ಭಾರತದ ಈ ನಗರ ಬೊಜ್ಜು ಪೀಡಿತ ಮಹಿಳೆಯರ ರಾಜಧಾನಿ !

ಹೈದರಾಬಾದ್,ಡಿ.17: ಹೈದರಾಬಾದಿನ ಸ್ವಾದಿಷ್ಟ ಬಿರಿಯಾನಿ, ಅಧಿಕ ಕ್ಯಾಲೊರಿಗಳನ್ನು ಹೊಂದಿರುವ ಖಾದ್ಯಗಳನ್ನು ಒಮ್ಮೆ ಸವಿದವರು ಅವುಗಳ ರುಚಿಗೆ ಮಾರು ಹೋಗಿ ಅದನ್ನೇ ಪದೇ ಪದೇ ತಿನ್ನುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ಹೀಗಾಗಿಯೇ ಈ ನಗರದ ಮಹಿಳೆಯರು ಇವುಗಳನ್ನು ತಿಂದೂ ತಿಂದೂ ವ್ಯಾಯಾಮವನ್ನೂ ಮಾಡದೆ ಎಷ್ಟೊಂದು ಬೊಜ್ಜು ಬೆಳೆಸಿಕೊಂಡಿದ್ದಾರೆಂದರೆ ಹೈದರಾಬಾದ ನಗರವೀಗ ದೇಶದಲ್ಲಿಯೇ ಅತ್ಯಂತ ಸ್ಥೂಲಕಾಯದ ಮಹಿಳೆಯರ ನಗರ ಎಂಬ ಹೆಸರನ್ನು ಪಡೆದುಕೊಂಡುಬಿಟ್ಟಿದೆ. ಬಿಎಂಐ ಸೂಚಿಯಲ್ಲಿ ಇತರ ನಗರಗಳ ಮಹಿಳೆಯರನ್ನು ಅವರು ಮೀರಿಸಿಬಿಟ್ಟಿದ್ದಾರೆ. 766 ಕುಟುಂಬಗಳ 830 ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4(ಎನ್‌ಎಫ್‌ಎಚ್‌ಎಸ್) ಈ ಆಘಾತಕಾರಿ ಅಂಕಿಂಶಗಳನ್ನು ಬಹಿರಂಗಗೊಳಿಸಿದೆ. 14-49 ವರ್ಷ ವಯೋಮಾನದ ಶೇ.47.9ರಷ್ಟು ಹೈದರಾಬಾದಿ ಮಹಿಳೆಯರು ಬೊಜ್ಜುದೇಹಿಗಳಾಗಿದ್ದಾರೆ.
ಹೈದರಾಬಾದ್ ನಿವಾಸಿ ಝೈನಾಬಿ ಈ ವರ್ಷದ ಮಾರ್ಚ್‌ನಲ್ಲಿ ನಗರದ ಆಸ್ಪತ್ರೆಯೊಂದರಲ್ಲಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೊಳಗಾಗುವ ಮುನ್ನ ತನ್ನ 24ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ಬರೋಬ್ಬರಿ 165 ಕೆ.ಜಿ.ತೂಗುತ್ತಿದ್ದಳು. ಅವಳಿಗೆ ನಡೆಯುವುದು ಬಿಡಿ....ಹೆಜ್ಜೆಗಳನ್ನು ಎತ್ತಿ ಇಡಲೇ ಸಾಧ್ಯವಾಗುತ್ತಿರಲಿಲ್ಲ ಮತ್ತು ದೇಹದ ಬೃಹದ್ಗಾತ್ರ ಮತ್ತು ಕುಬ್ಜತನದಿಂದಾಗಿ ಶಸ್ತ್ರಚಿಕಿತ್ಸೆಯೂ ಕಷ್ಟವಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಈಗಾಕೆ 95 ಕೆ.ಜಿ.ತೂಗುತ್ತಿದ್ದಾಳೆ.
ಇದು ಝೈನಾಬಿಯೊಬ್ಬಳ ಕಥೆಯಲ್ಲ. ಅವಳಂತಹ ಅದೆಷ್ಟೋ ಮಹಿಳೆಯರಿಗೆ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗುತ್ತಿಲ್ಲ. ರಕ್ತದಲ್ಲಿ ಸಕ್ಕರೆಯ ಮಟ್ಟ ಅತ್ಯಂತ ಹೆಚ್ಚಿನ ಮಟ್ಟದಲ್ಲಿದೆ. ಸಾಮಾಜಿಕವಾಗಿ ಬೆರೆಯಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಮಹಿಳೆಯರು ಮಾನಸಿಕ ಖಿನ್ನತೆಗೆ ಜಾರುತ್ತಿದ್ದಾರೆ. ಅಂದ ಹಾಗೆ ಬೊಜ್ಜುತನದಲ್ಲಿ ಹೈದರಾಬಾದಿ ಮಹಿಳೆಯರು ಪುರುಷರನ್ನೂ ಮೀರಿಸಿದ್ದಾರೆ. ನಗರದಲ್ಲಿ ಕೇವಲ ಶೇ.33.7 ಪುರುಷರು ಬೊಜ್ಜು ಹೊಂದಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ. 25ಕೆಜಿಎಂ2ಕ್ಕಿಂತ ಹೆಚ್ಚಿನ ಬಿಎಂಐ(ಬಾಡಿ ಮಾಸ್ ಇಂಡೆಕ್ಸ್) ಹೊಂದಿರುವವರರನ್ನು ಹೆಚ್ಚಿನ ತೂಕವು ಳ್ಳವರು ಎಂದು ಪರಿಗಣಿಸಲಾಗುತ್ತದೆ.
ಎನ್‌ಎಫ್‌ಎಚ್‌ಎಸ್ ಸಮೀಕ್ಷೆಯಂತೆ ಕೋಲ್ಕತಾದಲ್ಲಿ ಶೇ.40.7, ಮುಂಬೈನಲ್ಲಿ ಶೇ.34, ಚೆನ್ನೈನಲ್ಲಿ ಶೇ.33.6 ಮತ್ತು ಬೆಂಗಳೂರಿನಲ್ಲಿ ಶೇ.33.4 ಮಹಿಳೆಯರು ಬೊಜ್ಜುದೇಹಿಗಳಾಗಿದ್ದಾರೆ.
ಈ ಐದೂ ನಗರಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲೇ ಬೊಜ್ಜು ಹೆಚ್ಚು. ಹೆಂಗಸರಲ್ಲಿ ಎತ್ತರ ಮತ್ತು ತೂಕದ ಲೆಕ್ಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೊಜ್ಜು ಶೇಖರಣೆಯಾಗುವುದು ಇದಕ್ಕೆ ಕಾರಣವೆನ್ನಲಾಗುತ್ತದೆ. ಅಸಮತೋಲನದ ಆಹಾರ ಸೇವನೆ, ಜಂಕ್‌ಫುಡ್ ಹುಚ್ಚು ಮತ್ತು ವ್ಯಾಯಾಮವಿಲ್ಲದ ಜೀವನಶೈಲಿ ಇವೂ ಮಹಿಳೆಯರಲ್ಲಿ ಬೊಜ್ಜಿಗೆ ಕಾರಣವಾಗುತ್ತಿವೆ ಎನ್ನುತ್ತಾರೆ ತಜ್ಞರು.
ಸ್ತ್ರೀ ಹಾರ್ಮೋನುಗಳು ಮತ್ತು ಜನನ ನಿಯಂತ್ರಣ ಮಾತ್ರೆಗಳೂ ಮಹಿಳೆಯರ ಬೊಜ್ಜಿಗೆ ಕಾರಣಗಳಾಗಿವೆ ಎನ್ನುತ್ತಾರೆ ಕಾಂಟಿನೆಂಟಲ್ ಹಾಸ್ಪಿಟಲ್ಸ್‌ನ ಡಾ.ವಿ.ಅಮರ್.







