ಎಚ್ಚರಿಕೆ...ನೀವು ಭೇಟಿ ನೀಡುವ ಎಟಿಎಂ ಹ್ಯಾಕರ್‌ಗಳ ಸ್ವರ್ಗವಾಗಬಹುದು!

ಮುಂದಿನ ಬಾರಿ ಹಣ ಪಡೆಯಲು ಎಟಿಎಂಗೆ ಭೇಟಿ ನೀಡಿದಾಗ ಈಗಾಗಲೇ ಗ್ರಾಹರಿಗೆ ತಲೆನೋವು ತರಿಸಿರುವ ಸರದಿ ಸಾಲಷ್ಟೇ ನಿಮ್ಮನ್ನು ಕಾಡುವುದಲ್ಲ. ಆ ಎಟಿಎಂ ಮೈಕ್ರೋಸಾಫ್ಟ್ ಎರಡು ವರ್ಷಗಳ ಹಿಂದೆಯೇ ಬೆಂಬಲವನ್ನು ಸ್ಥಗಿತಗೊಳಿಸಿರುವ ಸಾಫ್ಟ್‌ವೇರನ್ನೇ ಇನ್ನೂ ಬಳಸುತ್ತಿರುವ ಅತ್ಯಂತ ಹೆಚ್ಚಿನ ಸಾಧ್ಯತೆಯಿದೆ. ಹೀಗಾಗಿ ಅದನ್ನು ಭೇದಿಸುವುದು ಹ್ಯಾಕರ್‌ಗಳಿಗೆ ಸುಲಭದ ಕೆಲಸ. ಎಟಿಎಂ ಕಿಂಡಿಯಲ್ಲಿ ನೀವು ತೂರಿಸುವ ಕಾರ್ಡ್‌ನ ಮ್ಯಾಗ್ನೆಟಿಕ್ ಬಾರ್‌ನಲ್ಲಿರುವ ವಿವರಗಳೆಲ್ಲ ಹ್ಯಾಕರ್‌ಗಳ ಪಾಲಾಗಬಹುದು. ಇಷ್ಟಾದ ಮೇಲೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ದುಡ್ಡೂ ಅವರ ಜೇಬು ಸೇರುವುದು ವಿಳಂಬವಾಗುವುದಿಲ್ಲ.
ಭಾರತದಲ್ಲಿರುವ 2,02,000 ಎಟಿಎಂಗಳ ಪೈಕಿ ಶೇ.70ರಷ್ಟು ಯಂತ್ರಗಳು ಮೈಕ್ರೋಸಾಫ್ಟ್‌ನ ವಿಂಡೋಸ್ ಎಕ್ಸ್‌ಪಿ ಸಾಫ್ಟ್‌ವೇರ್‌ನ್ನೇ ಅವಲಂಬಿಸಿ ಕಾರ್ಯ ನಿರ್ವಹಿಸುತ್ತಿವೆ ಮತ್ತು ಮೈಕ್ರೋಸಾಫ್ಟ್ ಈ ಸಾಫ್ಟ್‌ವೇರ್‌ಗಳಿಗೆ ಸೆಕ್ಯೂರಿಟಿ ಅಪ್‌ಡೇಟ್‌ಗಳು ಮತ್ತು ತಾಂತ್ರಿಕ ಬೆಂಬಲವನ್ನು 2014ರ ಎಪ್ರಿಲ್‌ನಲ್ಲಿಯೇ ನಿಲ್ಲಿಸಿದೆ.
‘‘ವಿಶ್ಯಾದ್ಯಂತ ಮಾಡಿರುವಂತೆ ಎಟಿಎಂ ಯಂತ್ರಗಳಲ್ಲಿ ಹೊಸ ಸಾಫ್ಟ್‌ವೇರ್ ಅಳವಡಿಸಿ ವಿಂಡೋಸ್ ಎಕ್ಸ್‌ಪಿಯಿಂದ ವಿಂಡೋಸ್ 7ಕ್ಕೆ ಮೇಲ್ದರ್ಜೆಗೇರಿಸುವುದು ಬ್ಯಾಂಕುಗಳ ಜವಾಬ್ದಾರಿಯಾಗಿದೆ’’ ಎನ್ನುತ್ತಾರೆ ಎಟಿಎಂ ಯಂತ್ರಗಳ ಪೂರೈಕೆ ಸಂಸ್ಥೆ ಎನ್‌ಸಿಆರ್ ಇಂಡಿಯಾದ ಆಡಳಿತ ನಿರ್ದೇಶಕ ನವರೋಜ್ ದಸ್ತೂರ್.
ಚಿಂತೆಗೆ ಕಾರಣವಿದೆ. ಮೈಕ್ರೋಸಾಫ್ಟ್ ಬೆಂಬಲವಿಲ್ಲದ ವಿಂಡೋಸ್ ಎಕ್ಸ್‌ಪಿ ಸಿಸ್ಟಮ್‌ಗಳಲ್ಲಿ ಮಾಲ್‌ವೇರ್‌ಗಳನ್ನು ನಾವು ಪತ್ತೆ ಹಚ್ಚಿದ್ದೇವೆ ಎನ್ನುತ್ತಾರೆ ಸೈಬರ್ ಭದ್ರತಾ ಕಂಪೆನಿ ಕ್ಯಾಸ್ಪರಸ್ಕಿ ಲ್ಯಾಬ್‌ನ ಆಡಳಿತ ನಿರ್ದೇಶಕ ಅಲ್ತಾಫ್ ಹಾಲ್ದೆ.
ಇತ್ತೀಚೆಗೆ ದೇಶದ ಅತ್ಯಂತ ದೊಡ್ಡ ಹಣಕಾಸು ದತ್ತಾಂಶ ಸೋರಿಕೆ ಪ್ರಕರಣವೊಂದರಲ್ಲಿ 3.2 ಮಿಲಿಯನ್ ಡೆಬಿಟ್ ಕಾರ್ಡ್‌ಗಳ ಮಾಹಿತಿ ಹ್ಯಾಕರ್‌ಗಳ ಕೈ ಸೇರಿರುವ ಭೀತಿ ವ್ಯಕ್ತವಾಗಿತ್ತು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಈ ಸೋರಿಕೆಗೆ ಹ್ಯಾಕ್ ಆಗಿರುವ ಸಿಸ್ಟಮ್‌ನ್ನು ಬಳಸುತ್ತಿರುವ ಬ್ಯಾಂಕಿನ ಎಟಿಎಂನಲ್ಲಿ ಕಾರ್ಡ್ ಬಳಕೆ ಮೂಲಕಾರಣವಾಗಿರಬಹುದು ಎನ್ನುತ್ತವೆ ವರದಿಗಳು.
ಭಾರತದಲ್ಲಿಯ ಹೆಚ್ಚಿನ ಟಿಎಂ ಯಂತ್ರಗಳು ಬ್ಯಾಂಕುಗಳ ಸ್ವಂತದ್ದಲ್ಲ. ಫೈನಾನ್ಸಿಯಲ್ ಸಾಫ್ಟ್‌ವೇರ್ ಆ್ಯಂಡ್ ಸಿಸ್ಟಮ್ಸ್(ಎಫ್‌ಎಸ್‌ಎಸ್) ಮತ್ತು ಎಫ್‌ಐಎಸ್ ಗ್ಲೋಬಲ್‌ನಂತಹ ಪಾವತಿ ತಂತ್ರಜ್ಞಾನ ಮತ್ತು ಸೇವಾ ಪೂರೈಕೆ ಸಂಸ್ಥೆಗಳಿಗೆ ಸೇರಿದ್ದಾಗಿವೆ. ಈ ಕಂಪೆನಿಗಳು ಜಾಗತಿಕ ದೈತ್ಯ ಕಂಪೆನಿಗಳಾದ ಎನ್‌ಸಿಆರ್ ಮತ್ತು ಡೀಬೋಲ್ಡ್‌ನಿಂದ ಎಟಿಎಂ ಯಂತ್ರಗಳನ್ನು ಖರೀದಿಸುತ್ತವೆ. ಚೆನ್ನೈ ಮೂಲದ ಎಫ್‌ಎಸ್‌ಎಸ್ ಐಸಿಐಸಿಐ, ಎಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಸೇರಿದಂತೆ 34 ಬ್ಯಾಂಕುಗಳ ಪರವಾಗಿ 40,000 ಎಟಿಎಂ ಯಂತ್ರಗಳನ್ನು ನಿರ್ವಹಿಸುತ್ತಿದೆ. ಎನ್‌ಸಿಆರ್ ದೇಶದಲ್ಲಿ ನಂ.1 ಎಟಿಎಂ ಮಾರಾಟ ಸಂಸ್ಥೆಯಾಗಿದ್ದು, ಮಾರುಕಟ್ಟೆಯಲ್ಲಿ ಶೇ.47ರಷ್ಟು ಪಾಲು ಹೊಂದಿದೆ.
‘‘ಭಾರತದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹೆಚ್ಚಿನ ಎಟಿಎಂ ಯಂತ್ರಗಳು ಸ್ಥಾಪನೆಯಾಗಿವೆ ಮತ್ತು ಎಟಿಎಂಗಳ ನವೀಕರಣ ಏಳರಿಂದ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕು. ಎನ್‌ಸಿಆರ್ ಅಥವಾ ಡೀಬೋಲ್ಡ್ ನಂತಹ ಮಾರಾಟ ಸಂಸ್ಥೆಗಳು ಹಾರ್ಡ್‌ವೇರ್ ಮತ್ತು ಸಾಫ್ಟ್ ವೇರ್‌ಗೆ ಗ್ಯಾರಂಟಿಯನ್ನು ನೀಡುತ್ತವೆ. ಆದರೆ ಈ ಯಂತ್ರಗಳನ್ನು ಮೇಲ್ದರ್ಜೆಗೇರಿಸುವ ಕೆಲಸವಾಗಬೇಕಿದೆ’’ ಎನ್ನುತ್ತಾರೆ ಎಫ್‌ಎಸ್‌ಎಸ್‌ನ ಅಧ್ಯಕ್ಷ ಬಾಲಸುಬ್ರಮಣಿಯನ್.
ಹೊಸ ಎಟಿಎಂಗಳು ವಿಂಡೋಸ್ 7ನ್ನು ಬಳಸಿ ಕಾರ್ಯ ನಿರ್ವಹಿಸು ತ್ತವೆ. ವಿಂಡೋಸ್ 7ರ ಆರಂಭಿಕ ಸರ್ವಿಸ್ ಪ್ಯಾಕ್ 2015, ಜನವರಿಯಲ್ಲಿ ಕೊನೆಗೊಂಡಿದೆ ಯಾದರೂ ಮೈಕ್ರೋಸಾಫ್ಟ್ ಅದಕ್ಕೆ ತನ್ನ ಬೆಂಬಲವನ್ನು 2020, ಜನವರಿಯವರೆಗೆ ವಿಸ್ತರಿಸಿದೆ.
ಕಳೆದೆರಡು ವರ್ಷಗಳಲ್ಲಿ ಸ್ಥಾಪಿಸಲಾಗಿರುವ ಎಲ್ಲ ಎಟಿಎಂ ಯಂತ್ರಗಳು ಕಾರ್ಪೊರೇಟ್ ಜಗತ್ತಿನ ಅತ್ಯಂತ ಹೆಚ್ಚಿನ ಆದ್ಯತೆಯ ಆಪರೇಟಿಂಗ್ ಸಿಸ್ಟಮ್ ಆಗಿರುವ ವಿಂಡೋಸ್ 7 ಅನ್ನು ಹೊಂದಿವೆ. ವಿಂಡೋಸ್ 10 ಮೈಕ್ರೋಸಾಫ್ಟ್ ನ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ ಆಗಿದೆ.
ಜಾಗತಿಕವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಎಟಿಎಂ ಯಂತ್ರಗಳನ್ನು ಬದಲಿಸಲಾಗುತ್ತದೆ ಮತ್ತು ಹೊಸ ಸಾಫ್ಟ್ ವೇರ್‌ಗೆ ಸ್ವಯಂಚಾಲಿತವಾಗಿ ಪರಿವರ್ತನೆಗೊಳ್ಳುತ್ತವೆ. ಆದರೆ ಭಾರತದಲ್ಲಿ ಈ ಪ್ರಕ್ರಿಯೆಯನ್ನು 10 ವರ್ಷಗಳ ವರೆಗೂ ವಿಳಂಬಿಸಲಾಗುತ್ತದೆ. ಅದರಲ್ಲೂ ಹಳೆಯ ಎಟಿಎಂ ಯಂತ್ರಗಳನ್ನು ಗುಜರಿಗೆ ಹಾಕದೆ ಅವುಗಳನ್ನೇ ಅಲ್ಲಿ ಇಲ್ಲಿ ಕೊಂಚ ರಿಪೇರಿ ಮಾಡಿ ಮರುಸ್ಥಾಪಿಸುವುದೇ ಹೆಚ್ಚು.
‘‘ಡಿಜಿಟಲ್ ವಹಿವಾಟು ಆರ್ಥಿಕತೆಯಾಗಲು ಭಾರತವು ಉದ್ದೇಶಿಸಿ ದ್ದರೆ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳ ನವೀಕರಣ ಅವಧಿ ಕಿರಿದಾಗಬೇಕು’’ ಎನ್ನುತ್ತಾರೆ ಝಿನೊವ್ ಕನ್ಸಲ್ಟನ್ಸಿಯ ಪಾಲುದಾರ ಪ್ರವೀಣ ಭಡಾದಾ.
ಈ ಬಗ್ಗೆ ಪ್ರತಿಕ್ರಿಯಿಸಲು ಮೈಕ್ರೋಸಾಫ್ಟ್ ನಿರಾಕರಿಸಿದೆ.
ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಉದಾಸೀನತೆ ಸಾಫ್ಟ್‌ವೇರ್‌ಗಳ ಸಕಾಲಿಕ ಉನ್ನತೀಕರಣಕ್ಕೆ ಅಡ್ಡಿಯಾಗಿದೆ. ಭದ್ರತಾ ಬೆಂಬಲಗಳಿಲ್ಲದ ಸಾಫ್ಟ್ ವೇರ್‌ಗಳ ಬಳಕೆ ಎಟಿಎಂ ಯಂತ್ರಗಳ ಹ್ಯಾಕಿಂಗ್‌ನ್ನು ಸುಲಭವಾಗಿಸುತ್ತದೆ ಎಂದು ಸಾಫ್ಟ್‌ವೇರ್ ಮಾರಾಟ ಕಂಪೆನಿಯೊಂದರ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.







