ಎಪಿಎಂಸಿ ಚುನಾವಣೆಗೆ ವೇಳಾಪಟ್ಟಿ ಪ್ರಕಟ
ಉಡುಪಿ, ಡಿ.17: ಜಿಲ್ಲೆಯ ಉಡುಪಿ, ಕುಂದಾಪುರ ಮತ್ತು ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಆಡಳಿತ ಮಂಡಳಿಗಳ ಕೃಷಿಕರ ಕ್ಷೇತ್ರದ 11, ವರ್ತಕರ ಕ್ಷೇತ್ರದ 1, ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಪ್ರತಿನಿಧಿ ಕ್ಷೇತ್ರದ 1, ಕೃಷಿ ಸಂಸ್ಕರಣಾ ಸಂಘಗಳ ಪ್ರತಿನಿಧಿ ಕ್ಷೇತ್ರದ 1 ಸ್ಥಾನಗಳ ಚುನಾವಣೆಗೆ (11+3) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಡಿ.22ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ಡಿ.29 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಡಿ.30ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಜ.2 ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಅಗತ್ಯಬಿದ್ದರೆ ಜ.12ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಜ.14ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯವು ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕು ಕೇಂದ್ರಗಳಲ್ಲಿ ನಡೆಯಲಿವೆ. ಚುನಾವಣೆಗೆ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕುಗಳ ತಹಶೀಲ್ದಾರರು ಚುನಾವಣಾಧಿಕಾರಿಯಾಗಿರುತ್ತಾರೆ.
ಉಡುಪಿ, ಕುಂದಾಪುರ ಮತ್ತು ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಸಂಬಂಧಪಟ್ಟ ಕ್ಷೇತ್ರಗಳ ಮತದಾರರ ಪಟ್ಟಿ, ಚುನಾವಣಾ ಕ್ಷೇತ್ರದ ಮೀಸಲಾತಿ ವಿವರ, ಮತದಾನ ಕೇಂದ್ರಗಳ ಪಟ್ಟಿ, ನಾಮಪತ್ರ ಸಲ್ಲಿಸುವ ನಮೂನೆ ಇತ್ಯಾದಿ ವಿವರಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದ ಆಸಕ್ತ ಮತದಾರರು ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕು ಕಚೇರಿಗಳಲ್ಲಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.







