ಶಿವಮೊಗ್ಗ: ಇಂಧನ ಬೆಲೆ ಇಳಿಕೆಗೆ ಒತ್ತಾಯ
ಕೇಂದ್ರಕ್ಕೆ ನಿರ್ದೇಶಿಸಲು ರಾಷ್ಟ್ರಪತಿಗೆ ಮನವಿ

ಶಿವಮೊಗ್ಗ, ಡಿ.17: ಕೇಂದ್ರ ಸರಕಾರವು ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟು ರದ್ದುಗೊಳಿಸಿದ ನಂತರ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿಯೇ ಕೇಂದ್ರ ಸರಕಾರವು ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ ಮಾಡುವ ಮೂಲಕ ದೇಶವಾಸಿಗಳಿಗೆ ತೊಂದರೆಯುಂಟು ಮಾಡುತ್ತಿದೆ ಎಂದು ಆರೋಪಿಸಿ ಸಮಾಜವಾದಿ ಪಾರ್ಟಿ ಕಾರ್ಯಕರ್ತರು ಶನಿವಾರ ನಗರದ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ತದನಂತರ ಜಿಲ್ಲಾಡಳಿತದ ಮೂಲಕ ಕಾರ್ಯಕರ್ತರು ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು. ಇಂಧನ ಬೆಲೆ ಇಳಿಕೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.
ತತ್ತರ: ಕಾಳಧನಿಕರನ್ನು ಹತ್ತಿಕ್ಕುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಪ್ರಮುಖ ನೋಟುಗಳ ಚಲಾವಣೆ ರದ್ದು ಗೊಳಿಸಿದರು. ಆದರೆ ಇದರ ನೇರ ಪರಿಣಾಮ ಜನಸಾಮಾನ್ಯರ ಮೇಲೆ ಬೀರಿದ್ದು, ಜೀವನ ನಡೆಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಅಗತ್ಯ ವಸ್ತುಗಳ ಖರೀದಿಗೂ ಪರದಾಡುವಂತಹ ಸನ್ನಿವೇಶ ಜನಸಾಮಾನ್ಯರದ್ದಾಗಿದೆ. ಇದಕ್ಕೆ ಕೇಂದ್ರ ಸರಕಾರವೇ ಕಾರಣವಾಗಿದೆ. ಇಷ್ಟೆಲ್ಲದರ ನಡುವೆಯೇ ಇದೀಗ ಕೇಂದ್ರ ಸರಕಾರವು ತೈಲ ಬೆಲೆ ಹೆಚ್ಚಳ ಮಾಡಿದೆ. ಪೆಟ್ರೋಲ್ ಬೆಲೆಯಲ್ಲಿ 2.21 ರೂ., ಡೀಸೆಲ್ 1.79 ರೂ. ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 51 ರೂ. ಹೆಚ್ಚಳ ಮಾಡಲಾಗಿದೆ. ಈ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ. ಇದು ಜನ ವಿರೋಧಿ ಧೋರಣೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನವಿ ಸಲ್ಲಿಸುವ ವೇಳೆ ಸಂಘಟನೆಯ ಮುಖಂಡರಾದ ಅನೀಲ್, ಸಮೀವುಲ್ಲಾ, ಸುರೇಂದ್ರಕುಮಾರ್, ಶ್ರೀನಿವಾಸ್, ರಾಜೇಂದ್ರ, ಜಯಮಾಲಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.







