ಹೈದರಾಬಾದ್‌ನಲ್ಲಿ ಅಮಾನ್ಯ ನೋಟುಗಳ ಮೂಲಕ 2,700 ಕೋ.ರೂ.ಚಿನ್ನ ಖರೀದಿ
ಇಡಿ ತನಿಖೆಯ ವೇಳೆ ಬಹಿರಂಗ

ಹೈದರಾಬಾದ್, ಡಿ.18: ಹೈದರಾಬಾದ್ ನಗರವೊಂದರಲ್ಲೇ ನವೆಂಬರ್‌ನಲ್ಲಿ ಅಮಾನ್ಯಗೊಂಡಿರುವ ಕರೆನ್ಸಿ ನೋಟುಗಳ ಮೂಲಕ 2,700 ಕೋಟಿ ರೂ. ವೌಲ್ಯದ ಚಿನ್ನದ ಬಿಸ್ಕಟ್‌ಗಳನ್ನು ಖರೀದಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ತನಿಖೆಯ ವೇಳೆ ಬಹಿರಂಗವಾಗಿದೆ.
ಹಳೆ ನೋಟಿನಲ್ಲಿ ಚಿನ್ನದ ಬಿಸ್ಕಟ್‌ಗಳನ್ನು ಖರೀದಿಸಿರುವ ವ್ಯಕ್ತಿ ಭೂಗತನಾಗಿದ್ದಾನೆ. 500 ಹಾಗೂ 1000 ರೂ. ಮುಖಬೆಲೆಯ ನೋಟು ಅಮಾನ್ಯದ ಬಳಿಕ ನ.8 ರಿಂದ 30ರ ವರೆಗೆ ಹೈದರಾಬಾದ್‌ಗೆ 8,000 ಕೆಜಿ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ನ.8 ರಂದು ನೋಟು ಅಮಾನ್ಯಗೊಂಡ ಬಳಿಕ ಚಿನ್ನದ ವ್ಯಾಪಾರಿಗಳು ಹಳೆಯ ನೋಟುಗಳಲ್ಲಿ ವ್ಯವಹಾರ ಮಾಡಿದ್ದಾರೆಯೇ ಎಂಬ ಬಗ್ಗೆ ಇಡಿ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಚಿನ್ನದ ವ್ಯಾಪಾರಿಗಳು ಹಳೆ ನೋಟುಗಳಲ್ಲಿ ವ್ಯವಹಾರ ಮಾಡಿರುವುದು ಕಂಡುಬಂದರೆ ಅದು ಕಾನೂನಿಗೆ ವಿರುದ್ಧವಾಗುತ್ತದೆ.
ಹೈದರಾಬಾದ್‌ನ ಮುಸಾದ್ದಿಲಾಲ್ ಜ್ಯುವೆಲ್ಲರ್ಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿರುವ ಬಗ್ಗೆ ಎಂದು ಇಡಿ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ನಾವು ಬೇಡಿಕೆಗಳನ್ವಯ, ಮುಂಗಡ ಪಾವತಿಯನ್ನು ಆಧರಿಸಿ 5,200 ಗ್ರಾಹಕರಿಗೆ ಚಿನ್ನ ಮಾರಾಟ ಮಾಡಿದ್ದು, ಇದರಿಂದ 100 ಕೋಟಿ ರೂ. ವ್ಯಾಪಾರವಾಗಿದೆ. ನ.8-9ರ ಮಧ್ಯ ರಾತ್ರಿ ತನಕ ವ್ಯಾಪಾರ ನಡೆಸಲಾಗಿದೆ ಎಂದು ಮುಸಾದ್ದಿಲಾಲ್ ಜ್ಯುವೆಲ್ಲರ್ಸ್ ಹೇಳಿದೆ.
ನರೇಂದ್ರ ಮೋದಿ ಗರಿಷ್ಠ ಮುಖ ಬೆಲೆಯ ನೋಟು ಅಮಾನ್ಯಗೊಳಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ಹೈದರಾಬಾದ್‌ನ ಮುಸಾದ್ದಿಲಾಲ್ ಜ್ಯುವೆಲ್ಲರ್ಸ್ 100 ಕೋಟಿ ರೂ ಚಿನ್ನ ಮಾರಾಟ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಅಂಗಡಿಯ ಸಿಸಿಟಿವಿ ದೃಶ್ಯವನ್ನು ಅಳಿಸಿಹಾಕಲಾಗಿದೆ. ಪಕ್ಕದ ಅಂಗಡಿಗಳ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದಾಗ ಜ್ಯುವೆಲ್ಲರಿಗೆ ಮಧ್ಯರಾತ್ರಿ ಗ್ರಾಹಕರು ಪ್ರವೇಶಿಸಿರುವ ಬಗ್ಗೆ ದಾಖಲೆ ಕಂಡಬಂದಿಲ್ಲ. ಏರ್‌ಕಾರ್ಗೋಗೆ ಸಂಬಂಧಿಸಿದ ವಿವರಗಳನ್ನು ಪರಿಶೀಲಿಸಿದಾಗ ನವೆಂಬರ್‌ನಲ್ಲಿ 8,000 ಕೆಜಿ ಚಿನ್ನ ಆಮದು ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.







