ಎಂಸಿಎ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ

ಮುಂಬೈ, ಡಿ.17: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಅಧ್ಯಕ್ಷ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.
‘‘ ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟ ಲೋಧಾ ಸಮಿತಿಯ ಶಿಫಾರಸಿಗೆ ಗೌರವ ನೀಡಿ ಪವಾರ್ ಆಡಳಿತ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದೇನು ಮಾಡಬೇಕೆಂಬ ಬಗ್ಗೆ ಸಮಿತಿ ನಿರ್ಧರಿಸಲಿದೆ’’ಎಂದು ಎಂಸಿಎ ಜೊತೆ ಕಾರ್ಯದರ್ಶಿ ಪಿ.ವಿ. ಶೆಟ್ಟಿ ತಿಳಿಸಿದ್ದಾರೆ.
ಒಂದು ವೇಳೆ ಎಂಸಿಎ ಲೋಧಾ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡರೆ ನಾನು ರಾಜೀನಾಮೆ ನೀಡಬೇಕಾದ ಅಗತ್ಯವಿರುತ್ತದೆ. ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ 70 ವರ್ಷಕ್ಕಿಂತ ಮೇಲ್ಪಟ್ಟವರು ಬಿಸಿಸಿಐ ಮಾನ್ಯತೆಯಿರುವ ಸಂಸ್ಥೆಗಳಲ್ಲಿ ಅಧಿಕಾರದಲ್ಲಿರಬಾರದು ಎಂದು ಆಡಳಿತ ಮಂಡಳಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಪವಾರ್ ಉಲ್ಲೇಖಿಸಿದ್ದಾರೆ.
‘‘ನಾನು ಕ್ರಿಕೆಟ್‌ನೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡಿದ್ಧೇನೆ. ಬಿಸಿಸಿಐ-ಲೋಧಾ ಸಮಿತಿಯ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ನ್ಯಾಯಾಲಯವು ಕ್ರಿಕೆಟ್‌ನ್ನು ಹೇಗೆ ಆಯೋಜಿಸಬೇಕೆಂದು ನಿರ್ಧರಿಸಲಾರಂಭಿಸಿದೆ. ನಿನ್ನೆ-ಮೊನ್ನೆಯ ತನಕ ದೇಶವನ್ನು ಹೇಗೆ ನಡೆಸಬೇಕೆಂದು ಮಾರ್ಗದರ್ಶನ ನೀಡುತ್ತಿತ್ತು. ಇದೀಗ ನ್ಯಾಯಾಲಯ ಕ್ರೀಡಾ ಸಂಸ್ಥೆಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಪವಾರ್ ಶುಕ್ರವಾರ ನಡೆದ ಎಫ್‌ಐಸಿಸಿಐ 89ನೆ ವಾರ್ಷಿಕ ಸಭೆಯಲ್ಲಿ ಹೇಳಿದ್ದರು. ಪವಾರ್ ಎಂಸಿಎ ಅಧ್ಯಕ್ಷ ಸ್ಥಾನ ತ್ಯಜಿಸಿರುವುದು ಎಂಸಿಎ ಸದಸ್ಯರಿಗೆ ಅಚ್ಚರಿ ಮೂಡಿಸಿದೆ.
. ಇದೀಗ ರಾಜೀನಾಮೆ ನೀಡಿರುವ ಪವಾರ್ ಮಾಜಿ ಸಿಜೆಐ ಆರ್‌ಎಂ ಲೋಧಾ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವುದನ್ನು ವಿರೋಧಿಸುವ ಬದಲಿಗೆ ಅದನ್ನು ಒಪ್ಪಿಕೊಳ್ಳುವ ಸೂಚನೆ ನೀಡಿದ್ದಾರೆ.







