ಕಾರವಾರ: ತಳ್ಳುಗಾಡಿ ವ್ಯಾಪಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಕಾರವಾರ, ಡಿ.17: ನಗರದ ಪಿಕಳೆ ಆಸ್ಪತ್ರೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ತಳ್ಳುವ ಗೂಡಂಗಡಿಗಳನ್ನಿಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿರುವವರ ತಳ್ಳುಗಾಡಿಗಳನ್ನು, ಡ್ರೈವ್ ಇನ್ ಹೊಟೇಲ್ ಎದುರು ನಿರ್ಮಿಸಿರುವ ಫುಡ್‌ಕೋರ್ಟ್‌ಗೆಸ್ಥಳಾಂತರ ಮಾಡಲು ಜಿಲ್ಲಾಡಳಿತ ಯೋಜಿಸಿದೆ. ಆದರೆ ತಮ್ಮನ್ನು ಇರುವ ಸ್ಥಳದಲ್ಲೇ ತಳ್ಳುಗಾಡಿಗಳನ್ನು ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ತಳ್ಳುಗಾಡಿ ವ್ಯಾಪಾರಸ್ಥರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದರು.
ತಳ್ಳುವ ಗೂಡಂಗಡಿಕಾರರು ಆಸ್ಪತ್ರೆ, ಸರಕಾರಿ ಕಚೇರಿ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಎಳನೀರು, ತಂಪು ಪಾನೀಯ ಇನ್ನಿತರ ಅಗತ್ಯದ ವಸ್ತುಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಆದರೆ ರಸ್ತೆ ಪಕ್ಕದಿಂದ ಕಡಲ ತೀರದಲ್ಲಿರುವ ಫುಡ್‌ಕೋರ್ಟ್‌ಗೆ ಸ್ಥಳಾಂತರ ಮಾಡಿದರೆ ತಳ್ಳುಗಾಡಿ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದಂತಾಗುತ್ತದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳನ್ನು ಕಡಲತೀರದಲ್ಲಿ ವ್ಯಾಪಾರ ನಡೆಸಲು ಸೂಚಿಸಲಾಗಿದೆ.
ಆದರೆ ಅಲ್ಲಿ ವ್ಯಾಪಾರ ನಡೆಸಲು ಜನರೇ ಇರುವುದಿಲ್ಲ. ಕಡಲ ತೀರದಲ್ಲಿ ಬಿಸಿಲ ಧಗೆಗೆ ಬೆಳಗ್ಗೆಯಿಂದ ಸಂಜೆವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಾಗಲಿ, ಪ್ರವಾಸಿಗರಾಗಲಿ ಆಗಮಿಸುವುದಿಲ್ಲ. ಸಂಜೆ ಕೆಲ ಹೊತ್ತು ಬಿಟ್ಟರೆ ಜನಸಂಪರ್ಕ ತೀರಾ ಕಡಿಮೆ ಇರುತ್ತದೆ.
ಅಲ್ಲದೆ ತುಂಬಾ ಬಿಸಿಲು ಇರುವುದರಿಂದ ಮತ್ತು ಸಮುದ್ರ ತೀರದಲ್ಲಿರುವುದರಿಂದ ವ್ಯಾಪಾರ ನಡೆಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಮಾನವಿಯತೆ ನೆಲೆಯಲ್ಲಿ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಿ, ಇದ್ದ ಸ್ಥಳದಲ್ಲಿಯೇ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸ್ವಚ್ಛವಾಗಿಟ್ಟುಕೊಂಡು ವ್ಯಾಪಾರ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಇನ್ನೊಮ್ಮೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ತಳ್ಳುಗಾಡಿ ವ್ಯಾಪಾರಿಗಳ ಆಗ್ರಹವಾಗಿದೆ.
ಮನವಿ ಸಲ್ಲಿಸುವ ನಿಯೋಗದಲ್ಲಿ ಕಾಶಿನಾಥ ಪತ್ರೆಕರ್, ನಾರಾಯಣ ಗೌಡ, ಗುರು. ವಿ. ನಾಯ್ಕ, ಮಂಜುಳಾ, ವರಲಕ್ಷ್ಮೀ, ಜಯಲಕ್ಷ್ಮೀ, ಪಾಂಡುರಂಗ ನಾಯ್ಕ, ವಿರೇಶ ಬೆಟಗೇರಿ, ಧರ್ಮೇಂದ್ರ ಇದ್ದರು.







