ಕೊಲೆ ಪ್ರಕರಣದ ಆರೋಪಿಗಳ ಬಂಧನ
ಕಾಸರಗೋಡು, ಡಿ.16: ಬೋವಿಕ್ಕಾನದಲ್ಲಿ ಪೊವ್ವಲ್‌ನ ಅಬ್ದುಲ್ ಖಾದರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಆರೋಪಿಗಳನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರಮುಖ ಆರೋಪಿ ಬೋವಿಕ್ಕಾನದ ಕಲಾಂ ಮುಹಮ್ಮದ್(47), ಮುಳಿಯಾರು ಬಾಲನಡ್ಕದ ಮುಹಮ್ಮದ್ ಸಾಲಿ(25), ಬಾವಿಕ್ಕರೆಯ ಫಾರೂಕ್(30), ಅಶ್ರಫ್(28), ಹಸನ್ ಝುನೈಫ್(30) ಎಂದು ಗುರುತಿಸಲಾಗಿದೆ.
ಪ್ರಕರಣದ ಇನ್ನೋರ್ವ ಆರೋಪಿ ನಝೀರ್‌ನನ್ನು ಕೆಲ ದಿನಗಳ ಹಿಂದೆ ಬಂಧಿಸಲಾಗಿತ್ತು.
ಅಬ್ದುಲ್ ಖಾದರ್‌ನನ್ನು ಕೊಲೆಗೈದ ಬಳಿಕ ಆಟೊ ಮೂಲಕ ಸ್ವಲ್ಪದೂರ ತೆರಳಿದ್ದ ನಾಸಿರ್ ಅಲ್ಲಿಂದ ಬೈಕ್ ಮೂಲಕ ನೆಲ್ಲಿಕಟ್ಟೆಗೆ ಬಂದು ವಸ್ತ್ರ ಬದಲಾಯಿಸಿ ಕಾರ್‌ನಲ್ಲಿ ವಿಟ್ಲಕ್ಕೆ ಪರಾರಿಯಾಗಿದ್ದನು ಎಂದು ತಿಳಿದು ಬಂದಿದೆ. ಆರೋಪಿಗಳು ಪರಾರಿಯಾಗಲು ಬಳಸಿದ್ದ ಕಾರು ಮತ್ತು ಬೈಕನ್ನು ಆದೂರು ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣದ ಐದನೆ ಆರೋಪಿ ಬೋವಿಕ್ಕಾನದ ಫಾರೂಕ್‌ನ ಕಾರು ಮತ್ತು ನಾಲ್ಕನೆ ಆರೋಪಿ ಅಶ್ರಫ್‌ನ ಬೈಕ್‌ನ್ನು ವಶಪಡಿಸಿಕೊಂಡಿದ್ದು, ಇನ್ನೊಂದು ಆಟೊವನ್ನು ವಶಪಡಿಸಿಕೊಳ್ಳಲು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.





