ಮೊಬೈಲ್ ಬ್ಯಾಂಕಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ಅಗತ್ಯ
ಮಾನ್ಯರೆ,
ನೋಟು ರದ್ದತಿಯಿಂದಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳಿಗೆ ಪರಿಹಾರವಾಗಿ ಕೇಂದ್ರ ಸರಕಾರ ಹೊಸದಾರಿಗಳನ್ನು ಕಂಡುಕೊಳ್ಳುತ್ತಿದೆ. ಶಿಕ್ಷಣ, ತಂತ್ರಜ್ಞಾನದ ಕೊರತೆ ಅನುಭವಿಸುತ್ತಿರುವ ಬಹುತೇಕ ಹಳ್ಳಿಗಳು ಭಾರತದಲ್ಲಿವೆ. ದೇಶದಲ್ಲಿ ಏನು ನಡೆಯುತ್ತಿದೆ ಎಂಬುದೇ ಅಲ್ಲಿನ ಜನರಿಗೆ ಗೊತ್ತಿರುವುದಿಲ್ಲ. ಪ್ರಧಾನಿಯವರು ನೋಟು ಅಮಾನ್ಯಗೊಳಿಸಿದ್ದು ಉತ್ತಮ ಉದ್ದೇಶಕ್ಕಾಗಿ ಇರಬಹುದು. ಆದರೆ ಭಾರತದ ಬಡಜನರ ಕುರಿತು ನಿಜವಾದ ಕಾಳಜಿ ನಮ್ಮ ಪ್ರಧಾನಿಯವರಿಗೆ ಇದ್ದಿದ್ದರೆ ಇಂದು ಈ ಪರಿಸ್ಥಿತಿ ಒದಗಿ ಬರುತ್ತಿರಲಿಲ್ಲ. ಮೊಬೈಲ್ ಬ್ಯಾಂಕಿಂಗ್‌ಗೆ ಸಲಹೆ ನೀಡುತ್ತಿರುವ ಕೇಂದ್ರ ಸರಕಾರ, ಅದರಿಂದಾಗಬಹುದಾದ ಸಮಸ್ಯೆಗಳ ಕುರಿತು ಆಲೋಚಿಸಿಲ್ಲ. ಅದು ಎಷ್ಟು ಸುರಕ್ಷಿತ ಎನ್ನುವುದೂ ಗೊತ್ತಿಲ್ಲ. ಬ್ಯಾಂಕ್ ಅಧಿಕಾರಿಗಳು ಬಡಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಪ್ರಚಲಿತ ವಿದ್ಯಮಾನಗಳನ್ನು ಗಮನಿಸಿದಾಗ ಹೆಚ್ಚಿನ ಬ್ಯಾಂಕ್ ಅಧಿಕಾರಿಗಳು ಭ್ರಷ್ಟಾಚಾರಿಗಳ ಪರವಾಗಿದ್ದುಕೊಂಡು ತಾವೂ ಭ್ರಷ್ಟರೆಂಬುದನ್ನು ಸಾಬೀತು ಪಡಿಸಿದ್ದಾರೆ. ಜೊತೆಗೆ ನೋಟು ಅಮಾನ್ಯಗೊಳ್ಳುವ ಮುಂಚಿನಿಂದಲೂ ಭ್ರಷ್ಟ ಕೆಲಸದಲ್ಲಿ ತಮ್ಮ ಪಾಳ್ಗೊಳ್ಳುವಿಕೆಯ ಸುಳಿವು ನೀಡಿದಂತಾಗಿದೆ. ದಿನನಿತ್ಯ ಬ್ಯಾಂಕ್‌ಗಳ ಮುಂದೆ, ಎಟಿಎಂಗಳ ಮುಂದೆ ಕ್ಯೂ ನಿಂತು ನಿರಾಶರಾಗುವುದಲ್ಲದೆ ತಮ್ಮ ಸಮಯವನ್ನು ಇದಕ್ಕೆಂದೇ ಮೀಸಲಿಟ್ಟು ವ್ಯರ್ಥವಾಗಿಸುತ್ತಿದ್ದಾರೆ. ಬ್ಯಾಂಕ್‌ಗಳಿಗೆ, ಎಟಿಎಂಗಳಿಗೆ ಎಂದು ಬರುವ ಹಣ ಎಲ್ಲಿ ಹೋಗುತ್ತದೆ? ಎಂಬ ಜನರ ಪ್ರಶ್ನೆ ಬರೀ ಪ್ರಶ್ನೆಯಾಗಿಯೇ ಉಳಿದಿದೆ. ಹೆಚ್ಚಿನವರು ಮೊಬೈಲ್ ಬ್ಯಾಂಕಿಂಗ್ ಕುರಿತು ಗೊತ್ತಿಲ್ಲದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಯೊಂದಕ್ಕೂ ಚಾತಕ ಪಕ್ಷಿಗಳಂತೆ ಕಾಯುತ್ತಾ ಬಡವರ ಜೀವ ತಿಂದು ಹೊಟ್ಟೆ ತುಂಬಿಸುವ ಸೋಮಾರಿ ಮಧ್ಯವರ್ತಿಗಳು ತಂತ್ರಜ್ಞಾನದ ಅರಿವಿಲ್ಲದ ಅಮಾಯಕ ಜನರನ್ನು ಮೋಸಗೊಳಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಪರಿಹಾರವಾಗಿ ಕಂಡುಕೊಂಡ ಮಾರ್ಗ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಮಾಡುವ ಸಾಧ್ಯತೆಯಿದೆ. ಮೊಬೈಲ್ ಬ್ಯಾಂಕಿಂಗ್ ಬಗ್ಗೆ ಸ್ಪಷ್ಟ ಮತ್ತು ಸಂಪೂರ್ಣ ಮಾಹಿತಿಯ ಅಗತ್ಯ ಜನಸಾಮಾನ್ಯರಿಗಿದೆ.





