ನೋಟು ಅಮಾನ್ಯ ನಿರ್ಧಾರ ಚರ್ಚೆಗೆ ವಿಶೇಷ ಅಧಿವೇಶನ: ಶಿವಸೇನೆ ಸಲಹೆ
ಅಡ್ವಾಣಿಯ ಕಳಕಳಿಯನ್ನು ಗಮನಕ್ಕೆ ತೆಗೆದುಕೊಳ್ಳಲು ಒತ್ತಾಯ
ಮುಂಬೈ, ಡಿ.17: ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಸುಸೂತ್ರವಾಗಿ ನಡೆಸುವಲ್ಲಿ ಸರಕಾರದ ಅಸಮರ್ಥತೆಯನ್ನು ಖಂಡಿಸಿ, ಅಧಿವೇಶನ ವ್ಯರ್ಥಗೊಂಡ ಬಗ್ಗೆ ಕಳವಳ ವ್ಯಕ್ತಪಡಿಸಿ ಕಣ್ಣೀರಿಟ್ಟ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರ ಕಳಕಳಿಯನ್ನು ಬಿಜೆಪಿ ನಗಣ್ಯ ಮಾಡಬಾರದು ಎಂದು ಹೇಳಿರುವ ಕೇಂದ್ರ ಸರಕಾರದ ಮಿತ್ರಪಕ್ಷವಾಗಿರುವ ಶಿವಸೇನೆ, ನೋಟು ಅಮಾನ್ಯ ನಿರ್ಧಾರದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಸಲಹೆ ಮಾಡಿದೆ. ಭಾರತದ ರಾಜಕೀಯ ಕ್ಷೇತ್ರದ ಭೀಷ್ಮ ಪಿತಾಮಹ ಎಂದು ಅಡ್ವಾಣಿಯನ್ನು ಬಣ್ಣಿಸಿದ ಶಿವಸೇನೆ, ಅವರು ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಅವರು ಕಾಂಗ್ರೆಸ್ ಮುಖಂಡರಲ್ಲ. ಕಾಂಗ್ರೆಸ್ ವಿರೋಧಿ ರಾಜಕೀಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಎಂಬುದನ್ನು ಮರೆಯಬಾರದು ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಬರಹದಲ್ಲಿ ಹೇಳಲಾಗಿದೆ.
ಮೇ 2014ರಂದು ಸಂಸತ್ ಭವನವನ್ನು ಪ್ರವೇಶಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನದ ಮೆಟ್ಟಿಲಿಗೆ ತಮ್ಮ ಹಣೆಯನ್ನು ತಾಗಿಸಿದ್ದರು. ಈ ವೇಳೆ ಭಾವೋದ್ವೇಗದಿಂದ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಸಂಸತ್ ಕಲಾಪ ಎಂಬ ಹೆಸರಿನಲ್ಲಿ ನಡೆಯುತ್ತಿರುವ ‘ತಮಾಷೆ’ಯಿಂದ ನೊಂದು ಸಂಸತ್ ಭವನ ಕಣ್ಣೀರು ಸುರಿಸುತ್ತಿದೆ ಎಂದು ಶಿವಸೇನೆ ಬಣ್ಣಿಸಿದೆ. ದೇಶದ, ಜನತೆಯ ಸಮಸ್ಯೆಗಳನ್ನು ಚರ್ಚಿಸಲು ಸಂಸತ್ ಅಧಿವೇಶನ ನಡೆಯಬೇಕು. ಆದರೆ ಈಗ ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಕೇಳುತ್ತವೆ ಮತ್ತು ಗಲಾಟೆ ಎಬ್ಬಿಸುತ್ತವೆ. ಸರಕಾರ ಪಲಾಯನ ಮಾಡುತ್ತಿದೆ. ಇದು ಇಂದಿನ ಪರಿಸ್ಥಿತಿಯಾಗಿದೆ. ಜನಸಾಮಾನ್ಯರು ಸಾವಿರ, 2 ಸಾವಿರ ರೂ. ಪಡೆಯಲು ದಿನವಿಡೀ ಸರದಿ ಸಾಲಿನಲ್ಲಿ ನಿಂತು ದಣಿಯಬೇಕು. ಆದರೆ ಶ್ರೀಮಂತರಿಗೆ ಹೊಸ 2 ಸಾವಿರ ರೂ. ಮುಖಬೆಲೆಯ ನೋಟು ಕೋಟಿಗಟ್ಟಲೆ ಸಿಗುತ್ತಿದೆ. ಈ ಬಗ್ಗೆ ಸರಕಾರಕ್ಕೆ ಅಥವಾ ಪ್ರಧಾನ ಮಂತ್ರಿಗಳಿಗೆ ಏನೂ ಹೇಳಲು ಮನಸಿಲ್ಲದಿದ್ದರೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಿ ಮತ್ತು ರಿಸರ್ವ್ ಬ್ಯಾಂಕಿನ ಗವರ್ನರ್‌ರನ್ನು ಸಂಸತ್ತಿಗೆ ಕರೆಸಿಕೊಂಡು ಹೇಳಿಕೆ ಪಡೆಯಬೇಕು ಎಂದು ಸಲಹೆ ಮಾಡಿದೆ. ಇಂದಿನ ದಿನದಲ್ಲಿ ಪ್ರಧಾನಿ ಪದೇ ಪದೇ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದಾರೆ. ಇದೇ ವೇಳೆ ಅವರು ಸಂಸತ್ತಿನ ನಡಾವಳಿ ಬಗ್ಗೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅಡ್ವಾಣಿಯವರ ಕಳಕಳಿಯನ್ನೂ ಅರ್ಥ ಮಾಡಿಕೊಂಡರೆ ಕ್ಷೇಮ ಎಂದು ತಿಳಿಸಿದೆ.







