ಅಡ್ಕರೆಪಡ್ಪು: ಗ್ರೀನ್ ವ್ಯೆ ಶಾಲೆಯಲ್ಲಿ ಜಲಸಾಕ್ಷರತಾ ಕಾರ್ಯಾಗಾರ

ಕೊಣಾಜೆ, ಡಿ.17: ಇಂದು ಸೌಲಭ್ಯಗಳು ಹೆಚ್ಚಾಗುತ್ತಿರುವಂತೆಯೇ ಪ್ರಾಕೃತಿಕವಾಗಿ ಕೆಲವು ಸಮಸ್ಯೆಗಳು ಎದುರಾಗುತ್ತಿವೆ. ನೀರಿನ ಸಮಸ್ಯೆ ಇಂದು ಬಹಳಷ್ಟು ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಜಾಗೃತರಾಗಬೇಕಾದ ಆವಶ್ಯಕತೆಯಿದ್ದು ಪ್ರಮುಖವಾಗಿ ವಿದ್ಯಾರ್ಥಿಗಳು ಇದರ ಮಹತ್ವನ್ನು ಅರಿತುಕೊಳ್ಳಬೇಕು ಎಂದು ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಅಭಿಪ್ರಾಯಪಟ್ಟರು
ಕೊಣಾಜೆ ಗ್ರಾಮದ ಅಡ್ಕರೆಪಡ್ಪುವಿನ ಗ್ರೀನ್ ವ್ಯೆ ಶಿಕ್ಷಣ ಸಂಸ್ಥೆಲ್ಲಿ ಕರ್ನಾಟಕ ಸರಕಾರದ ಲೋಕಶಿಕ್ಷಣ ಇಲಾಖೆ, ಜಿಲ್ಲಾ ಸಾಕ್ಷರತಾ ಸಮಿತಿ ಹಾಗೂ ಜಮೀಯ್ಯತುಲ್ ಫಲಾಹ್ ವತಿಯಿಂದ ಶನಿವಾರ ನಡೆದ ಜಲಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ತಾಲೂಕು ಅಧ್ಯಕ್ಷ ಅಬ್ದುಲ್ ವಹಾಬ್, ಜಲದ ಸಂರಕ್ಷಣೆ ಮತ್ತು ಅದರ ಉಪಯೋಗದ ಮಹತ್ವದ ಕುರಿತು ಇಂದು ಅರಿಯಲೇ ಬೇಕಾದ ಅನಿವಾರ್ಯತೆ ಇದ್ದು ಇಂತಹ ಕಾರ್ಯಕ್ರಮಗಳ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದರು.
ಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂತಹ ಜಲ ಸಂರಕ್ಷಣೆಯ ಹಾಗೂ ಇನ್ನಿತರ ಮಹತ್ವಪೂರ್ಣ ಕಾರ್ಯಕ್ರಮಗಳ ಪ್ರಯೋಜವನ್ನು ಈ ಪ್ರದೇಶದ ಜನರು ಪಡೆದುಕೊಂಡು ಮುಂದಿನ ಪೀಳಿಗೆಗೆ ನಮ್ಮ ಕೊಡುಗೆಯನ್ನು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಮೀಯ್ಯತುಲ್ ಫಲಾಹ್‌ನ ಕಾರ್ಯದರ್ಶಿ ಸೈಯದ್ ಝುಬೈರ್ ಷಾ, ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಸದಸ್ಯ ಅಬ್ದುಲ್ ಖಾದರ್, ತಾಪಂ ಮಾಜಿ ಸದಸ್ಯ ಉಮರ್ ಪಜೀರು, ಹಾಜಿ ಮುಹಮ್ಮದ್, ಹಳೆ ವಿದ್ಯಾರ್ಥಿ ಸಂಘದ ಸಿರಾಜ್ ಅಹ್ಮದ್, ನಿಯಾಝ್, ಸ್ಥಳೀಯರಾದ ಹಸೈನಾರ್, ಮುಹಮ್ಮದ್, ಕರೀಂ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಅಬೂಬಕರ್, ಮುಖ್ಯೋಪಾಧ್ಯಾಯಿನಿ ಎಲ್ವಿನ್ ಡಿ. ಹೈಮನ್, ಆ್ಯಗ್ನೆಸ್ ಡಿಸೋಜ, ಸಿಆರ್‌ಪಿ ಸುಗುಣ, ಸಂಪನ್ಮೂಲ ವ್ಯಕ್ತಿಗಳಾದ ದಾಕ್ಷಾಯಿಣಿ, ಆಶಲತಾ ಮುಂತಾದವರು ಭಾಗವಹಿಸಿದ್ದರು.







