ಬೆಂಬಲಿಗರು ಹಿಂಸಾತ್ಮಕವಾಗಿ ವರ್ತಿಸಿದ್ದರು ಎಂಬುದನ್ನು ಒಪ್ಪಿಕೊಂಡ ಟ್ರಂಪ್

ಒರ್ಲಾಂಡೊ (ಫ್ಲೋರಿಡ), ಡಿ. 17: 2016ರ ಅಧ್ಯಕ್ಷೀಯ ಚುನಾವಣಾ ಅಭಿಯಾನದ ವೇಳೆ ತನ್ನ ಬೆಂಬಲಿಗರು ‘ಹಿಂಸಾತ್ಮಕ’ವಾಗಿ ವರ್ತಿಸಿದ್ದರು ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
ತನ್ನ ‘ಧನ್ಯವಾದ’ ಪ್ರವಾಸದ ಭಾಗವಾಗಿ ಫ್ಲೋರಿಡದ ಒರ್ಲಾಂಡೊದಲ್ಲಿ ಶುಕ್ರವಾರ ರಾತ್ರಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಈ ಹೇಳಿಕೆಯನ್ನು ನೀಡಿದರು.
ತನ್ನ ಬೆಂಬಲಿಗರು ಪ್ರತಿಭಟನಾಕಾರರ ವಿರುದ್ಧ ಹಿಂಸಾತ್ಮಕವಾಗಿ ವರ್ತಿಸಿದ್ದರು ಎನ್ನುವುದನ್ನು ಟ್ರಂಪ್ ಚುನಾವಣಾ ಪ್ರಚಾರದ ವೇಳೆ ಪದೇ ಪದೇ ನಿರಾಕರಿಸಿದ್ದರು ಹಾಗೂ ತನ್ನ ರ್ಯಾಲಿಗಳಲ್ಲಿ ಹಿಂಸಾಚಾರ ನಡೆಸಲು ಬಾಡಿಗೆ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು ಎಂಬುದಾಗಿ ಹೇಳಿದ್ದರು.
‘‘ನಿಮ್ಮಲ್ಲಿ ಕ್ರೌರ್ಯವಿತ್ತು, ನೀವು ಹಿಂಸಾತ್ಮಕವಾಗಿ ವರ್ತಿಸಿದಿರಿ, ನೀವು ಬೊಬ್ಬೆ ಹಾಕುತ್ತಾ ಕೇಳಿದಿರಿ ‘‘ಗೋಡೆ ಎಲ್ಲಿದೆ? ನಮಗೆ ಗೋಡೆ ಬೇಕು!’’ ಎಂದು. ‘‘ಜೈಲು! ಜೈಲು! ಆಕೆಯನ್ನು ಜೈಲಿಗೆ ಹಾಕಿ!’’ ಎಂದು ನೀವು ಚೀರಿದಿರಿ. ನೀವು ಹುಚ್ಚರಾಗಿದ್ದಿರಿ ಹಾಗೂ ಕೊಳಕಾಗಿ ವರ್ತಿಸಿದಿರಿ. ಏನೇ ಆದರೂ, ನಾನು ಗೆಲ್ಲಬೇಕೆಂದು ನೀವು ಬಯಸಿದಿರಿ, ಅಲ್ಲವೇ?’’ ಎಂದು ಟ್ರಂಪ್ ಹೇಳಿದರು.
‘‘ಆದರೆ, ಈಗ ನೀವು ಮೃದುವಾಗಿದ್ದೀರಿ ಹಾಗೂ ಶಾಂತರಾಗಿದ್ದೀರಿ. ಅಂದಿನಂತೆ ನೀವು ಈಗ ಕ್ರೌರ್ಯ ಹೊಂದಿಲ್ಲ ಹಾಗೂ ಹಿಂಸಾತ್ಮಕವಾಗಿಲ್ಲ, ಸರಿಯಲ್ಲವೇ? ಯಾಕೆಂದರೆ ನಾವು ಗೆದ್ದಿದ್ದೇವೆ, ಅಲ್ಲವೇ?’’ ಎಂದರು.
2016ರ ಅಭಿಯಾನದ ವೇಳೆ ಅಮೆರಿಕದಾದ್ಯಂತ ನಡೆದ ಟ್ರಂಪ್ ರ್ಯಾಲಿಗಳಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ಟ್ರಂಪ್ ಬೆಂಬಲಿಗರು ದೈಹಿಕ ಹಲ್ಲೆ ನಡೆಸಿದ್ದರು. ಇನ್ನು ಕೆಲವು ಸಂದರ್ಭಗಳಲ್ಲಿ ಟ್ರಂಪ್ ರ್ಯಾಲಿಯಿಂದ ಬರುತ್ತಿದ್ದವರಿಗೆ ಪ್ರತಿಭಟನಕಾರರು ಹಲ್ಲೆ ನಡೆಸಿದ್ದರು.







