ಕೊಲೆ ಯತ್ನ ಪ್ರಕರಣ
ಆರೋಪಿಗೆ ಶಿಕ್ಷೆ, ದಂಡ
ಸಾಗರ, ಡಿ.17: ಹೆಂಡತಿಗೆ ವಿಷವಿಕ್ಕಿ ಕೊಲೆ ಮಾಡಲು ಯತ್ನಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೋರ್ವನಿಗೆ ಇಲ್ಲಿನ 5ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಜೋಗದ ಎಸ್.ವಿ.ಪಿ. ಕಾಲನಿ ವಾಸಿ ನಾಗರಾಜ್ ಎಂಬಾತ ತನ್ನ ಪತ್ನಿ ಶೃತಿ ಎಂಬವರಿಗೆ ನಿರಂತರ ಕಿರುಕುಳ ನೀಡುತ್ತಾ ಬಂದಿದ್ದು, ‘ನೀನು ನನಗೆ ತಕ್ಕ ಹೆಂಡತಿಯಲ್ಲ, ನಾನು ನಿನ್ನನ್ನು ಕೊಂದು ಬೇರೆ ಮದುವೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿಕೊಂಡು ಬಂದಿದ್ದನು ಎನ್ನಲಾಗಿದೆ.
ಆರೋಪಿ ನಾಗರಾಜ್ ಅನ್ನಕ್ಕೆ ವಿಷ ಬೆರೆಸಿ ಶೃತಿ ಅವರಿಗೆ ತಿನ್ನಿಸುವ ಪ್ರಯತ್ನ ನಡೆಸಿದ್ದನು. ಈ ಸಂಬಂಧ ಶೃತಿ ಅವರು ಆರೋಪಿ ನಾಗರಾಜ್ ವಿರುದ್ಧ ಜೋಗ ಠಾಣೆಯಲ್ಲಿ ದೂರು ನೀಡಿದ್ದರು ಎನ್ನಲಾಗಿದ್ದು, ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 5ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಹೇಶ್ವರಿ ಎಸ್. ಹಿರೇಮಠ ಅವರು ಆರೋಪಿ ನಾಗರಾಜ್‌ಗೆ ಕಲಂ 307ರ ಪ್ರಕರಣದಲ್ಲಿ 4ವರ್ಷ ಸಾದಾ ಜೈಲು ಶಿಕ್ಷೆ 1 ಲಕ್ಷ ರೂ. ದಂಡ ಹಾಗೂ ಕಲಂ 498(ಎ) ಅಪರಾಧಕ್ಕೆ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ 1ಲಕ್ಷ ರೂ. ನ್ನು ನೊಂದ ಶೃತಿ ಅವರಿಗೆ ನೀಡಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.







