ವೆನೆಝುವೆಲದಲ್ಲಿ ತಿರುಗುಬಾಣವಾದ ನೋಟು ಅಮಾನ್ಯ : ಲೂಟಿ, ಪ್ರತಿಭಟನೆಗಿಳಿದ ಜನರು

ಕ್ಯಾರಕಸ್ (ವೆನೆಝುವೆಲ), ಡಿ. 17: ನೂತನ ಕರೆನ್ಸಿ ನೋಟುಗಳನ್ನು ಚಲಾವಣೆಗೆ ತರುವ ವೆನೆಝುವೆಲ ಸರಕಾರದ ಕ್ರಮವು ತಿರುಗುಬಾಣವಾಗಿದೆ. ಹಣದ ಕೊರತೆಯಿಂದ ಹತಾಶೆಗೊಂಡ ಜನರು ಸರಕು ಟ್ರಕ್‌ಗಳನ್ನು ದೋಚಿದರು ಹಾಗೂ ಪೊಲೀಸರೊಂದಿಗೆ ಘರ್ಷಣೆಗಿಳಿದರು.
ಈ ಘರ್ಷಣೆಗೆ ಪ್ರತಿಪಕ್ಷದ ರಾಜಕಾರಣಿಗಳು ಕಾರಣ ಎಂಬುದಾಗಿ ಅಧ್ಯಕ್ಷ ನಿಕೊಲಸ್ ಮಡುರೊ ಶುಕ್ರವಾರ ಆರೋಪಿಸಿದ್ದಾರೆ. ನ್ಯಾಶನಲ್ ಅಸೆಂಬ್ಲಿಯ ಕೆಲವು ಪ್ರತಿಪಕ್ಷ ಸದಸ್ಯರು ‘ಹಿಂಸಾಚಾರ ಪ್ರಯತ್ನಗಳಲ್ಲಿ’ ಭಾಗಿಯಾಗಿರುವುದನ್ನು ತೋರಿಸುವ ಚಿತ್ರಗಳು ಮತ್ತು ವೀಡಿಯೊಗಳು ಇವೆ ಎಂದು ಅವರು ಹೇಳಿದರು.
ಕೊಲಂಬಿಯದೊಂದಿಗಿನ ಗಡಿ ಸಮೀಪದ ಗುವಾಸ್‌ಡಲಿಟೊ ಎಂಬ ಪಟ್ಟಣದಲ್ಲಿನ ಎರಡು ಸರಕಾರಿ ಬ್ಯಾಂಕ್‌ಗಳಿಗೆ ಲೂಟಿಕೋರರು ಬೆಂಕಿ ಹಚ್ಚಿದ್ದಾರೆ ಎಂದು ಮಡುರೊ ಹೇಳಿದರು.
ಅಗಾಧ ಹಣದುಬ್ಬರ ದರದಿಂದಾಗಿ ವೆನೆಝುವೆಲ ಹಣ ದಿನೇ ದಿನೇ ವೌಲ್ಯ ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಈಗಿನ ನೋಟುಗಳ 200 ಪಟ್ಟು ಅಧಿಕ ಮುಖಬೆಲೆಗಳ ಹೊಸ ನೋಟುಗಳನ್ನು ಚಲಾವಣೆಗೆ ತರಲು ವೆನೆಝುವೆಲ ಯೋಜನೆ ರೂಪಿಸಿದೆ.
ಆದರೆ, ಹೊಸ ನೋಟುಗಳು ಚಲಾವಣೆಗೆ ಬರುವ ಮುನ್ನವೇ ಈಗ ಚಲಾವಣೆಯಲ್ಲಿದ್ದ 100 ಬೊಲಿವರ್ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದ ಸರಕಾರದ ಕ್ರಮ ತಿರುಗುಬಾಣವಾಗಿ ಮಾರ್ಪಟ್ಟಿತು.
100 ಬೊಲಿವರ್‌ನ ಬೆಲೆ ಅಮೆರಿಕನ್ ಡಾಲರ್‌ನ ಮೂರು ಸೆಂಟುಗಳು. ವೆನೆಝುವೆಲದಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣದ ಪೈಕಿ 77 ಶೇಕಡ 100 ಬೊಲಿವರ್ ನೋಟುಗಳಲ್ಲಿದೆ.
ಆಹಾರ ಮತ್ತು ಕ್ರಿಸ್ಮಸ್ ಉಡುಗೊರೆಗಳನ್ನು ನೀಡಲು ಹಣವಿಲ್ಲದ ಹಿನ್ನೆಲೆಯಲ್ಲಿ, ಉದ್ರಿಕ್ತ ಜನರು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.







