ಹೆಣ್ಣು ಮಕ್ಕಳ ಸಮಾನತೆಯ ಹಕ್ಕಿನ ಚಲಾವಣೆಗಾಗಿ ಸಮಾನ ನಾಗರಿಕ ಹಕ್ಕು ಅಗತ್ಯ
ಸೂಲಿಬೆಲೆಯ ಕಾರ್ಯಕ್ರಮದಲ್ಲಿ ಫರ್ಹಾ ಫೈಝ್

ಮಂಗಳೂರು, ಡಿ.18: ಸಮಾನ ನಾಗರಿಕ ಸಂಹಿತೆ ಹೆಣ್ಣು ಮಕ್ಕಳ ಸಮಾನತೆಯ ಹಕ್ಕಿನ ಚಲಾವಣೆಗಾಗಿ ದೇಶದಲ್ಲಿ ಜಾರಿಯಾಗಬೇಕಾದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ ನ್ಯಾಯವಾದಿ ಫರ್ಹಾ ಫೈಝ್ ತಿಳಿಸಿದ್ದಾರೆ.
ನಗರದ ಸಂಘ ನಿಕೇತನದಲ್ಲಿ ಸಿಟಿಝನ್ ಕೌನ್ಸಿಲ್ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಐಕ್ಯತೆಗಾಗಿ ಸಮಾನ ನಾಗರಿಕ ಸಂಹಿತೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಿದ್ದರು.
ದೇಶದ ಸಂವಿಧಾನದಲ್ಲಿರುವ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಸಮಾನ ನಾಗರಿಕ ಹಕ್ಕನ್ನು ಜಾರಿಗೆ ತರಬೇಕೆಂಬ ಪ್ರಸ್ತಾಪವಿದೆ. ನೆಹರೂ ಕಾಲದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಯತ್ನ ನಡೆದಿತ್ತು.ಅಂಬೇಡ್ಕರ್‌ರವರು ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಬಗ್ಗೆ ಸಹಮತ ಹೊಂದಿದ್ದರು. ಬ್ರಿಟಿಷರ ಆರಂಭದ ಕಾಲದಲ್ಲಿ ಭಾರತದ ಎಲ್ಲರನ್ನು ಸಮಾನ ನಾಗರಿಕ ಕಾನೂನು ಜಾರಿಗೆ ತಂದು ಆಡಳಿತ ನಡೆಸಿದರು.ಬಳಿಕ ಪ್ರತ್ಯೇಕವಾದ ಕಾನೂನು ರಚನೆ ಮಾಡಿದರು.ಬಳಿಕ ಹಿಂದೂ ಕಾನೂನು, ಮುಸ್ಲಿಂ ಶೆರೀಅತ್ ಆ್ಯಕ್ಟ್ ಜಾರಿಗೆ ಬಂತು. ಈ ಸಂದರ್ಭದಲ್ಲಿ ಹಿಂದುಗಳೇ ಹಿಂದೂ ಕಾನೂನು ಜಾರಿಗೆ ತರುವ ಬಗ್ಗೆ ವಿರೋಧಿಸಿದರು .ಮುಸ್ಲಿಂ ಸಮುದಾಯದಲ್ಲಿಯೂ ಕೆಲವೊಂದು ಮೂಲಭೂತವಾದಿಗಳಿಂದ ಸಾಕಷ್ಟು ಮಂದಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.ಉನ್ನತ ಶಿಕ್ಷಣದಿಂದ ಹಲವರು ವಂಚಿತರಾಗಿದ್ದಾರೆ .ಪರಿಣಾಮವಾಗಿ ಸಮುದಾಯ ಉತ್ತಮ ಉದ್ಯೋಗವಕಾಶಗಳಿಲ್ಲದೆ ಬಡತನದಲ್ಲೇ ಇರುವಂತಾಗಿದೆ .ದೇಶದಲ್ಲಿ ಅವಕಾಶ ವಂಚಿತ ಹೆಣ್ಣು ಮಕ್ಕಳಿಗೆ ನ್ಯಾಯ ದೊರೆಯಬೇಕಾದರೆ ಎಲ್ಲರಿಗೂ ಸಮಾನ ನಾಗರಿಕ ಹಕ್ಕು ಜಾರಿಗೆಯಾಗುವ ಅಗತ್ಯವಿದೆ ಎಂದು ಫರ್ಹಾ ಫೈಝ್ ತಿಳಿಸಿದ್ದಾರೆ.
ಪ್ರಸಕ್ತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹಾಗೂ ಇತರ ಕೆಲವು ಮುಸ್ಲಿಂ ಸಂಘಟನೆಗಳು ಪ್ರಮುಖವಾಗಿ ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತಿದೆ. ಸಮಾನ ನಾಗರಿಕ ಸಂಹಿತೆ ದೇಶದ ಎಲ್ಲಾ ಜನರಿಗೆ ಸೇರಿದ ಕಾನೂನು. ಮುಸ್ಲಿಂ ಸಮುದಾಯದ ಒಳಗೆ ಮೂರು ಬಾರಿ ಸಮಯಾವಕಾಶ ನೀಡದೆ ತಲಾಖ್ ಹೇಳಿ ವಿಚ್ಛೇದನ ನೀಡುವ ಪದ್ಧತಿ ಆಚರಣೆಯಲ್ಲಿದ್ದರೆ ಅದು ಇಸ್ಲಾಂನ ಕಾನೂನು ಪ್ರಕಾರವೂ ಸರಿಯಾದ ಕ್ರಮವಲ್ಲ. ಇಸ್ಲಾಂನ ಪವಿತ್ರ ಗ್ರಂಥ ಕುರ್‌ಆನ್ ವಿಚ್ಛೇದನಕ್ಕೆ ಸಂಬಂಧಿಸಿದಂತೆ ತಲಾಖ್ ಯಾವ ಸಮಯದಲ್ಲಿ ನೀಡಬಹುದು ಅದನ್ನು ನೀಡುವ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಸಮಯಾವಕಾಶದ ಬಗ್ಗೆ ವಿಸೃತವಾಗಿ ತಿಳಿಸಿದೆ. ಅಲ್ಲದೆ ಹೆಣ್ಣು-ಗಂಡಿನ ನಡುವೆ, ಸಮಾನತೆ ವ್ಯಕ್ತಿಯ ರೀತಿ ನೀತಿಗಳು ಹೇಗಿರಬೇಕು , ಕುಟುಂಬದ ಜೊತೆಗೆ ಆತನ ನಡವಳಿಕೆ ಹೇಗಿರಬೇಕು ಎಂದು ಕೇವಲ ಮುಸಲ್ಮಾನರಿಗಲ್ಲ ಸಮಸ್ತ ಮನಕುಲಕ್ಕೆ ಮಾದರಿಯಾಗುವ ರೀತಿಯಲ್ಲಿ ತಿಳಿಸಿದೆ ಎಂದು ಫರ್ಹಾ ಫೈಝ್ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಯುವ ಬಿಗ್ರೇಡ್‌ನ ಚಿಂತಕ ಚಕ್ರವತಿ ಸೂಲಿಬೆಲೆ ವಹಿಸಿದ್ದರು.







