ಎಲ್ಲ ಅಂತರ್‌ರಾಜ್ಯ ಜಲವಿವಾದಗಳ ಇತ್ಯರ್ಥಕ್ಕೆ ಒಂದೇ ನ್ಯಾಯಾಧಿಕರಣ

ಹೊಸದಿಲ್ಲಿ,ಡಿ.18: ಎಲ್ಲ ಅಂತರ್‌ರಾಜ್ಯ ಜಲವಿವಾದಗಳನ್ನು ಶೀಘ್ರವಾಗಿ ಇತ್ಯರ್ಥ ಗೊಳಿಸಲು ಹಾಲಿ ಇರುವ ನ್ಯಾಯಾಧಿಕರಣಗಳನ್ನು ವಿಲೀನಗೊಳಿಸಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಒಂದೇ ಕಾಯಂ ನ್ಯಾಯಾಧಿಕರಣವನ್ನು ರಚಿಸಲು ಕೇಂದ್ರವು ನಿರ್ಧರಿಸಿದೆ.
ಇದರ ಜೊತೆಗೆ ಅಂತರ್‌ರಾಜ್ಯ ಜಲವಿವಾದಗಳ ಕಾಯ್ದೆ,1956ಕ್ಕೆ ತಿದ್ದುಪಡಿಗಳನ್ನು ತರುವ ಮೂಲಕ ಅಗತ್ಯವಿದ್ದಾಗ ವಿವಾದಗಳ ಪರಿಶೀಲನೆಗಾಗಿ ಕೆಲವು ಪೀಠಗಳನ್ನು ಸ್ಥಾಪಿಸಲು ಸಹ ಸರಕಾರವು ಉದ್ದೇಶಿಸಿದೆ. ವಿವಾದಗಳು ಇತ್ಯರ್ಥಗೊಂಡ ಬಳಿಕ ಈ ಪೀಠಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ. ತಿದ್ದುಪಡಿಗಳು ಸಂಸತ್ತಿನ ಮುಂದಿನ ಅಧಿವೇಶನಲ್ಲಿ ಮಂಡನೆಯಾಗುವ ಸಾಧ್ಯತೆಗಳಿವೆ ಎಂದು ಜಲ ಸಂಪನ್ಮೂಲಗಳ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್ ತಿಳಿಸಿದರು.
ನ್ಯಾಯಾಧಿಕರಣದ ಜೊತೆಗೆ ವಿವಾದ ಪರಿಹಾರ ಸಮಿತಿ(ಡಿಆರ್‌ಸಿ)ಯ ಸ್ಥಾಪನೆಯನ್ನೂ ತಿದ್ದುಪಡಿಗಳಲ್ಲಿ ಪ್ರಸ್ತಾಪಿಸಲಾಗಿದೆ. ತಜ್ಞರು ಮತ್ತು ನೀತಿರೂಪಕ ರನ್ನೊಳಗೊಂಡಿರುವ ಈ ಸಮಿತಿಯು ವಿವಾದಗಳನ್ನು ನ್ಯಾಯಾಧಿಕರಣಕ್ಕೆ ಒಪ್ಪಿಸುವ ಮುನ್ನ ಅವುಗಳನ್ನು ನಿರ್ವಹಿಸಲಿದೆ.
ಯಾವುದೇ ರಾಜ್ಯವು ಕೋರಿಕೊಂಡಾಗ ಕೇಂದ್ರವು ಡಿಆರ್‌ಸಿಯನ್ನು ರಚಿಸಲಿದೆ. ಡಿಆರ್‌ಸಿ ಮಟ್ಟದಲ್ಲಿಯೇ ಹೆಚ್ಚಿನ ವಿವಾದಗಳು ಬಗೆಹರಿಯುತ್ತವೆ ಎಂದು ನಾವು ನಿರೀಕ್ಷಿಸಿದ್ದೇವೆ. ಆದರೆ ರಾಜ್ಯಕ್ಕೆ ತೃಪ್ತಿಯಾಗದಿದ್ದರೆ ಅದು ನ್ಯಾಯಾಧಿಕರಣದ ಮೆಟ್ಟಿಲನ್ನು ಹತ್ತಬಹುದಾಗಿದೆ ಎಂದು ಶಶಿಶೇಖರ್ ತಿಳಿಸಿದರು.
ನ್ಯಾಯಾಧಿಕರಣಕ್ಕೆ ಹೆಚ್ಚಿನ ಅಧಿಕಾರ ನೀಡಲು ಅದು ಆದೇಶವೊಂದನ್ನು ಹೊರಡಿಸಿದಾಗ ಅದು ಸ್ವಯಂಚಾಲಿತವಾಗಿ ಅಧಿಸೂಚಿಲ್ಪಡಲಿದೆ. ಈವರೆಗೆ ಸರಕಾರವು ತೀರ್ಪುಗಳ ಕುರಿತು ಅಧಿಸೂಚನೆಯನ್ನು ಹೊರಡಿಸುತ್ತಿದ್ದು, ಇದು ತೀರ್ಪಿನ ಅನುಷ್ಠಾನವನ್ನು ವಿಳಂಬಗೊಳಿಸುತ್ತಿತ್ತು.
ಪ್ರಸಕ್ತ ಕಾವೇರಿ,ಮಹಾದಾಯಿ,ರಾವಿ ಮತ್ತು ಬಿಯಾಸ್,ವಂಶಧಾರಾ ಮತ್ತು ಕೃಷ್ಣಾ ಸೇರಿದಂತೆ ಎಂಟು ನ್ಯಾಯಾಧಿಕರಣಗಳಿವೆ.







