ಮಹಿಳಾ ಕಲ್ಯಾಣ ಇಲಾಖೆಯಿಂದ ಅನ್ಯಾಯ: ಮಹಿಳೆ ಆರೋಪ
ಬಂಟ್ವಾಳ, ಡಿ.16: ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲಾಣ್ಯ ಇಲಾಖೆ ಅಧಿಕಾರಿಗಳು ಅನ್ಯಾಯವೆಸಗಿದ್ದಾರೆ ಎಂಬ ಗಂಭೀರ ಆರೋಪವನ್ನು ರಂಗೇಲು ನಿವಾಸಿ ಜಯಲಕ್ಷಿ್ಮೀ ಎನ್. ಭಟ್ ಮಾಡಿದ್ದಾರೆ.
ಶುಕ್ರವಾರ ಸಂಜೆ ಬಿ.ಸಿ. ರೋಡ್‌ನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ತಾಲೂಕು ಶಿಶು ಅಭಿವೃದ್ಧಿ ಇಲಾಖೆಯಿಂದ ತಮಗಾದ ಅನ್ಯಾಯದ ಬಗ್ಗೆ ವಿವರಣೆ ನೀಡಿದರು.
ರಂಗೇಲು ಅಂಗನವಾಡಿ ಕೇಂದ್ರದ ದುರಸ್ತಿಯ ಹಿನ್ನೆಲೆಯಲ್ಲಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೋರಿಕೆಯಂತೆ 2013ರ ಮೇ 13ರಂದು 4 ತಿಂಗಳ ಮಟ್ಟಿಗೆ ತನ್ನ ವಾಸದ ಮನೆಯನ್ನು ಅಂಗನವಾಡಿ ಕೇಂದ್ರ ನಡೆಸಲು ಒದಗಿಸಿದ್ದೆ. ತಾತ್ಕಾಲಿಕವಾಗಿ ಪಡೆದ ನನ್ನ ಮನೆಯನ್ನು 2016ರವರೆಗೆ ವಿವಿಧ ಅಮಿಷಗಳನ್ನೊಡ್ಡಿ ಒಟ್ಟು 38 ತಿಂಗಳುಗಳ ಕಾಲ ಉಪಯೋಗಿಸಿದ್ದಾರೆ ಎಂದವರು ತಿಳಿಸಿದರು.
ಈ ನಡುವೆ ಮನೆಯನ್ನು ನಿಗದಿತ ವೇಳೆಯಲ್ಲಿ ಬಿಟ್ಟು ಕೊಡದಿದ್ದರಿಂದ ಇಲಾಖೆಯೊಂದಿಗೆ ಪತ್ರ ವ್ಯವಹಾರ ಹಾಗೂ ಖುದ್ದಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಮನೆ ಬಿಟ್ಟು ಕೊಡುವಂತೆ ಕೇಳಿಕೊಂಡರೂ ಇಲಾಖೆ ಅಧಿಕಾರಿಗಳು ಇದಕ್ಕೆ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.ಈ ಬಗ್ಗೆ ಸಚಿವ ಬಿ.ರಮಾನಾಥ ರೈ ಅವರ ಗಮನಕ್ಕೆ ತಂದ ಬಳಿಕ 2015 ಎಪ್ರಿಲ್‌ನಿಂದ ತಿಂಗಳಿಗೆ 943 ರೂ. ರಂತೆ 18 ತಿಂಗಳು ಮನೆ ಬಾಡಿಗೆಯನ್ನು ಇಲಾಖೆ ಪಾವತಿಸಿದೆ. ಆ ಬಳಿಕವೂ ಅಂಗನವಾಡಿ ಕೇಂದ್ರವಾಗಿ ಮನೆಯನ್ನು ಇಲಾಖೆ ಉಪಯೋಗಿಸಿಕೊಂಡಿದೆ. ನಂತರದ 13 ತಿಂಗಳ ಬಾಡಿಗೆಯನ್ನು ಪಾವತಿಸದೆ ಇದೀಗ ಮನೆಯಿಂದ ಅಂಗನವಾಡಿಯನ್ನು ಖಾಲಿ ಮಾಡಿದ್ದಾರೆ ಎಂದರು. ಈ ಬಗ್ಗೆ ತನಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದ ಅವರು ಇಲ್ಲದಿದ್ದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.







