಿಗೆ ಅವರೂ ಸಿಲುಕಿಕೊಳ್ಳುತ್ತಿದ್ದರೇನೋ. ಕೊಡಗಿನ ಆದಿವಾಸಿಗಳ ಬದುಕು ಅತ್ಯಂತ ಸಂಕೀರ್ಣವಾದ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ. ಈ ಹಿಂದೆ ಅವರು ಕಾಡಿನ ಉತ್ಪನ್ನಗಳನ್ನು ಆರಿಸಿಕೊಂಡು, ಅದನ್ನು ಮಾರಿ ಬದುಕು ಕಂಡುಕೊಳ್ಳುತ್ತಿದ್ದರು. ಹಾಗೆಯೇ ಕೊಡಗಿನ ಬಹುತೇಕ ಮೂಲನಿವಾಸಿಗಳ ಬದುಕು ಅರಿತೋ ಅರಿಯದೆಯೋ ಅಲ್ಲಿನ ಕಾಫಿ ಎಸ್ಟೇಟ್‌ನ ಜಮೀನ್ದಾರರ ಕೈಯಲ್ಲಿ ಸಿಲುಕಿಕೊಂಡಿದೆ. ಇಂದು ವೀರಾಜಪೇಟೆಯಲ್ಲಿ ಆದಿವಾಸಿಗಳ ಮೇಲೆ ಅರಣ್ಯ ಇಲಾಖೆ ಮತ್ತು ಪೊಲೀಸರು ನಡೆಸಿರುವ ಕ್ರೌರ್ಯಕ್ಕೆ ಕೇವಲ ಕಾಯ್ದೆ ನೀತಿಗಳಷ್ಟೇ ಕಾರಣವಲ್ಲ ಎನ್ನುವುದನ್ನು ನಾವು ಮನಗಾಣಬೇಕಾಗಿದೆ. ಇಲ್ಲಿನ ಕಾಫಿಎಸ್ಟೇಟ್ ಮಾಲಕರ ಕೈವಾಡವೂ ಇದರ ಹಿಂದಿದೆ. ಈ ಆದಿವಾಸಿಗಳು ತಮ್ಮ ಕಾಫಿ ಎಸ್ಟೇಟ್‌ನಲ್ಲಿ ಜೀತ ಮಾಡುವುದನ್ನು ನಿರಾಕರಿಸಿದ್ದಾರೆ ಎನ್ನುವ ಕಾರಣಕ್ಕಾಗಿಯೇ ತಮ್ಮ ಹಣಬಲವನ್ನು ಬಳಸಿಕೊಂಡು ಇವರ ವಿರುದ್ಧ ಇಲಾಖೆಗಳನ್ನು ಛೂಬಿಟ್ಟಿದ್ದಾರೆ.

ಕಾಫಿ ಮಾಲಕರ ಹಂಗಿನಿಂದ ಹೊರಬಂದು ಅರಣ್ಯ ಇಲಾಖೆಯ ಭೂಮಿಯಲ್ಲಿ ಇವರು ಗುಡಿಸಲುಗಳನ್ನು ಕಟ್ಟಿ, ತಮ್ಮ ಬದುಕನ್ನು ತಾವೇ ರೂಪಿಸಲು ಹೊರಟಾಗ ಅವರ ಮನೆಗಳನ್ನು ಪೊಲೀಸರು ಸರ್ವನಾಶ ಮಾಡಿ ಬೀದಿ ಪಾಲು ಮಾಡಿದ್ದಾರೆ. ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿ ಜಾರಿಗೆ ಬಂದಿರುವ ಕಾಯ್ದೆಯಂತೆ ಸರಕಾರವು ಪ್ರತಿಯೊಬ್ಬ ವಯಸ್ಕ ಆದಿವಾಸಿಗೆ ಜೀವನೋಪಾಯಕ್ಕಾಗಿ ಎರಡೂವರೆೆ ಎಕರೆ ಜಮೀನನ್ನು ನೀಡಬೇಕು. ಆದರೆ ಯಾವೊಂದು ಭರವಸೆಯನ್ನೂ ನೀಡದೇ ರಾತ್ರೋರಾತ್ರಿ ಇಲಾಖೆಯ ಅಧಿಕಾರಿಗಳು ಮೃಗೀಯವಾಗಿ ಆದಿವಾಸಿಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಒಂದೆಡೆ ನೋಟು ನಿಷೇಧದ ಕಾವು, ಮಗದೊಂದೆಡೆ ನಿರುದ್ಯೋಗ, ಇನ್ನೊಂದೆಡೆ ತಲೆ ಮೇಲೆ ಸೂರೇ ಇಲ್ಲ. ಒಂದು ರೀತಿಯಲ್ಲಿ ಮಾನವ ಹಕ್ಕಿನ ಉಲ್ಲಂಘನೆಯ ಅತಿರೇಕ ಇಲ್ಲಿ ನಡೆದಿದೆ. ನಗರಗಳಲ್ಲಿ ಶ್ರೀಮಂತರ ಅಕ್ರಮ ಮನೆಗಳನ್ನು ಒಡೆದು ಹಾಕಲು ಸಾವಿನ ಕುಂಟು ನೆಪಗಳನ್ನು ಹೇಳುವ ಸರಕಾರ, ಈ ಆದಿವಾಸಿಗಳ ಮನೆಗಳನ್ನು ಕೆಡವುದು ತನ್ನ ಕರ್ತವ್ಯ ಎಂದು ಹೇಳಿಕೊಂಡಿದೆ. ಇಂತಹ ಕರ್ತವ್ಯವನ್ನು ನೆರವೇರಿಸುವುದಕ್ಕಾಗಿ ಈ ಜನರು ಅಹಿಂದ ಸರಕಾರವೊಂದನ್ನು ಸ್ಥಾಪಿಸಬೇಕಾಯಿತೇ?

ಸರಕಾರ ಬೀದಿಪಾಲಾಗಿರುವ ಕೊಡಗಿನ ಆದಿವಾಸಿಗಳ ಸಂಕಷ್ಟಕ್ಕೆ ಪರಿಹಾರ ನೀಡಲು ತಕ್ಷಣ ಮಧ್ಯ ಪ್ರವೇಶಿಸಬೇಕಾಗಿದೆ. ಅರಣ್ಯ ಕಾಯ್ದೆಯ ಹೆಸರಿನಲ್ಲಿ ಸಾವಿರಾರು ಜನರನ್ನು ಬೀದಿ ಪಾಲು ಮಾಡಿ ಅವರನ್ನು ಹಸಿವಿನಿಂದ ಕೊಂದು ಹಾಕುವ ಅಧಿಕಾರಿಗಳ ಮತ್ತು ಕಾಫಿ ಎಸ್ಟೇಟ್‌ಗಳ ಸಂಚನ್ನು ವಿಫಲಗೊಳಿಸಬೇಕಾಗಿದೆ. ಒಕ್ಕಲೆಬ್ಬಿಸಿದ ಸ್ಥಳದಲ್ಲೇ ಅವರಿಗೆ ನಿವೇಶನ ನೀಡಬೇಕು ಮಾತ್ರವಲ್ಲ, ಮನೆಗಳನ್ನು ನಿರ್ಮಿಸಲು ಸಹಾಯ ನೀಡಬೇಕು. ಈಗಾಗಲೇ ಸಚಿವ ಕಾಗೋಡು ತಿಮ್ಮಪ್ಪ ಅವರು ಮೂರು ಬಡವಾಣೆಗಳನ್ನು ನಿರ್ಮಿಸಿ ಆದಿವಾಸಿಗಳನ್ನು ಅಲ್ಲೇ ಶಾಶ್ವತ ನೆಲೆಸುವ ರೀತಿಯಲ್ಲಿ ಪುನರ್ವಸತಿಯನ್ನು ಕಲ್ಪಿಸುವುದಾಗಿ ಹೇಳಿದ್ದಾರೆ. ಮೊತ್ತ ಮೊದಲು ತಕ್ಷಣದ ಪರಿಹಾರವನ್ನು ಸರಕಾರ ಘೋಷಿಸಬೇಕು. ಹಾಗೆಯೇ ಅವರ ಬದುಕನ್ನು ಶಾಶ್ವತವಾಗಿ ಮೇಲೆತ್ತುವಂತಹ ಯೋಜನೆಯನ್ನು ಶೀಘ್ರದಲ್ಲೇ ಘೋಷಿಸಬೇಕು. ಮನುಷ್ಯರನ್ನು ಮನುಷ್ಯರಂತೆ ನೋಡುವುದು ಕೂಡ ತಮ್ಮ ಕರ್ತವ್ಯ ಎನ್ನುವುದನ್ನು ಅರಣ್ಯ ಸಚಿವ ರಮಾನಾಥ ರೈ ಅವರು ಅರ್ಥ ಮಾಡಿಕೊಂಡು, ತಮ್ಮ ಇಲಾಖೆಯ ಅಧಿಕಾರಿಗಳಿಗೆ ಬುದ್ಧಿ ಹೇಳಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X