ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಗುರಿ ಸಾಧಿಸಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಡಿ.17: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ತೋಟಗಾರಿಕೆ ಪುನಶ್ಚೇತನ, ವಿಕಲಚೇತನರ ಸಬಲೀಕರಣ ದಡಿ ಬರುವ ಸಾಧಾರ್ ಯೋಜನೆಗಳ ಬಗ್ಗೆ ಬಹುಮಾಧ್ಯಮಗಳ ಮೂಲಕ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಲು ಆಸಕ್ತಿ ವಹಿಸಬೇಕು ಮತ್ತು ಗುರಿ ಸಾಧಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ 2016-17ನೆ ಸಾಲಿನ ಎಸ್‌ಸಿಪಿ ಮತ್ತು ಟಿಎಸ್‌ಪಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳು ಹಲವು ಮಂದಿ ಇದ್ದು, ತೋಟಗಾರಿಕಾ ಇಲಾಖಾ ಮೂಲಕ ಹನಿ ನೀರಾವರಿ ಹಾಗೂ ಪಾಳು ಬಿದ್ದ ತೋಟವನ್ನು ಪುನಶ್ಚೇತನಗೊಳಿಸಲು ನೆರವು, ಗ್ರಾಪಂ ವ್ಯಾಪ್ತಿಯಲ್ಲಿ ಗೂಡಂಗಡಿ ಸ್ಥಾಪಿಸಲು ನೆರವು ನೀಡುವಂತಹ ಯೋಜನೆಗಳ ಬಗ್ಗೆ ಗ್ರಾಪಂ ಹಾಗೂ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ನೀಡಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸಿ ಟ್ಯಾಕ್ಸಿ ವಿತರಣೆ, ಭೂಪರಿವರ್ತನೆ ಯೋಜನೆ, ಮೀನುಗಾರಿಕೆ ಇಲಾಖೆ ಯೋಜನೆಗಳು, ಪಶುಸಂಗೋಪನೆ, ಲೋಕೋಪಯೋಗಿ, ಕೃಷಿ ಮುಂತಾದ 33 ಇಲಾಖೆಗಳಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಪ್ರಗತಿ ಪರಿ ಶೀಲನೆಯನ್ನು ಜಿಲ್ಲಾಧಿಕಾರಿಗಳು ನಡೆಸಿದರು. ಕೃಷಿ ಇಲಾಖೆಯಲ್ಲಿ ಬಹು ಬೇಡಿಕೆಯಲ್ಲಿರುವ ಪವರ್ ಟಿಲ್ಲರ್ ಮತ್ತು ಟಾರ್ಪಾಲುಗಳನ್ನು ಹಿರಿತನದ ಆಧಾರದಲ್ಲಿ ವಿತರಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಇಲಾಖೆಯ ಗುರಿ ಮತ್ತು ಸಾಧನೆಯನ್ನು ವಿವರಿಸಿದರು. ನಿರಂಜನ್ ಭಟ್ ಇಲಾಖೆಯ ಗುರಿ ಮೀರಿ ಸಾಧನೆ ಮಾಡಿದ ಮಾಹಿತಿ ನೀಡಿದರು. ನಗರಾಭಿವೃದ್ಧಿ ಕೋಶ 3,386 ಫಲಾನುಭವಿಗಳಿಗೆ ಸೌಲ್ಯ ನೀಡಿರುವ ಬಗ್ಗೆ ಯೋಜನಾ ನಿರ್ದೇಶಕ ಅರುಣ್ ಪ್ರಭಾ ವಿವರಿಸಿದರು.
ಗ್ರಾಮೀಣಾಭಿವೃದ್ಧಿ ಇಲಾಖೆ ಸಾಧನೆ ಬಗ್ಗೆ ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ವಿವರಿಸಿದರು. ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಹೊಸ ಆಪ್ ಅಳವಡಿಕೆಯಿಂದ ಪ್ರಗತಿ ಯಲ್ಲಿ ಕುಂಠಿತವಾಗಿದ್ದು, ಆದುದರಿಂದ ಇಂಜಿನಿಯರ್‌ಗಳು ಸ್ಥಳ ಭೇಟಿ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಮತ್ತು ಐಟಿಡಿಪಿಯವರು ಇನ್ನಷ್ಟು ಪರಿಣಾಮಕಾರಿಯಾಗಿ ಯೋಜನೆಗಳ ಸೌಲಭ್ಯವನ್ನು ತಲುಪಿಸಬೇಕು. ಬಸವ ವಸತಿ ಯೋಜನೆಯಡಿ ಇನ್ನಷ್ಟು ಫಲಾನುಭವಿಗಳ ಆಯ್ಕೆ ಸಾಧ್ಯ. ಮುಂದಿನ ಸಭೆಯಲ್ಲಿ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯವರು ಪ್ರಗತಿಯನ್ನು ಪ್ರತ್ಯೇಕವಾಗಿ ದಾಖಲಿಸಿ ಸಲ್ಲಿಸಬೇಕು ಎಂದರು. ಜಿಲ್ಲೆಯಲ್ಲಿ ವಿದ್ಯುದ್ದೀಕರಣ ಬಾಕಿ ಇರುವ ಬಗ್ಗೆ ಜಿಲ್ಲಾಧಿಕಾರಿ ಮೆಸ್ಕಾಂ ನವರಿಂದ ಮಾಹಿತಿ ಪಡೆದರು.
ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ವೇಳೆ ರಸ್ತೆ ನಿರ್ಮಾಣ ಕಾಮಗಾರಿ ನಡೆಯದಿರುವುದು ಹಾಗೂ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿ ಎಂದರಲ್ಲದೆ, ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಗಮನಕೊಡಿ ಎಂದು ಅವರು ಸೂಚಿಸಿದರು. ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







