ಕಾರ್ಮಿಕರಿಗೆ ಬೆಲೆಬಾಳುವ ವಸ್ತು ಉಡುಗೊರೆ ನೀಡಿದ್ದ ಡೈಮಂಡ್ ಉದ್ಯಮಿ ವಿರುದ್ಧ ಪಿಎಫ್ ವಂಚನೆ ಆರೋಪ!
ಸೂರತ್, ಡಿ.18: ದೀಪಾವಳಿ ಬೋನಸ್ ರೂಪದಲ್ಲಿ ತನ್ನ ಉದ್ಯೋಗಿಗಳಿಗೆ ಕಾರುಗಳು, ಫ್ಲಾಟ್‌ಗಳು ಹಾಗೂ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿ ಕಾರ್ಪೋರೇಟ್ ಜಗತ್ತನ್ನೇ ನಿಬ್ಬೆರಗಾಗಿಸಿದ್ದ ಡೈಮಂಡ್ ಉದ್ಯಮಿ ಇದೀಗ ಕೆಟ್ಟ ವಿಷಯದಲ್ಲಿ ಸುದ್ದಿಯಾಗಿದ್ದಾರೆ.
6,000 ಕೋ.ರೂ. ವಹಿವಾಟು ನಡೆಸುತ್ತಿರುವ ಹರೇ ಕೃಷ್ಣ ಎಕ್ಸ್‌ಪೋರ್ಟ್ ಚೇರ್ಮನ್ ಸವ್‌ಜಿ ಧೋಲಾಕಿಯ ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಹರೇ ಕೃಷ್ಣ ಎಕ್ಸ್‌ಪೋರ್ಟ್ ಕಂಪೆನಿ ವಿರುದ್ಧ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸೂರತ್ ಪ್ರಾದೇಶಿಕ ಕಚೇರಿಯು ಕಂಪೆನಿಯ ನೌಕರರಿಗೆ ಸುಮಾರು 16.66 ಕೋಟಿ ರೂ. ಭವಿಷ್ಯ ನಿಧಿ ವಂಚಿಸಿದ ಆರೋಪದಲ್ಲಿ ನೋಟಿಸ್ ಜಾರಿ ಮಾಡಿದೆ.
ಭವಿಷ್ಯ ನಿಧಿ ಪಾವತಿಯಲ್ಲಿ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡುವುದು ಸೇರಿದಂತೆ ಹಲವು ಕಾನೂನು ಕ್ರಮ ಕಂಪೆನಿಯು ಎದುರಿಸುತ್ತಿದೆ. ಇಪಿಎಫ್‌ಒ ಶುಕ್ರವಾರ ಕೊನೆಯ ಬಾರಿ ಕಂಪೆನಿಗೆ ಬೇಡಿಕೆಯ ನೋಟಿಸ್ ಕಳುಹಿಸಿಕೊಟ್ಟಿದೆ.
ಕಂಪೆನಿಯಲ್ಲಿ ವಜ್ರ ಕಾರ್ಮಿಕರು ಸೇರಿದಂತೆ ಸುಮಾರು 3,165 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ, ಇಪಿಎಫ್‌ನಡಿ ಕೇವಲ 17 ಉದ್ಯೋಗಿಗಳನ್ನು ನೊಂದಾಯಿಸಲಾಗಿದೆ. ಈ ಮೂಲಕ ಪಿಎಫ್ ಹಾಗೂ ಫ್ಯಾಕ್ಟರಿ ಕಾಯ್ದೆಯ ನಿಯಮವನ್ನು ಉಲ್ಲಂಘಿಸಲಾಗಿದೆ. ಕಂಪೆನಿಯು ಕಳೆದ ಕೆಲವು ವರ್ಷಗಳಿಂದ ತನ್ನ ಕಾರ್ಮಿಕರಿಗೆ ಇಪಿಎಫ್‌ನ್ನು ನೀಡಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಎರಡು ವರ್ಷಗಳ ತನಿಖೆಯ ಬಳಿಕ ಕಳೆದ ವಾರ ನೋಟಿಸ್‌ನ್ನು ನೀಡಲಾಗಿದೆ. ಕಂಪೆನಿಯು 15 ದಿನಗಳೊಳಗೆ ಪ್ರತಿವರ್ಷ 12 ಶೇ. ಬಡ್ಡಿ ಹಾಗೂ ವಾರ್ಷಿಕ ನಷ್ಟ ಶೇ.25ರಷ್ಟು ದಂಡ ಸೇರಿದಂತೆ ಒಟ್ಟು 16.66 ಕೋಟಿ ರೂ. ಠೇವಣಿ ಇಡಬೇಕು ಎಂದು ಇಪಿಎಫ್‌ಒ ಪ್ರಾಧಿಕಾರ ಹೇಳಿದೆ. ಧೋಲಾಕಿಯ 2014ರಲ್ಲಿ ದೀಪಾವಳಿ ಬೋನಸ್ ರೂಪದಲ್ಲಿ ತನ್ನ ಉದ್ಯೋಗಿಗಳಿಗೆ 491 ಕಾರುಗಳು ಹಾಗೂ 207 ಫ್ಲಾಟ್‌ಗಳನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದರು.











