‘ಹೆಣ್ಣು ಮಕ್ಕಳ ಸಮಾನತೆ ಹಕ್ಕಿಗೆ ಸಮಾನ ನಾಗರಿಕ ಹಕ್ಕು ಅಗತ್ಯ’
ಮಂಗಳೂರು, ಡಿ.17: ಸಮಾನ ನಾಗರಿಕ ಸಂಹಿತೆಯು ಹೆಣ್ಣು ಮಕ್ಕಳ ಸಮಾನತೆಯ ಹಕ್ಕಿನ ಚಲಾವಣೆಗಾಗಿ ದೇಶದಲ್ಲಿ ಜಾರಿಯಾಗಬೇಕಾದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯವಾದಿ ಫರ್ಹಾಹ್ ಫೈಝ್ ಹೇಳಿದ್ದಾರೆ.
ನಗರದ ಸಂಘ ನಿಕೇತನದಲ್ಲಿ ಸಿಟಿಝನ್ ಕೌನ್ಸಿಲ್‌ನ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಐಕ್ಯತೆಗಾಗಿ ಸಮಾನ ನಾಗರಿಕ ಸಂಹಿತೆಯ ಕುರಿತು ಅವರು ಉಪನ್ಯಾಸ ನೀಡುತ್ತಿದ್ದರು.
ದೇಶದ ಸಂವಿಧಾನದಲ್ಲಿರುವ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಸಮಾನ ನಾಗರಿಕ ಹಕ್ಕನ್ನು ಜಾರಿಗೆ ತರಬೇಕೆಂಬ ಪ್ರಸ್ತಾಪವಿದೆ. ನೆಹರೂ ಕಾಲದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಯತ್ನ ನಡೆದಿತ್ತು. ಅಂಬೇಡ್ಕರ್‌ರವರು ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಬಗ್ಗೆ ಸಹಮತ ಹೊಂದಿದ್ದರು ಎಂದರು.
ಅಲ್ಲದೆ ಬ್ರಿಟಿಷರು ಆರಂಭದ ಕಾಲದಲ್ಲಿ ಭಾರತದ ಎಲ್ಲರನ್ನು ಸಮಾನ ನಾಗರಿಕ ಕಾನೂನು ಜಾರಿಗೆ ತಂದು ಆಡಳಿತ ನಡೆಸಿದರು. ಬಳಿಕ ಪ್ರತ್ಯೇಕವಾದ ಕಾನೂನು ರಚನೆ ಮಾಡಿದರು. ಹಿಂದು ಕಾನೂನು, ಮುಸ್ಲಿಮ್ ಶರೀಅತ್ ಆ್ಯಕ್ಟ್ ಜಾರಿಗೆ ಬಂದಿತು. ಈ ಸಂದರ್ಭ ಹಿಂದುಗಳೇ ಹಿಂದು ಕಾನೂನು ಜಾರಿಗೆ ತರುವ ಬಗ್ಗೆ ವಿರೋಧಿಸಿದರು ಎಂದ ಅವರು, ಮುಸ್ಲಿಮ್ ಸಮುದಾಯದಲ್ಲಿಯೂ ಕೆಲವೊಂದು ಮೂಲಭೂತವಾದಿಗಳಿಂದ ಸಾಕಷ್ಟು ಮಂದಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದರಿಂದಾಗಿ ಸಮುದಾಯ ಉತ್ತಮ ಉದ್ಯೋಗಾವಕಾಶಗಳಿಲ್ಲದೆ ಬಡತನದಲ್ಲೇ ಇರುವಂತಾಗಿದೆ ಎಂದರು.
ಪ್ರಸಕ್ತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಹಾಗೂ ಇತರ ಕೆಲವು ಮುಸ್ಲಿಮ್ ಸಂಘಟನೆಗಳು ಪ್ರಮುಖವಾಗಿ ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತಿವೆ. ಸಮಾನ ನಾಗರಿಕ ಸಂಹಿತೆ ದೇಶದ ಎಲ್ಲಾ ಜನರಿಗೆ ಸೇರಿದ ಕಾನೂನು ಎಂದು ಫರ್ಹಾಹ್ ಫೈಝ್ ಹೇಳಿದರು.
ಯುವ ಬಿಗ್ರೇಡ್‌ನ ಚಿಂತಕ ಚಕ್ರವತಿ ಸೂಲಿಬೆಲೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.







