ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಬಳಸಿಕೊಳ್ಳಿ: ವಿಮಲ್‌ಕುಮಾರ್
41ನೆ ಜೂನಿಯರ್ ರಾ.ಬ್ಯಾಡ್ಮಿಂಟನ್ ಟೂರ್ನಿಗೆ ತೆರೆ

ಉಡುಪಿ, ಡಿ.17: ಇಂದು ಉಡುಪಿ, ಮಣಿಪಾಲದಂಥ ಪಟ್ಟಣಗಳಲ್ಲಿ ಅತ್ಯಾಧುನಿಕ ಸಿಂಥೆಟಿಕ್ ಕೋರ್ಟ್‌ಗಳ ಸೌಲಭ್ಯಗಳಿವೆ. ಇವುಗಳ ಪ್ರಯೋಜನವನ್ನು ನಮ್ಮ ಯುವ ಕ್ರೀಡಾಪಟುಗಳು ಬಳಸಿಕೊಂಡು ಕಠಿಣ ಪರಿಶ್ರಮದೊಂದಿಗೆ ಸೈನಾ ನೆಹ್ವಾನ್, ಸಿಂಧು, ಶ್ರೀಕಾಂತ್‌ರಂತೆ ಬೆಳಗಲು ಸಾಧ್ಯವಿದೆ ಎಂದು ದೇಶದ ವಿಖ್ಯಾತ ಬ್ಯಾಡ್ಮಿಂಟನ್ ಆಟಗಾರ ಹಾಗೂ ಸದ್ಯ ಪ್ರಸಿದ್ಧ ಕೋಚ್ ಆಗಿರುವ ಬೆಂಗಳೂರಿನ ವಿಮಲ್‌ಕುಮಾರ್ ಹೇಳಿದ್ದಾರೆ.
ಅಜ್ಜರಕಾಡಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಆಶ್ರಯದಲ್ಲಿ ಇಂದು ಮುಕ್ತಾಯಗೊಂಡ 41ನೆ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ತಮ್ಮ ಕಾಲದಂತಲ್ಲದೇ ಇಂದಿನ ಶಟ್ಲ್ ಆಟಗಾರರಿಗೆ ಅತ್ಯಾಧುನಿಕ ಸೌಲಭ್ಯಗಳು ದೊರೆಯುತ್ತಿವೆ. ಆಟಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು ಹೆಚ್ಚಿನ ಕಡೆಗಳಲ್ಲಿವೆ. ಇವುಗಳನ್ನು ಬಳಸಿಕೊಂಡು ಭವಿಷ್ಯದ ಆಟಗಾರರಾಗಲು ಪ್ರಯತ್ನಿಸಬೇಕು. ಮಕ್ಕಳ ಹೆತ್ತವರು ಒತ್ತಡ ಹೇರದೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಿದೆ ಎಂದವರು ನುಡಿದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಸಹಕಾರ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸ್ಟೇಟ್ ಬ್ಯಾಂಕಿನ ಅಧಿಕಾರಿಗಳಾದ ಬಿ.ಜಿ.ಶ್ರೀದರ್, ದಿನೇಶ್, ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಪದಾಧಿಕಾರಿಗಳಾದ ಜೈಸ್ವಾಲ್, ಎನ್.ಸಿ.ಸುಧೀರ್, ಎಚ್.ಎ.ಶೆಟ್ಟಿ, ಅರುಣ್ ಕಕ್ಕರ್, ಉಮರ್ ರಶೀದ್, ರಾಜೇಂದ್ರ ಶರ್ಮ, ದೇಶಪಾಂಡಿಕಾರ್ ಉಪಸ್ಥಿತರಿದ್ದರು.
ವಿಮಲ್ ಕುಮಾರ್ ಸೇರಿದಂತೆ ದೇಶದ ಮಾಜಿ ಚಾಂಪಿಯನ್ ಆಟಗಾರರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಕೆ.ರಘುಪತಿ ಭಟ್ ಸ್ವಾಗತಿಸಿ, ಟೂರ್ನಿಯ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವೈ.ಸುಧೀರ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.







