ಮದ್ಯದಂಗಡಿ ನಿಷೇಧ: ಉತ್ತಮ ನಿರ್ಧಾರ
ಮಾನ್ಯರೆ,
ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕಗಳಲ್ಲಿ 500 ಮೀ. ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ಮುಂದಿನ ಮಾರ್ಚ್ ನಂತರ ಈ ಮದ್ಯದಂಗಡಿಗಳ ಪರವಾನಿಗೆಗಳನ್ನು ನವೀಕರಿಸದಂತೆ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದೆ.
ಸುಪ್ರೀಂ ಕೋರ್ಟ್‌ನ ಈ ನಿರ್ಧಾರ ಜನಪರವಾಗಿದೆ. ಪ್ರತೀ ವರ್ಷ ದೇಶದ ಹೆದ್ದಾರಿಗಳಲ್ಲಿ ಸುಮಾರು ಒಂದೂವರೆ ಲಕ್ಷ ಜನ ಅಪಘಾತಗಳಿಂದಲೇ ಬಲಿಯಾಗುತ್ತಿದ್ದಾರೆ. ಇವುಗಳಲ್ಲಿ ಕುಡಿದು ವಾಹನ ಚಲಾಯಿಸುವವರು ಎಸಗುವ ಅವಘಡಗಳೇ ಹೆಚ್ಚಿರುತ್ತದೆ. ಇಂತಹ ಕುಡುಕ ಚಾಲಕರಿಂದಾಗಿ ನಿಷ್ಪಾಪಿ ಜೀವಗಳು ಬಲಿಯಾಗುತ್ತವೆ. ಮತ್ತು ಅವರನ್ನು ಅವಲಂಬಿಸುವವರು ಬೀದಿಗೆ ಬೀಳುತ್ತಾರೆ.
ಕುಡಿದು ವಾಹನ ಚಲಾವಣೆ ಮಾಡುವುದರಲ್ಲಿ ಹೆದ್ದಾರಿ ಬದಿಯ ಮದ್ಯದಂಗಡಿಗಳೂ ಕಾರಣವಾಗುತ್ತವೆ. ಮದ್ಯದಂಗಡಿಗಳು ಹೆದ್ದಾರಿಯಿಂದ ಒಂದಿಷ್ಟು ದೂರವಿದ್ದರೆ ಹಲವು ಜೀವಗಳು ಉಳಿಯಬಹುದು.
ಆದ್ದರಿಂದ ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟ್ ಆದೇಶವನ್ನು ಹೊಣೆಯರಿತು ಪಾಲನೆ ಮಾಡಿ, ಮದ್ಯಪಾನ ಸೇವನೆಯ ಚಾಲನೆಯಿಂದಾಗುವ ಅನಾಹುತಗಳನ್ನು ತಪ್ಪಿಸಬೇಕಾಗಿದೆ.





