ಠಾಣೆ: ಶುಲ್ಕ ಬಾಕಿಗಾಗಿ ವಿದ್ಯಾರ್ಥಿಗೆ ಆಡಳಿತ ಮಂಡಳಿ ಸದಸ್ಯರಿಂದ ಥಳಿತ
ಥಾಣೆ, ಡಿ.16: ಅಂಬರನಾಥರ ಶಾಲೆಯೊಂದರ 10ನೆ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಶಾಲೆ ಆಡಳಿತ ಮಂಡಳಿಯ ಸದಸ್ಯರು ಥಳಿಸಿ ಗಾಯಗೊಳಿಸಿದ್ದು, ಆತನೀಗ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಪೊಲೀಸರಿಂದು ತಿಳಿಸಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಐಪಿಸಿಯ ಸೂಕ್ತ ಪರಿಚ್ಛೇದಗಳನ್ವಯ ಅಸಂಜ್ಞೇಯ ಅಪರಾಧ ಪ್ರಕರಣವನ್ನು ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆಯೆಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಕಾರ್ತಿಕ್ ಗೋವಿಂದನ್(16) ಎಂಬ ಈ ವಿದ್ಯಾರ್ಥಿಯನ್ನು ಶುಲ್ಕ ಬಾಕಿಯ ಬಗ್ಗೆ ವಿಚಾರಿಸುವುದಕ್ಕಾಗಿ ಆರೋಪಿಗಳು ಕರೆಸಿದ್ದರು. 1ರಿಂದ 10ನೆ ತರಗತಿಯ ವರೆಗೆ ಅದೇ ಶಾಲೆಯಲ್ಲಿ ಕಲಿತಿರುವ ಕಾರ್ತಿಕ್‌ನಲ್ಲಿ ಬಾಕಿಯಿರುವ ರೂ.4 ಸಾವಿರ ಶುಲ್ಕದ ಬಗ್ಗೆ ವಿಚಾರಿಸಿದಾಗ, ಅದನ್ನು ತಾನು ತಂದೆಗೆ ತಿಳಿಸುತ್ತೇನೆಂದು ಉತ್ತರಿಸಿ ಹಿಂದಿರುಗಿದ್ದನು.
ಆ ಬಳಿಕ ಆತನನ್ನು ತರಗತಿಯಿಂದ ಹೊರ ಹಾಕಲಾಯಿತು ಹಾಗೂ ಆಡಳಿತ ಮಂಡಳಿಯ ಸದಸ್ಯರು ಕಾರ್ತಿಕ್‌ಗೆ ಕಿವಿಯಿಂದ ರಕ್ತ ಸುರಿಯುವ ವರೆಗೆ ಥಳಿಸಿದರೆಂದು ಆರೋಪಿಸಲಾಗಿದೆ.
ಗಾಯಗಳೊಂದಿಗೆ ಮನೆಗೆ ಓಡಿದ ಆತನನ್ನು ಹೆತ್ತವರು ಮೊದಲು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಒಯ್ದು, ಬಳಿಕ ಉಲ್ಲಾಸನಗರ ಕೇಂದ್ರ ಆಸ್ಪತ್ರೆಗೆ ದಾಖಲಿಸಿದರು. ಆತನೀಗ ಬಿಡುಗಡೆಗೊಂಡಿದ್ದಾನೆ.
ಶಾಲಾಡಳಿತ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.





