ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿ ಭಾರತೀಯ ಹಾಕಿ ತಂಡ
ಇಂದು ಜೂನಿಯರ್ ವಿಶ್ವಕಪ್ ಫೈನಲ್

ಲಕ್ನೋ, ಡಿ.17: ಸುಮಾರು 15 ವರ್ಷಗಳ ಬಳಿಕ ಜೂನಿಯರ್ ವಿಶ್ವಕಪ್‌ನ್ನು ಎತ್ತಿ ಹಿಡಿದು ಇತಿಹಾಸ ಪುನರ್ರಚಿಸುವುದರಿಂದ ಭಾರತ ಇನ್ನೊಂದೇ ಹೆಜ್ಜೆ ಹಿಂದಿದೆ. ರವಿವಾರ ಇಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿರುವ ಭಾರತ ಐತಿಹಾಸಿಕ ಸಾಧನೆಯ ಕನಸುಕಾಣುತ್ತಿದೆ.
ರವಿವಾರ ಭಾರತದ ಅಂಡರ್-21 ಹಾಕಿ ತಂಡದ ಆಟಗಾರರಿಗೆ ಮಹತ್ವದ ದಿನವಾಗಿದೆ. ಭಾರತೀಯ ಜೂನಿಯರ್ ಆಟಗಾರರು ಎರಡನೆ ಬಾರಿ ಮೆಗಾ ಟೂರ್ನಿಯಲ್ಲಿ ಚಾಂಪಿಯನ್ ಆಗಲು ಎದುರು ನೋಡುತ್ತಿದ್ದಾರೆ. ಭಾರತ 2001ರಲ್ಲಿ ಆಸ್ಟ್ರೇಲಿಯದ ಹೊಬರ್ಟ್‌ನಲ್ಲಿ ಮೊದಲ ಬಾರಿ ಜೂನಿಯರ್ ವಿಶ್ವಕಪ್‌ನ್ನು ಗೆದ್ದುಕೊಂಡಿತ್ತು.
ಭಾರತ ಇದೀಗ ಮೂರನೆ ಬಾರಿ ಜೂನಿಯರ್ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದೆ. 1997ರ ವಿಶ್ವಕಪ್‌ನಲ್ಲಿ ರನ್ನರ್ಸ್-ಅಪ್ ಪ್ರಶಸ್ತಿ ಜಯಿಸಿತ್ತು. ಫೈನಲ್‌ಗೆ ತಲುಪುವುದರೊಂದಿಗೆ ಬೆಳ್ಳಿ ಪದಕವನ್ನು ಖಚಿತಪಡಿಸಿರುವ ಭಾರತ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ.
‘‘ನಮ್ಮ ಹುಡುಗರಿಗೆ ಡಿ.18 ಅತ್ಯಂತ ಪ್ರಮುಖ ದಿನವಾಗಿದೆ. ಈ ದಿನ ಎಲ್ಲ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಬೇಕೆಂದು ನಮ್ರತೆಯಿಂದ ವಿನಂತಿಸಿವೆ. ತಮ್ಮ ಕೊರಳಲ್ಲಿ ಯಾವ ಬಣ್ಣದ ಪದಕ ಬೇಕೆಂದು ಆಟಗಾರರೇ ನಿರ್ಧರಿಸಬೇಕಾಗಿದೆ’’ಎಂದು ಶುಕ್ರವಾರ ಆಸ್ಟ್ರೇಲಿಯ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ರೋಚಕವಾಗಿ ಗೆದ್ದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಭಾರತದ ಪ್ರಮುಖ ಕೋಚ್ ಹರೇಂದ್ರ ಸಿಂಗ್ ಹೇಳಿದ್ದಾರೆ.
ಭಾರತೀಯ ಆಟಗಾರರು ಪ್ರೇಕ್ಷಕರ ಬೆಂಬಲವನ್ನು ಅವಲಂಬಿಸಿದ್ದು, 15,000 ಪ್ರೇಕ್ಷಕರು ಫೈನಲ್ ವೀಕ್ಷಿಸಲು ಆಗಮಿಸುವ ಸಾಧ್ಯತೆಯಿದೆ. ಸ್ಪೇನ್ ಹಾಗೂ ಆಸ್ಟ್ರೇಲಿಯ ವಿರುದ್ಧದ ಕಳೆದೆರಡು ಪಂದ್ಯಗಳಲ್ಲಿ ಭಾರತ ಹಿನ್ನಡೆಯಲ್ಲಿದ್ದಾಗ ಪ್ರೇಕ್ಷಕರು ಆಟಗಾರರನ್ನು ಹುರಿದುಂಬಿಸಿದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದ ಭಾರತೀಯ ಆಟಗಾರರು ಆಸ್ಟ್ರೇಲಿಯ ವಿರುದ್ಧ ಸರ್ವಶ್ರೇಷ್ಠ ಪ್ರದರ್ಶನ ನೀಡಿ ಗಮನ ಸೆಳೆದರು.
ಭಾರತದ ಫಾರ್ವರ್ಡ್ ವಿಭಾಗ ಬಲಿಷ್ಠವಾಗಿದ್ದು, ಆಸ್ಟ್ರೇಲಿಯ ವಿರುದ್ಧ ಗುರ್ಜಂತ್ ಸಿಂಗ್ ಹಾಗೂ ಮನ್‌ದೀಪ್ ಸಿಂಗ್ ಎರಡು ಅದ್ಭುತ ಗೋಲು ಬಾರಿಸಿದ್ದರು. ಮಿಡ್‌ಫೀಲ್ಡ್ ನಾಯಕ ಹರ್ಜೀತ್ ಸಿಂಗ್ ಹಿಡಿತದಲ್ಲಿದೆ. ಗೋಲ್‌ಕೀಪರ್ ವಿಕಾಸ್ ದಾಹಿಯಾ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಹೀರೋವಾಗಿ ಹೊರಹೊಮ್ಮಿದ್ದರು.
ಡ್ರಾಗ್‌ಫ್ಲಿಕರ್‌ಗಳಾದ ಹರ್ಮನ್‌ಪ್ರೀತ್ ಸಿಂಗ್ ಹಾಗೂ ವರುಣ್ ಕುಮಾರ್ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಲು ವಿಫಲವಾಗುತ್ತಿರುವುದು ಭಾರತದ ಕೋಚಿಂಗ್ ಸ್ಟಾಫ್‌ಗೆ ತಲೆನೋವಾಗಿ ಪರಿಣಮಿಸಿದೆ.
ಭಾರತ ತಂಡ ಜೂನಿಯರ್ ವಿಶ್ವಕಪ್‌ನಲ್ಲಿ ಮೊದಲ ಬಾರಿ ಫೈನಲ್‌ಗೆ ತಲುಪಿರುವ ಬೆಲ್ಜಿಯಂ ತಂಡವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಯುರೋಪ್‌ನ ಈ ತಂಡ ಹಿರಿಯರ ಹಾಗೂ ಕಿರಿಯರ ವಿಭಾಗದ ಹಾಕಿಯಲ್ಲಿ ಗಣನೀಯ ಪ್ರಗತಿ ಸಾಧಿಸಿದೆ.
ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದಿದ್ದ ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಬೆಲ್ಜಿಯಂನ ವಿರುದ್ಧ 2-4 ರಿಂದ ಸೋತಿತ್ತು.
ಬೆಲ್ಜಿಯಂ ಬಲಿಷ್ಠ ತಂಡವಾಗಿದ್ದು, ಆ ತಂಡವು ಈಗಾಗಲೇ ಹಾಲೆಂಡ್, ಜರ್ಮನಿ ಹಾಗೂ ಅರ್ಜೆಂಟೀನವನ್ನು ಮಣಿಸಿದೆ. ಬೆಲ್ಜಿಯಂ ಕಳೆದ ಆವೃತ್ತಿಯ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿತ್ತು.







