ಪ್ರತಿ ಗ್ರಾಪಂನ ಜೀವ ವೈವಿಧ್ಯವನ್ನು ದಾಖಲಿಸಿ: ಅನುರಾಧಾ
ಉಡುಪಿ, ಡಿ.16: ಜಿಲ್ಲೆಯ ಜೀವವೈವಿಧ್ಯಗಳನ್ನು ಗುರುತಿಸಿ ಅವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ದಾಖಲೀಕರಣಕ್ಕೆ ಒತ್ತು ನೀಡಲಾಗಿದ್ದು, ಪ್ರತೀ ತಾಲೂಕಿನಲ್ಲಿ ಮೂರು ಜನ ಜೀವಶಾಸ್ತ್ರ ಉಪನ್ಯಾಸಕರು ಹಾಗೂ ಕಾಲೇಜು ವಿದ್ಯಾರ್ಥಿಗಳ ತಂಡ ರಚಿಸಿ ಪ್ರಾಣಿ ಹಾಗೂ ಸಸ್ಯಗಳ ಪ್ರಭೆೇದಗಳನ್ನು ಪಟ್ಟಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಅನುರಾಧಾ ಹೇಳಿದರು.
ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸ್ಥಳೀಯವಾಗಿ ನಡೆಯುವ ಈ ಕಾರ್ಯಕ್ಕೆ ಸ್ಥಳೀಯವಾಗಿ ಹೆಸರು ನೀಡಲು ಅವಕಾಶವಿದೆ ಎಂದ ಅವರು, ಬಳಿಕ ಸಾಮಾಜಿಕ ಅರಣ್ಯ ಇಲಾಖೆ ಸಸ್ಯಗಳಿಗೆ ವೈಜ್ಞಾನಿಕ ಹೆಸರುಗಳನ್ನು ನೀಡಲಿದೆ ಎಂದು ನುಡಿದರು.
ಇದಕ್ಕಾಗಿ ಪ್ರತೀ ಗ್ರಾಪಂನಲ್ಲೂ ‘ಪೀಪಲ್ ಬಯೋ ಡೈವರ್ಸಿಟಿ’ ರಿಜಿಸ್ಟರ್ ಆರಂಭಿಸಿ ಮಾಹಿತಿ ಸಂಗ್ರಹಿಸಲಾಗುವುದು. ಕರ್ತವ್ಯ ನಿರ್ವಹಿಸುವವರಿಗೆ ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು. ಸಭೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ.ಭಟ್ ಹಾಗೂ ಅವರ ಸಹೋದ್ಯೋಗಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.





