ಬ್ಯಾಂಕಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರೈತ
ನೋಟು ರದ್ದತಿ ಎಫೆಕ್ಟ್
ಮಂದಸೌರ್(ಮ.ಪ್ರ.),ಡಿ.17: ತಾನು ಸಲ್ಲಿಸಿದ್ದ ಚೆಕ್‌ನ ಹಣ ತನ್ನ ಖಾತೆಯಲ್ಲಿ ಜಮೆಯಾಗದೆ ಹಣವನ್ನು ಹಿಂಪಡೆಯುವಲ್ಲಿ ವಿಫಲಗೊಂಡ ರೈತನೋರ್ವ ಬ್ಯಾಂಕ್‌ನಲ್ಲಿಯೇ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿಗೆ ಸಮೀಪದ ನಾರಾಯಣಪುರದಲ್ಲಿ ಶನಿವಾರ ಸಂಭವಿಸಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ರಾಧಾಶ್ಯಾಮ ಪ್ರಜಾಪತ್(45)ರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ಜಿಲ್ಲಾ ಎಸ್‌ಪಿ ಒ.ಪಿ.ತ್ರಿಪಾಠಿ ತಿಳಿಸಿದರು.
ಪ್ರಜಾಪತ್ ನ.24ರಂದು 24,000 ರೂ.ಗಳ ಚೆಕ್‌ನ್ನು ತನ್ನ ಖಾತೆಯಲ್ಲಿ ಜಮಾ ಮಾಡಿದ್ದ. ಆದರೆ ಅದು ಇನ್ನೂ ಕ್ಲಿಯರಿಂಗ್‌ನಿಂದ ವಾಪಸಾಗಿಲ್ಲ. ಹೀಗಾಗಿ ನೊಂದ ಆತ ತಾನು ಜೊತೆಯಲ್ಲಿ ತಂದಿದ್ದ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಪ್ರಜಾಪತ್ ನೀಡಿದ್ದ ಚೆಕ್‌ನ್ನು ಕ್ಲಿಯರಿಂಗ್‌ಗೆ ಕಳುಹಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಕ್ಲಿಯರಿಂಗ್‌ಗೆ ಸಲ್ಲಿಕೆಯಾಗುತ್ತಿರುವ ಚೆಕ್‌ಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಈಗಲೂ ಕ್ಲಿಯರಿಂಗ್‌ಗೆ ಕಳುಹಿಸಬೇಕಾಗಿದ್ದ ಸುಮಾರು 50 ಚೆಕ್‌ಗಳು ನಮ್ಮ ಬಳಿಯೇ ಉಳಿದು ಕೊಂಡಿವೆ ಎಂದು ಬ್ಯಾಂಕ್ ಮ್ಯಾನೇಜರ್ ಸುನಿಲ್ ದೊಹ್ರೆ ತಿಳಿಸಿದರು.
ನೋಟು ರದ್ದತಿಯ ಬಳಿಕ ದೇಶಾದ್ಯಂತ ಬ್ಯಾಂಕುಗಳಲ್ಲಿ ಕೆಲಸದ ಒತ್ತಡ ಹೆಚ್ಚುತ್ತಿದ್ದು, ಕ್ಲಿಯರಿಂಗ್‌ನಂತಹ ಕಾರ್ಯಗಳಿಗೆ ವ್ಯತ್ಯಯವಾಗುತ್ತಿದೆ. ಹೀಗಾಗಿ ಗ್ರಾಹಕರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.





