ಮೋದಿ ವಿರುದ್ಧ ಮಮತಾ, ಕೇಜ್ರಿವಾಲ್ ದಾಳಿ
ರಾಜಕೀಯ ಪಕ್ಷಗಳ ಕಪ್ಪು ಹಣಕ್ಕೆ ತೆರಿಗೆ ವಿನಾಯಿತಿ
ಹೊಸದಿಲ್ಲಿ,ಡಿ.17: ರಾಜಕೀಯ ಪಕ್ಷಗಳು ಬ್ಯಾಂಕುಗಳಲ್ಲಿ ಹಳೆಯ ನೋಟುಗಳಲ್ಲಿ ಜಮೆ ಮಾಡಿರುವ ಮೊತ್ತಕ್ಕೆ ತೆರಿಗೆ ವಿನಾಯಿತಿಯನ್ನು ನೀಡುವ ಮೋದಿ ಸರಕಾರದ ನಿರ್ಧಾರವನ್ನು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಪ್ರಶ್ನಿಸಿದ್ದಾರೆ.
ಸರಕಾರವು ತನ್ನ ನಿರ್ಧಾರವನ್ನು ಈ ಸಮಯದಲ್ಲಿ ಪ್ರಕಟಿಸಿರುವುದು ‘ಗುಪ್ತ ಉದ್ದೇಶ’ವನ್ನು ಸೂಚಿಸುತ್ತದೆ ಎಂದು ಮಮತಾ ಹೇಳಿದರು.
ನೋಟು ರದ್ದತಿ ಎಂದರೆ ಅದು ಎಲ್ಲರಿಗೂ ಅನ್ವಯಿಸುತ್ತದೆ ಮತ್ತು ನಿಯಮಗಳು ಎಲ್ಲರಿಗೂ ಒಂದೇ ಎನ್ನುವುದನ್ನು ಅವರು ಸ್ಪಷ್ಟಪಡಿಸುವ ಅಗತ್ಯವಿದೆ. ಜನಸಾಮಾನ್ಯರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ನಿಯಮಗಳು ಬೇರೆಯೇ ಎಂದು ಸರಣಿಟ್ವೀಟ್‌ಗಳಲ್ಲಿ ಪ್ರಶ್ನಿಸಿರುವ ಅವರು, ಗುಪ್ತ ಉದ್ದೇಶವೊಂದು ಇರಬಹುದು ಎನ್ನುವುದನ್ನು ಈ ನಿರ್ಧಾರವನ್ನು ಪ್ರಕಟಿಸಿರುವ ಸಮಯವು ಸೂಚಿಸುತ್ತದೆ. ಅವರು ಒಂದು ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಗುಪ್ತಸಂದೇಶ ನೀಡಲು ಪ್ರಯತ್ನಿಸುತ್ತಿದ್ದಾರೆಯೇ? ಈಗೇಕೆ ಇಂತಹ ಗೊಂದಲ ಮೂಡಿಸುವ ಮತ್ತು ದಾರಿ ತಪ್ಪಿಸುವ ಹೇಳಿಕೆಗಳು ಹೊರಬರುತ್ತಿವೆ? ಅವರು ಸ್ಪಷ್ಟನೆಯನ್ನು ನೀಡಬೇಕು ಎಂದಿದ್ದಾರೆ.
ರಾಜಕೀಯ ಪಕ್ಷಗಳ ಹಣಕಾಸಿನ ಮೂಲಗಳ ತನಿಖೆಗಾಗಿ ಆಯೋಗವೊಂದನ್ನು ನೇಮಿಸಬೇಕೆಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಕೇಂದ್ರದ ತೆರಿಗೆ ವಿನಾಯಿತಿ ನಿರ್ಧಾರಕ್ಕೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಡುವೆ ಭೇಟಿಗೂ ಸಂಬಂಧವಿದೆ ಎಂದು ಅವರು ಹೇಳಿದ್ದಾರೆ.
ಜನಸಾಮಾನ್ಯರು 2.5 ಲ.ರೂ.ಗಳನ್ನು ಠೇವಣಿ ಮಾಡಿದರೆ ಅದನ್ನು ತನಿಖೆ ಮಾಡಲಾಗುತ್ತದೆ. ಆದರೆ ಸರಕಾರದ ಈ ನಿರ್ಧಾರದ ಬಳಿಕ ರಾಜಕೀಯ ಪಕ್ಷಗಳು 2,500 ಕೋ.ರೂ.ಠೇವಣಿ ಮಾಡಿದರೂ ಆ ಬಗ್ಗೆ ತನಿಖೆ ನಡೆಯುವುದಿಲ್ಲ. ಇದು ತಪ್ಪು ಎಂದಿರುವ ಕೇಜ್ರಿವಾಲ್, ಕಳೆದ ಐದು ವರ್ಷಗಳಲ್ಲಿ ರಾಜಕೀಯ ಪಕ್ಷಗಳ ಹಣಕಾಸಿನ ಮೂಲಗಳ ಬಗ್ಗೆ ತನಿಖೆ ನಡೆಸಲು ಆಯೋಗವೊಂದನ್ನು ರಚಿಸುವಂತೆ ನಾವು ಆಗ್ರಹಿಸುತ್ತೇವೆ ಎಂದಿದ್ದಾರೆ.
ನೋಟು ರದ್ದತಿಯ ಬಳಿಕ ಎಲ್ಲ ರಾಜಕೀಯ ಪಕ್ಷಗಳು ಬ್ಯಾಂಕುಗಳಲ್ಲಿ ಜಮೆ ಮಾಡಿರುವ ಹಣದ ವಿವರಗಳನ್ನು ಬಹಿರಂಗಗೊಳಿಸುವಂತೆ ಕೇಂದ್ರವನ್ನು ಆಗ್ರಹಿಸಿದ ಅವರು, ತೆರಿಗೆ ವಿನಾಯಿತಿಗಾಗಿ ‘‘ 20,000 ರೂ.ಗಿಂತ ಕಡಿಮೆ ದೇಣಿಗೆ ಮಿತಿ ’’ಯನ್ನು ತೆಗೆದುಹಾಕುವಂತೆ ಸೂಚಿಸಿದರು. ಪಕ್ಷಗಳು ಸ್ವೀಕರಿಸುವ ಪ್ರತಿಪೈಸೆಯೂ ಘೋಷಣೆಯಾಗಬೇಕು ಎಂದರು.





