ನಕಲಿ ಉತ್ಪನ್ನಗಳ ಸಾಗಾಟ: ಅಜ್ಮಾನ್‌ನಲ್ಲಿ ಈವರ್ಷ 27 ಭಾರತೀಯರ ಬಂಧನ

ಅಜ್ಮಾನ್,ಡಿ. 18: ನಕಲಿ ಉತ್ಪನ್ನಗಳ ಕಳ್ಳಸಾಗಾಟ ಮಾಡಿದ ಇಪ್ಪತ್ತೇಳು ಭಾರತೀಯರನ್ನು ಈವರ್ಷ ಅಜ್ಮಾನ್‌ನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ವಿವಿಧ ದೇಶಗಳಿಂದ ಒಟ್ಟು 137 ಮಂದಿಯನ್ನು ಇಂತಹ ಪ್ರಕರಣಗಳಲ್ಲಿ ಈವರ್ಷ ಸೆರೆಹಿಡಿಯಲಾಗಿದೆ. ಈವಿಷಯವನ್ನು ಅಜ್ಮಾನ್ ಪೊಲೀಸರು ಕಳ್ಳಸಾಗಣೆ, ವ್ಯಾಪಾರದಲ್ಲಿ ವಂಚನೆ ನಡೆಸುವವರ ವಿರೋಧಿ ಫಾರಂನಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.
ನಕಲಿ ಉತ್ಪನ್ನಗಳ ಸಾಗಾಟ ಇಂದು ದೇಶದ ಸುರಕ್ಷೆಯ ವಿಚಾರಗಳಿಗೆ, ಅರ್ಥವ್ಯವಸ್ಥೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಬಾಧಿಸುವ ಸಮಸ್ಯೆಯಾಗಿ ಬೆಳೆದಿದೆ ಎಂದು ಅಜ್ಮಾನ್ ಪೊಲೀಸ್ ಚೀಫ್ ಕಮಾಂಡರ್ ಬ್ರಿಗೇಡಿಯರ್ ಶೇಖ್ ಸುಲ್ತಾನ್ ಅಲ್ ನುಹೈಮಿ ಹೇಳಿದ್ದಾರೆ. ಇದನ್ನು ತಡೆಯಲು ಸಂಬಂಧಿಸಿದ ಇಲಾಖೆಗಳು ಮತ್ತು ಸಾರ್ವಜನಿಕರ ನಡುವೆ ದೊಡ್ಡ ಮಟ್ಟದ ಸಹಕಾರದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನಕಲಿ ಸಾಮಗ್ರಿಗಳ ಸಾಗಾಟದವೇಳೆ ಸಿಕ್ಕಿಬಿದ್ದವರಲ್ಲಿ ಹೆಚ್ಚಿನವರು ನಕಲಿ ಉತ್ಪನ್ನಗಳನ್ನು ತಯಾರಕ ದೇಶಕ್ಕೆ ಸೇರಿದವರಾಗಿದ್ದು, ಇವರಲ್ಲಿ 27 ಮಂದಿ ಭಾರತೀಯರು ಸಹಾ ಇದ್ದಾರೆಂದು ಅವರು ಹೇಳಿದ್ದಾರೆ. ಉಳಿದಂತೆ 38 ಮಂದಿ ಚೀನಾದವರು, 19ಮಂದಿ ಸಿರಿಯನ್ನರು, 17 ಮಂದಿ ಇರಾಕಿಗಳು, 13 ಮಂದಿ ಫಿಲಿಪ್ಪೀನಿಯರು, 11 ಮಂದಿ ಬಾಂಗ್ಲಾದೇಶೀಯರು, ಏಳು ಮಂದಿ ಪಾಕಿಸ್ತಾನೀಯರು, ಇಬ್ಬರು ಫ್ರೆಂಚರು, ಇಬ್ಬರು ಅಮೆರಿಕನ್ನರು, ಓರ್ವ ಯುಎಇಯ ಪ್ರಜೆ ಕೂಡಾ ಇದ್ದಾನೆಂದು ಅವರು ವಿವರಿಸಿದ್ದಾರೆ. ಯುಎಇಯ ವಿವಿಧ ಬಂದರುಗಳನ್ನು ಕಳ್ಳಸಾಗಣೆದಾರರು ನಕಲಿ ಉತ್ಪನ್ನಗಳ ಕಳ್ಳಸಾಗಾಟ ನಡೆಸಲು ಬಳಸಿಕೊಂಡಿದ್ದಾರೆ ಎಂದ ಅವರು, ಈವರ್ಷ ಈವರೆಗೆ 24ಪ್ರಕರಣಗಳಲ್ಲಿ 6,000 ಉತ್ಪನ್ನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಶೇಖ್ ಸುಲ್ತಾನ್ ಅಲ್ ನುಐಮಿ ತಿಳಿಸಿದ್ದಾರೆ.
ನಕಲಿ ಉತ್ಪನ್ನಗಳ ಸಾಗಾಟಕ್ಕೆ ವಿವಿಧ ಮಾರ್ಗಗಳನ್ನು ಸಾಗಣೆದಾರರು ಉಪಯೋಗಿಸುತ್ತಿದ್ದಾರೆ. ಆದರೆ ಪೊಲೀಸರು ಈ ಎಲ್ಲ ದಾರಿಗಳನ್ನು ಅರಿತಿದ್ದಾರೆ. ನಕಲಿ ಉತ್ಪನ್ನಗಳ ಸಾಗಾಟ ತಡೆಯಲು ಇಲಾಖೆಯ ಉದ್ಯೋಗಿಗಳಿಗೆ ಈವರೆಗೆ 49 ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.







