ರಾಜಕೀಯ ಪಕ್ಷಗಳು ತಮ್ಮ ಸಭೆಗೆ ಮೊದಲು ಯಾಕೆ ರಾಷ್ಟ್ರಗೀತೆ ಹಾಡುವುದಿಲ್ಲ?
ಬಿಜೆಪಿ ವಿರುದ್ಧ ಪವನ್ ಕಲ್ಯಾಣ್ ವಾಗ್ದಾಳಿ

ಹೈದರಾಬಾದ್, ಡಿ.18: ರಾಜಕೀಯ ಪಕ್ಷಗಳು ತಮ್ಮ ಸಭೆಗೆ ಮೊದಲು ಯಾಕೆ ರಾಷ್ಟ್ರಗೀತೆ ಹಾಡುವುದಿಲ್ಲ ಎಂದು ಖ್ಯಾತ ತೆಲುಗು ನಟ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ರಾಷ್ಟ್ರೀಯತೆಯ ಮಂತ್ರ ಜಪಿಸುತ್ತಿರುವ ಬಿಜೆಪಿ ಹಾಗೂ ಇತರ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ಜತೆಗೆ ಭಿನ್ನ ಅಭಿಪ್ರಾಯವನ್ನು ಹೊಂದುವುದು ಅಥವಾ ಭಿನ್ನ ನೀತಿ ಅನುಸರಿಸುವುದನ್ನು ರಾಷ್ಟ್ರವಿರೋಧಿ ಎಂದು ಪರಿಗಣಿಸಲಾಗದು ಎಂದು ಹೇಳಿದ್ದಾರೆ.
ಆಡಳಿತ ಪಕ್ಷವರು ವಿರೋಧ ಪಕ್ಷಗಳ ವಿರುದ್ಧ ಅಂತಹ ಕಠಿಣ ನಿರ್ಧಾರವನ್ನು ಕೈಗೊಂಡರೂ, ಮೊದಲು ಅವರ ನಿರ್ಧಾರವನ್ನು ಕೇಳಿಸಿಕೊಂಡು ಬಳಿಕ ಕ್ರಮ ಕೈಗೊಳ್ಳಲಿ. ಅದರ ಬದಲಾಗಿ ವಿರೋಧಿ ಧ್ವನಿ ಕೇಳಿಸಿಕೊಳ್ಳುವ ಮೊದಲು ಕ್ರಮ ಕೈಗೊಂಡರೆ, ಜೆಎನ್‌ಯು ವಿಶ್ವವಿದ್ಯಾನಿಲಯದ ವಿವಾದದಂತೆ ಅದು ಅವರಿಗೆ ತಿರುಗುಬಾಣವಾಗುತ್ತದೆ ಎಂದು ಎಚ್ಚರಿಸಿದರು. ಅದು ತಿದ್ದಿದ ಟೇಪ್ ಆಗಿತ್ತು ಎಂದು ಅವರು ಟ್ವೀಟಿಸಿದ್ದಾರೆ.
ಸತತ ಮೂರನೆ ದಿನವೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಷ್ಟ್ರೀಯತೆ ಒಂದು ಪಕ್ಷದ ಸ್ವತ್ತಾಗದು ಎಂದು ಹೇಳಿದ್ದಾರೆ. ಚಿತ್ರಮಂದಿರಗಳಲ್ಲಿ ಚಿತ್ರ ಆರಂಭಕ್ಕೆ ಮುನ್ನ ರಾಷ್ಟ್ರಗೀತೆ ಕಡ್ಡಾಯ ಮಾಡಿರುವ ಕ್ರಮವನ್ನೂ ಅವರು ಖಂಡಿಸಿದ್ದಾರೆ. ಸಂಜೆ ಆರಾಮದಾಯಕವಾಗಿ ಕುಟುಂಬದ ಜತೆ ಚಿತ್ರ ನೋಡಲು ಬರುವವರ ರಾಷ್ಟ್ರೀಯತೆಯ ಬಗ್ಗೆ ಅನುಮಾನಪಡುವುದು ಸರಿಯಲ್ಲ ಎಂದು ಹೇಳಿದ್ದಾರೆ.







