ಹೆಣ್ಣು, ಗಂಡು ಇಬ್ಬರೂ ಸಮ: ನ್ಯಾಯಾಧೀಶೆ ಕಾವೇರಿ

ಮುದ್ದೇಬಿಹಾಳ, ಡಿ.18: ಕಾನೂನಿನ ದೃಷ್ಟಿಯಲ್ಲಿ ಗಂಡು ಹೆಚ್ಚಲ್ಲ, ಹೆಣ್ಣು ಕಡಿಮೆಯಲ್ಲ, ಇಬ್ಬರೂ ಒಂದು ಬಂಡಿಯ ಗಾಲಿಗಳಿದ್ದಂತೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಕಾವೇರಿ ಹೇಳಿದರು. ಅವರು ಪಟ್ಟಣದ ವಿಬಿಸಿ ಬಾಲಿಕೆಯರ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವಿ.ಬಿ.ಸಿ. ಪ್ರೌಢಶಾಲೆಗಳ ಆಶ್ರಯದಲ್ಲಿ ನಡೆದ ಮಹಿಳೆ ಮತ್ತು ಮಕ್ಕಳ ರಕ್ಷಣೆ ಕುರಿತು ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಮಹಿಳೆಯನ್ನು ಶಿಕ್ಷಣ, ಸ್ವಾತಂತ್ರ್ಯ, ಹೀಗೆ ಎಲ್ಲದರಿಂದಲೂ ದೂರ ಇಡಲಾಗಿತ್ತು. ಆದರೆ ಸ್ವಾತಂತ್ರ್ಯಾನಂತರ ಇವರಿಬ್ಬರಿಗೂ ಸಮಾನ ಹಕ್ಕುಗಳನ್ನು ಸಂವಿಧಾನ ನೀಡಿದೆ. ಕಾನೂನು ನೀಡಿರುವ ಈ ಸೌಲಭ್ಯಗಳನ್ನು ಅರ್ಥ ಮಾಡಿಕೊಂಡು ಮಹಿಳೆಯರು ಹೆಚ್ಚು ಶಿಕ್ಷಣ ಪಡೆಯಬೇಕೆಂದು ಅವರು ಹೇಳಿದರು.
ಶಿಬಿರದಲ್ಲಿ ಕುಟುಂಬದ ಸಮಸ್ತ ನಿರ್ವಹಣೆ ಮಹಿಳೆಯರಿಂದ ಅಥವಾ ಪುರುಷರಿಂದ" ಎಂಬ ವಿಷಯದ ಮೇಲೆ ಸಂವಾದ ಏರ್ಪಡಿಸಲಾಗಿತ್ತು. ಪಟ್ಟಣದ ವಿಬಿಸಿ ಬಾಲಿಕೆಯರ ಪ್ರೌಢಶಾಲೆಯ ಅಶ್ವಿನಿ ಮೇಟಿ ಹೆಣ್ಣಿನಿಂದಲೇ ಎಲ್ಲವೂ ಸಾಗುತ್ತದೆ. ಗಂಡಿನ ಯಾವ ನೆರವೂ ಇಲ್ಲದೇ ಹೆಣ್ಣು ಸಂಸಾರದ ನೊಗ ಹೊರಬಲ್ಲಳು ಎಂದು ವಾದಿಸಿದರೆ, ಆದರ್ಶ ಆರ್ ಎಂಎಸ್ಎ ಪ್ರೌಢಶಾಲೆ ಚೈತ್ರಾ ಗಂಡು ಹೆಚ್ಚು, ಅವರಿಲ್ಲದಿದ್ದರೆ ಯಾವುದೂ ನಡೆಯುವುದಿಲ್ಲ ಎಂದು ವಾದಿಸಿದ್ದು ಪ್ರೇಕ್ಷಕರ ಗಮನ ಸೆಳೆಯಿತು. ಸಭೆಯನ್ನುದ್ದೇಶಿಸಿ ಮಹಿಳೆ ಮತ್ತು ಮಹಿಳಾ ಕಲ್ಯಾಣ ಅಧಿಕಾರಿ ಮೋಹನಕುಮಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾಂತಪ್ಪ ನಾವದಗಿ, ಮುಖ್ಯಗುರುಗಳಾದ ಎಸ್.ಎ.ಐಹೊಳೆ ಮಾತನಾಡಿದರು. ಸುಧಾರಾಣಿ ಮೇಟಿ ನಿರೂಪಿಸಿದರು. ಮಹೇಶ ಕಿತ್ತೂರ ವಂದಿಸಿದರು.







