ಡಿಜಿಟಲ್ ಕರೆನ್ಸಿಗೆ ಸರಕಾರದ ಆದ್ಯತೆ: ಅರುಣ್ ಜೇಟ್ಲೀ

ಹೊಸದಿಲ್ಲಿ, ಡಿ.17: ಅಮಾನ್ಯಗೊಂಡಿರುವ 15.44 ಲಕ್ಷ ಕೋಟಿ ಮೊತ್ತದಷ್ಟು ಹೊಸ ನೋಟುಗಳನ್ನು ಚಲಾವಣೆಗೆ ತರುವುದಿಲ್ಲ. ಡಿಜಿಟಲ್ ಕರೆನ್ಸಿ ಈ ವ್ಯತ್ಯಾಸವನ್ನು ತುಂಬಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲೀ ಸೂಚನೆ ನೀಡಿದ್ದಾರೆ.
ಹಳೆಯ ಸಾವಿರ ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವ ತೀರ್ಮಾನವನ್ನು ‘ ಎದೆಗಾರಿಕೆಯ ನಿರ್ಧಾರ’ ಎಂದು ಬಣ್ಣಿಸಿದ ಅವರು, ಭಾರತವು ಪ್ರಸ್ತುತ ಇಂತಹ ತೀರ್ಮಾನ ತೆಗೆದುಕೊಳ್ಳುವ ಮತ್ತು ದಿಟ್ಟ ಪ್ರಯೋಗ ನಡೆಸುವ ಸಾಮರ್ಥ್ಯ ಹೊಂದಿರುವ ಕಾರಣ ಸರಕಾರ ಈ ರೀತಿ ಮಾಡಲು ಶಕ್ತವಾಯಿತು ಎಂದರು.
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಫಿಕಿ)ಯ 89ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ 7 ದಶಕಗಳಿಂದ ದೇಶದಲ್ಲಿ ಇದ್ದ ಪರಿಸ್ಥಿತಿ ಸ್ವೀಕಾರಾರ್ಹವಲ್ಲದ ಕಾರಣ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ನೋಟುಗಳು ಚಲಾವಣೆಯಲ್ಲಿ ಇದ್ದರೆ ತೆರಿಗೆ ತಪ್ಪಿಸಲು ಅನುಕೂಲವಾಗುತ್ತದೆ ಮತ್ತು ಕಪ್ಪುಹಣದ ಸಂಖ್ಯೆ ಹೆಚ್ಚುತ್ತದೆ. ಹಣವನ್ನು ಅಪರಾಧ ಕೃತ್ಯಕ್ಕೆ ಬಳಸಲೂ ಸುಲಭವಾಗುತ್ತದೆ ಎಂದರು.
ಈ ನಿರ್ಧಾರವನ್ನು ಅನುಷ್ಠಾನಗೊಳಿಸಿದ ಬಳಿಕ , ಹಣದ ಪ್ರಮಾಣವನ್ನು ಕಡಿಮೆಗೊಳಿಸಿ ವ್ಯತ್ಯಾಸದ ಮೊತ್ತವನ್ನು ಡಿಜಿಟಲ್ ಕರೆನ್ಸಿ ಮೂಲಕ ತುಂಬಬಹುದು ಎಂಬ ವಾಸ್ತವಾಂಶ ತಿಳಿದುಬಂದಿದೆ ಎಂದ ಅವರು, ಅಗತ್ಯವಿರುವಷ್ಟು ಹಣವನ್ನು ಚಲಾವಣೆಗೆ ಬಿಡುವ ಪ್ರಕ್ರಿಯೆಗೆ ಹೆಚ್ಚು ಸಮಯದ ಅಗತ್ಯವಿರದು ಎಂದರು. ಕಳೆದ ಐದು ವಾರಗಳಿಂದ ಡಿಜಿಟಲ್ ಕರೆನ್ಸಿ ಮೂಲಕ ಪಾವತಿ ವ್ಯವಸ್ಥೆ ವೇಗ ಪಡೆದುಕೊಂಡಿದೆ. ಸಂಸತ್ತಿನ ಒಂದು ವರ್ಗದವರಿಗೆ ಮಾತ್ರ ದೇಶದಲ್ಲಿ ಏನಾಗುತ್ತಿದೆ ಎಂಬುದರ ಪರಿವೆಯೇ ಇಲ್ಲ ಎಂದರು. ಹಣವನ್ನು ಮರುಚಲಾವಣೆಗೆ ತರುವ ಪ್ರಕ್ರಿಯೆಯ ಮುಕ್ತಾಯವು ದೇಶದಲ್ಲಿ ಹೊಸ ವ್ಯವಸ್ಥೆಯ ಉಗಮಕ್ಕೆ ನಾಂದಿ ಹಾಡಲಿದೆ ಎಂದು ಹೇಳಿದರು. ಕಳೆದ 70 ವರ್ಷಗಳಲ್ಲಿ ದೇಶದಲ್ಲಿ ಇದ್ದ ಸ್ಥಿತಿ ಎಂದರೆ ಚಲಾವಣೆಯಲ್ಲಿ ಅಧಿಕ ಸಂಖ್ಯೆಯ ಹಣ ಇದ್ದದ್ದು. ಹಣ ಅಧಿಕವಾಗಿದ್ದರೆ ಅಭಿವೃದ್ಧಿ ಸೂಚಕಾಂಕದ ಮೇಲೆ ಮತ್ತು ಸಾಮಾಜಿಕ, ಆರ್ಥಿಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದರು.







