ಸ್ಪೆಲ್ಲಿಂಗ್ ಎಡವಟ್ಟು ಮಾಡಿ ನಗೆಪಾಟಲಿಗೀಡಾದ ಟ್ರಂಪ್

ವಾಷಿಂಗ್ಟನ್: ಅಮೆರಿಕದ ನೌಕಾಪಡೆಯ ಮಾನವರಹಿತ ಶೋಧನೌಕೆಯನ್ನು ವಶಪಡಿಸಿಕೊಂಡಿರುವ ಚೀನಾ ವಿರುದ್ಧ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿ ಗಮನ ಸೆಳೆದಿದ್ದಾರೆ. ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಇದ್ದ ಅಮೆರಿಕದ ನೌಕಾಪಡೆಯ ಸಂಶೋಧನಾ ಡ್ರೋಣ್ ಅನ್ನು ಚೀನಾ ಕದ್ದಿದೆ. ಅದನ್ನು ನೀರಿನಿಂದ ಕಸಿದುಕೊಂಡು ಚೀನಾ ಒಯ್ದಿರುವುದು ಇದೇ ಮೊದಲು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆದರೆ ಅವರು ಬಳಸಿದ "ಅನ್‌ಪ್ರೆಸಿಡೆಂಟೆಡ್" ಎಂಬ ಪದ ತಪ್ಪು ಸ್ಪೆಲ್ಲಿಂಗ್‌ನಿಂದಾಗಿ ಟ್ವಿಟ್ಟರ್‌ಪ್ರೇಮಿಗಳ ಗಮನ ಸೆಳೆದಿದೆ. ಅಮೆರಿಕದ ಮುಂದಿನ ಅಧ್ಯಕ್ಷರ ತಪ್ಪನ್ನು ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಎತ್ತಿ ಹಿಡಿಯುವ ಮೂಲಕ ಟ್ರಂಪ್ ಮುಜುಗರಕ್ಕೀಡಾಗಿದ್ದಾರೆ.
ಹ್ಯಾರಿಪಾಟರ್ ಲೇಖಕ ಜೆ.ಕೆ.ರೋವ್ಲಿಂಗ್ ಇದಕ್ಕೆ ಮರುಟ್ವೀಟ್ ಮಾಡಿ, "ಟ್ರಂಪ್‌ಸ್ಪೆಲ್‌ಚೆಕ್- ಅನ್‌ಪ್ರೆಸಿಡೆಂಟ್ಲಿ ಎಫೆಕ್ಟಿವ್" ಎಂದು ಲೇವಡಿ ಮಾಡಿದ್ದಾರೆ. ಮತ್ತೊಬ್ಬ ಟ್ವೀಟರ್ ಬಳಕೆದಾರ, "ಡೀಯರ್ ವರ್ಲ್ಡ್, ಮೋಸ್ಟ್ ಅಮೆರಿಕನ್ಸ್ ರಿಯಲಿ ವಿಶ್ ವಿ ಕುಡ್ ಬಿ ಅನ್‌ಪ್ರೆಸಿಡೆಂಟೆಡ್" ಎಂದು ಹೇಳಿದ್ದಾರೆ.
ಒಂದು ಗಂಟೆ ಬಳಿಕ ಟ್ರಂಪ್ ಹಳೆಯ ಪೋಸ್ಟ್ ಡಿಲಿಟ್ ಮಾಡಿ, unpresidented ಬದಲು ಸರಿಯಾಗಿ "unprecedented" ಎಂದು ಸರಿಪಡಿಸಿದರು.







