ರಾಜೀವ್ ಜೈನ್ ಗುಪ್ತಚರ ಇಲಾಖೆ ಮುಖ್ಯಸ್ಥ
‘ರಾ’ ಮುಖ್ಯಸ್ಥರಾಗಿ ಅನಿಲ್ ಧಸ್‌ಮಾನಾ ನೇಮಕ
ಹೊಸದಿಲ್ಲಿ, ಡಿ.17: ಜಾರ್ಖಂಡ್ ಕೇಡರ್‌ನ ಐಪಿಎಸ್ ಅಧಿಕಾರಿ ರಾಜೀವ್ ಜೈನ್ ಅವರನ್ನು ಗುಪ್ತಚರ ಇಲಾಖೆ(ಐಬಿ)ಯ ನೂತನ ಮುಖ್ಯಸ್ಥರನ್ನಾಗಿ ಮತ್ತು ಅನಿಲ್ ಧಸ್‌ಮಾನಾ ಅವರನ್ನು ಬಾಹ್ಯ ಗುಪ್ತಚರ ಏಜೆನ್ಸಿ, ರಿಸರ್ಚ್ ಆ್ಯಂಡ್ ಅನಾಲಿಸೀಸ್ ವಿಂಗ್ (ರಾ)ನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಇಬ್ಬರೂ ಎರಡು ವರ್ಷ ಸೇವಾವಧಿ ಹೊಂದಿದ್ದಾರೆ. ಪ್ರಸ್ತುತ ಐಬಿ ಮುಖ್ಯಸ್ಥರಾಗಿರುವ ದಿನೇಶ್ವರ ಶರ್ಮ ಡಿ.31ರಂದು ನಿವೃತ್ತರಾಗಲಿದ್ದು, ಜೈನ್ ಜ.1ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಜೈನ್ ಈಗ ಐಬಿಯ ವಿಶೇಷ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಎನ್‌ಡಿಎ ಸರಕಾರದ ಅವಧಿಯಲ್ಲಿ ಕಾಶ್ಮೀರದ ವಿಷಯದಲ್ಲಿ ಸರಕಾರದ ಸಂವಾದಕರಾಗಿದ್ದ ಕೆ.ಸಿ.ಪಂತ್ ಅವರಿಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ವಿದೇಶ ಗುಪ್ತಚರ ವ್ಯವಸ್ಥೆಯನ್ನು ನಿಭಾಯಿಸುತ್ತಿರುವ ‘ರಾ’ ದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜಿಂದರ್ ಖನ್ನಾ ಡಿ.31ರಂದು ನಿವೃತ್ತರಾಗಲಿದ್ದು ಅನಿಲ್ ಧಸ್‌ಮಾನಾ ಜ.1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಧ್ಯಪ್ರದೇಶ ಕೇಡರ್‌ನ ಅಧಿಕಾರಿಯಾಗಿರುವ ಇವರು ಕಳೆದ 23 ವರ್ಷಗಳಿಂದ ‘ರಾ’ದ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
.........................................
ತೆಲಂಗಾಣ ಅಸೆಂಬ್ಲಿಯಿಂದ 11 ವಿಪಕ್ಷ ಸದಸ್ಯರ ಅಮಾನತು
ಹೈದರಾಬಾದ್, ಡಿ.17: ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಪಕ್ಷಕ್ಕೆ ವಿಪಕ್ಷ ಸದಸ್ಯರ ಪಕ್ಷಾಂತರ ವಿಷಯದ ಕುರಿತು ವಿಧಾನ ಸಭೆಯಲ್ಲಿ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದ ವಿಪಕ್ಷಗಳ 11 ಸದಸ್ಯರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ. 9 ಕಾಂಗ್ರೆಸ್ ಸದಸ್ಯರು ಮತ್ತು ಇಬ್ಬರು ತೆಲುಗು ದೇಶಂ ಪಕ್ಷದ ಸದಸ್ಯರು ಅಮಾನತುಗೊಂಡವರು. ತಮ್ಮನ್ನು ಅಮಾನತುಗೊಳಿಸಿರುವುದು ಮತ್ತು ವಿಪಕ್ಷ ಸದಸ್ಯರನ್ನು ಆಡಳಿತಾರೂಢ ಪಕ್ಷಕ್ಕೆ ಸೇರ್ಪಡೆಗೊಳಿಸಿರುವುದು ಪ್ರಜಾಪ್ರಭುತ್ವದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅಮಾನತುಗೊಂಡ ಕಾಂಗ್ರೆಸ್ ಶಾಸಕ ಭಟ್ಟಿ ವಿಕ್ರಮಾರ್ಕ ಹೇಳಿದ್ದಾರೆ. ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆ ನಡೆಯುವುದನ್ನು ಇಷ್ಟಪಡದ ಕಾಂಗ್ರೆಸ್ ಪಕ್ಷ ಕಲಾಪವನ್ನು ಭಂಗಗೊಳಿಸಲು ಯತ್ನಿಸುತ್ತಿದೆ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿಯ ಶಾಸಕಿ ಜಿ.ಸುನೀತಾ ಹೇಳಿದ್ದಾರೆ.
............................
ಪಂಜಾಬ್: ಟೇಲರ್ ಅಂಗಡಿಯಿಂದ 30 ಲ.ರೂ, 2.5 ಕೆ.ಜಿ. ಚಿನ್ನ ವಶ
ಚಂಡಿಗಡ,ಡಿ.17: ಮೊಹಾಲಿ ಮತ್ತು ಚಂಡಿಗಡದ ಸೆಕ್ಟರ್ 22ರಲ್ಲಿರುವ ಮಹಾರಾಜಾ ಟೇಲರ್‌ಗೆ ಸೇರಿದ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು 30 ಲ.ರೂ.ನಗದು ಮತ್ತು 2.5 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಹಣದಲ್ಲಿ 18 ಲ.ರೂ.ಗಳು 2,000 ರೂ. ನೋಟುಗಳಲ್ಲಿದ್ದು, ಉಳಿದದ್ದು 100 ಮತ್ತು 50 ರೂ.ನೋಟುಗಳಾಗಿವೆ ಎಂದು ಇಡಿ ಅಧಿಕಾರಿಯೋರ್ವರು ತಿಳಿಸಿದರು.
ಇಷ್ಟೊಂದು ಭಾರೀ ಪ್ರಮಾಣದಲ್ಲಿ 2,000 ರೂ.ಗಳು ದೊರಕಿದ್ದು ಹೇಗೆ ಮತ್ತು ಚಿನ್ನವನ್ನು ಯಾವ ಅಂಗಡಿಯಿಂದ ಖರೀದಿಸಲಾಗಿತ್ತು ಎನ್ನುವುದನ್ನು ತಿಳಿದುಕೊಳ್ಳಲು ತನಿಖೆ ಮುಂದುವರಿದಿದೆ. ಅಂಗಡಿಯಲ್ಲಿನ ಬಿಲ್ ಬುಕ್‌ಗಳನ್ನೂ ವಶಪಡಿಸಿಕೊಂಡಿರುವ ಅಧಿಕಾರಿಗಳು ಅವನ್ನು ಪರಿಶೀಲಿಸುತ್ತಿದ್ದಾರೆ.
ನೋಟು ರದ್ದತಿಯ ಬಳಿಕ ಅಂಗಡಿಯ ಮಾಲಕರು ಪ್ರತಿ 10 ಗ್ರಾಮ್‌ಗಳಿಗೆ 44,000 ರೂ.ದರದಲ್ಲಿ 2.5 ಕೆ.ಜಿ.ಚಿನ್ನವನ್ನು ಖರೀದಿಸಿದ್ದರೆನ್ನಲಾಗಿದೆ.
ತನ್ಮಧ್ಯೆ ಚಂಡಿಗಡ ಪೊಲೀಸರು ಬಟ್ಟೆ ವ್ಯಾಪಾರಿ ಇಂದರ್‌ಪಾಲ್ ಮಹಾಜನ ಎಂಬಾತನಿಗೆ ಕಮಿಷನ್ ಪಡೆದುಕೊಂಡು ಹೊಸ ನೋಟುಗಳನ್ನು ಒದಗಿಸಿದ್ದ ಅರೋಪದಲ್ಲಿ ಮೊಹಾಲಿಯ ಖಾಸಗಿ ಬ್ಯಾಂಕೊಂದರ ಹಿರಿಯ ಅಧಿಕಾರಿಯನ್ನು ಬಂಧಿಸಿದ್ದಾರೆ. ಡಿ.14ರಂದು ಮಹಾಜನ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು 17.74 ಲ.ರೂ.ಗಳ ಹೊಸ 2,000 ರೂ.ನೋಟುಗಳು ಮತ್ತು 12,500 ರೂ.ಗಳ ಹೊಸ 500 ರೂ.ನೋಟುಗಳು ಸೇರಿದಂತೆ 2.19 ಕೋ.ರೂ.ಗಳನ್ನು ವಶಪಡಿಸಿಕೊಂಡಿದ್ದರು.







