ಭ್ರಷ್ಟಾಚಾರ ನಿರ್ಮೂಲನೆ ; ಬಾಯಲ್ಲಿ ಘೋಷಣೆ ಬಗಲಲ್ಲಿ ಪೋಷಣೆ

ಆದರೆ ಇವತ್ತಿನ ದುರಂತ ಏನೆಂದರೆ ಮೋದಿ ಸರಕಾರ ನೋಟು ರದ್ದತಿಯ ನಾಟಕವಾಡುತ್ತಾ 24X 7 ಪ್ರಚಾರಯಂತ್ರದ ಮೂಲಕ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದೆ. ಜನರನ್ನು ಭಾವನಾತ್ಮಕ ಮಾತುಗಳ ಮೂಲಕ ವಂಚಿಸಲಾಗುತ್ತಿದೆ. ಮೋದಿ ಎಂದರೆ ದೇಶವನ್ನು ಉದ್ಧಾರ ಮಾಡಲೆಂದು ಜನ್ಮವೆತ್ತಿ ಬಂದ ಪವಾಡ ಪುರುಷನೋ ಎಂಬಂತೆ (ಅನತಿ ಕಾಲದಲ್ಲಿ ಪ್ರವಾದಿ ಎಂದಾದರೂ ಆಶ್ಚರ್ಯವಿಲ್ಲ!) ನಂಬಿಸಲಾಗುತ್ತಿದೆ. ಗಡಿಕಾಯುವ ಸೈನಿಕರಿಗೆ ಹೋಲಿಸಿದರೆ ಜನರ ಸಂಕಷ್ಟಗಳು ನಗಣ್ಯ ಎಂದು ಬಿಂಬಿಸಲಾಗುತ್ತಿದೆ. ಇಂದು ಒಂದಿಷ್ಟು ಕಷ್ಟವಾದರೂ ಶೀಘ್ರದಲ್ಲಿ ಭಾರೀ ಕ್ರಾಂತಿಕಾರಿ ಬದಲಾವಣೆಯಾಗಿ ‘‘ಒಳ್ಳೆಯ ದಿನಗಳು’’ ಬರಲಿವೆ ಎಂದು ಜನರ ಮಿದುಳನ್ನು ತೊಳೆಯಲಾಗುತ್ತಿದೆ. ಪರಿಣಾಮವಾಗಿ ದಶಕಗಳು ಉರುಳಿದರೂ ಕಡಮೆಯಾಗುವ ಬದಲು ದಿನೇ ದಿನೇ ಹೆಚ್ಚುತ್ತಲೇ ಇರುವ ಭ್ರಷ್ಟಾಚಾರ, ಕಾಳದಂಧೆಗಳಿಂದ ಬೇಸತ್ತ ಜನಸಾಮಾನ್ಯರು ಮೋದಿ ಸರಕಾರದ ಈ ಪುಂಖಾನುಪುಂಖ ಸುಳ್ಳುಗಳನ್ನು ನಿಜವೆಂದೇ ನಂಬುತ್ತಿದ್ದಾರೆ. ಆದರೆ ಸತ್ಯದ ಅರಿವಾಗುವಷ್ಟರಲ್ಲಿ ಕಾಲ ಮಿಂಚಿರಬಹುದು.
ನೋಟು ರದ್ದತಿಯಿಂದ ಕೇವಲ ಭ್ರಷ್ಟಾಚಾರಿಗಳಿಗೆ ಸಮಸ್ಯೆಯಾಗಿದೆ...
’’ ಈ ನುಡಿಮುತ್ತನ್ನು ಉದುರಿಸಿದ ಮಹಾನುಭಾವ ಇನ್ಯಾರೂ ಅಲ್ಲ, ದೇಶದ ಪ್ರಧಾನಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ. ಮೊನ್ನೆ ಡಿಸೆಂಬರ್ 11ರಂದು ಉತ್ತರ ಪ್ರದೇಶದ ಬಹರಾಯಿಚ್‌ನಲ್ಲಿ ಬಿಜೆಪಿಯ ಪರಿವರ್ತನಾ ರ್ಯಾಲಿಯ ಸಂದರ್ಭದಲ್ಲಿ ಅವರ ಬಾಯಿಂದ ಹೊರಬಿದ್ದ ಮಾತುಗಳಿವು (ಡೆಕ್ಕನ್ ಹೆರಾಲ್ಡ್, 12.12.2016). ಈ ಮಾತುಗಳು ಎರಡು ವಿಷಯಗಳನ್ನು ಸ್ಪಷ್ಟವಾಗಿ ಎತ್ತಿತೋರಿಸುವುದರೊಂದಿಗೆ ಅವರೊಬ್ಬ ಸಂವೇದನಾರಹಿತ ಮನುಷ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತವೆ. ಒಂದು, ತನ್ನ ಈ ‘‘ಮಹಾಯಜ್ಞ’’ ಇದುವರೆಗೆ 80ಕ್ಕೂ ಅಧಿಕ ಅಮಾಯಕ ಜನರನ್ನು ನೇರ ಆಹುತಿಯಾಗಿಸಿರುವ ವಿಷಯ ಆತನಿಗೆ ಸಮಸ್ಯೆಯೆಂದು ಅನಿಸದಿರುವುದು. ಎರಡು, ತನ್ನ ಈ ‘‘ಸರ್ಜಿಕಲ್ ದಾಳಿ’’ಯ ಪರಿಣಾಮವಾಗಿ ಜನಸಾಮಾನ್ಯರು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಆತ ಪೂರ್ತಿ ಕುರುಡಾಗಿರುವುದು. ಲೋಕಸಭೆಯನ್ನು ಕಡೆಗಣಿಸಿ ಸಾರ್ವಜನಿಕ ಸಭೆಗಳಲ್ಲಿ ಮಾತಾಡುವ ದೇಶದ ಪ್ರಧಾನಿ ಇಂದು ತೀವ್ರ ಸಮಸ್ಯೆಗೊಳಗಾಗಿರುವ ಅಸಂಘಟಿತ ವಲಯ, ಸೇವಾ ವಲಯ, ರೈತರು, ಕಾರ್ಮಿಕರು ಮತ್ತು ಕೋಟ್ಯಂತರ ಸಾಮಾನ್ಯ ಕುಟುಂಬಗಳ ಬಗ್ಗೆ ತುಟಿ ಬಿಚ್ಚದಿರುವುದು ನಿಜಕ್ಕೂ ಖೇದಕರ. ದಿನಕ್ಕೊಂದು ನಿಯಮಗಳನ್ನು ಮಾಡುತ್ತಾ, ಜನಸಾಮಾನ್ಯರಿಗೆ ಈ ಪರಿಯ ಸಮಸ್ಯೆಗಳನ್ನು ತಂದೊಡ್ಡಿದ ನಂತರ ಈಗ ಫೋಕಸ್‌ಅನ್ನು ನಗದುರಹಿತ ವ್ಯವಹಾರಕ್ಕೆ ಬದಲಾಯಿಸಲು ಕಾರಣವೇನೆಂದು ಆತ ತಿಳಿಸುತ್ತಿಲ್ಲ. ನಗದು ಕಾಳಧನದ ಪ್ರಮಾಣ ಜಿಡಿಪಿಯ ಸುಮಾರು ಶೇ.6ನ್ನು ಮೀರದಿರುವಾಗ ನೋಟು ರದ್ದತಿ ಯಾಕೆ ಅನಿವಾರ್ಯವಾಯಿತು, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆಗಳನ್ನು ನಿಗ್ರಹಿಸಲು ಅನ್ಯ ಮಾರ್ಗಗಳು ಇರಲಿಲ್ಲವೇ ಎಂಬ ಪ್ರಶ್ನೆಗೂ ಉತ್ತರ ಇಲ್ಲ.
ಮೋದಿ ಸರಕಾರ ನಿಜಕ್ಕೂ ಪ್ರಾಮಾಣಿಕವಾಗಿದ್ದರೆ ಕಪ್ಪುಹಣವನ್ನು ಸಾಮಾನ್ಯ ಜನರಿಗೆ ಬವಣೆಯಾಗದ ರೀತಿಯಲ್ಲಿ ಹೊರತೆಗೆಯಬಹುದಿತ್ತು. ಜತೆಗೆ ಕಪ್ಪುಹಣದ ಮೂಲವಾದ ಕಪ್ಪು ದಂಧೆಗಳನ್ನು ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಬಹುದಿತ್ತು. ತೆರಿಗೆ ಇಲಾಖೆ, ಕಂದಾಯ ಇಲಾಖೆ, ಜಾರಿ ನಿರ್ದೇಶನಾಲಯ, ಭ್ರಷ್ಟಾಚಾರ ನಿಗ್ರಹ ದಳ ಇವೇ ಮುಂತಾದ ಇಲಾಖೆೆಗಳನ್ನು ಬಲಪಡಿಸಿ ಪೂರ್ತಿ ಸ್ವಾತಂತ್ರ್ಯ ಕೊಟ್ಟರೆ, ಇವರ ಕಾರ್ಯಾಚರಣೆಗಳಲ್ಲಿ ಯಾವ ಹಸ್ತಕ್ಷೇಪವೂ ಇರದಂತೆ ನೋಡಿಕೊಂಡರೆ ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಿಲ್ಲವೇ? ಕೇಂದ್ರದಲ್ಲಿ ಲೋಕಪಾಲ, ರಾಜ್ಯಗಳಲ್ಲಿ ಲೋಕಾಯುಕ್ತರನ್ನು ನೇಮಿಸಿ ಅವರಿಗೆ ಭ್ರಷ್ಟ ಅಧಿಕಾರಿ, ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸುವ ಸಕಲ ಅಧಿಕಾರ ಕೊಟ್ಟರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ? ವಿದೇಶಿ ತೆರಿಗೆ ತಾಣಗಳ ಜತೆ ಸೂಕ್ತ ಒಪ್ಪಂದಗಳನ್ನು ಮಾಡಿಕೊಂಡರೆ ತೆರಿಗೆಗಳ್ಳರು ಅಲ್ಲಿ ಬಚ್ಚಿಟ್ಟಿರುವ ಸಂಪತ್ತನ್ನು ಭಾರತಕ್ಕೆ ಮರಳಿ ತರಲಾಗುವುದಿಲ್ಲವೇ? ರಾಜಕೀಯ ಪಕ್ಷಗಳು ಸ್ವೀಕರಿಸುವ ದೇಣಿಗೆಗಳ ವಿಚಾರದಲ್ಲಿ ಪಾರದರ್ಶಕತೆಯನ್ನು ಕಡ್ಡಾಯಗೊಳಿಸಿದರೆ ಕಪ್ಪುಹಣಕ್ಕೆ ಕಡಿವಾಣ ಬೀಳುವುದಿಲ್ಲವೇ? ಭ್ರಷ್ಟಾಚಾರ ವಿರೋಧ ಕಾಯ್ದೆಯನ್ನು ತೆಳುಗೊಳಿಸದೆ ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಲು ಸಾಧ್ಯವಿಲ್ಲವೇ? ಖಂಡಿತಾ ಇದೆ. ಆದರೆ ಸರಕಾರದಲ್ಲಿ ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿ ಎರಡೂ ಇಲ್ಲ. ವಾಸ್ತವದಲ್ಲಿ ಸರಕಾರದ ಅಸಲಿ ಧೋರಣೆ ಬೇರೆಯೆ ಇದೆ. ಭ್ರಷ್ಟಾಚಾರ, ಕಪ್ಪುಹಣದ ಬಗ್ಗೆ ಅಸಲಿ ಧೋರಣೆ
ತೆರಿಗೆ ತಾಣಗಳಲ್ಲೊಂದಾದ ಸ್ವಿಟ್ಝರ್‌ಲ್ಯಾಂಡ್ ಜತೆ ಮೋದಿ ಸರಕಾರ ಮಾಡಿಕೊಂಡಿರುವ ಒಪ್ಪಂದವನ್ನು ಎಲ್ಲಾದರೂ ನೋಡಿದರೆ ಜನರು ಸ್ಥಂಭೀಭೂತರಾಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಬಚ್ಚಿಟ್ಟ ಕಪ್ಪುಹಣವನ್ನೆಲ್ಲ ಹೊರಹಾಕುವೆ ಎನ್ನುವ ಇದೇ ಸರಕಾರ ಈ ಮೂಲಕ ದೊಡ್ಡ ದೊಡ್ಡ ಕಾಳಧನಿಕರು ಸ್ವಿಟ್ಝರ್‌ಲ್ಯಾಂಡಿನ ಬ್ಯಾಂಕುಗಳಲ್ಲಿರುವ ತಮ್ಮ ಕಪ್ಪುಹಣವನ್ನು ಮತ್ತಷ್ಟು ಸುರಕ್ಷಿತ ತಾಣಗಳಿಗೆ ವರ್ಗಾಯಿಸಲು ಸಕಲ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ! ಎರಡನೆಯದಾಗಿ, ರಾಜಕೀಯ ಪಕ್ಷಗಳಿಗೆ ಹರಿದು ಬರುವ ದೇಣಿಗೆಗಳ ಮೂಲ ಮತ್ತು ಪರಿಮಾಣಗಳನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸಿದರೆ ತನ್ನ ಗುಟ್ಟೆಲ್ಲಾ ರಟ್ಟಾಗಲಿದೆ ಎನ್ನುವ ಕಾರಣಕ್ಕೆ ಪಾರದರ್ಶಕತೆಯನ್ನೂ ವಿರೋಧಿಸುತ್ತಿದೆ! ಮೂರನೆಯದಾಗಿ, ಭ್ರಷ್ಟಾಚಾರ ನಿರೋಧ ಕಾಯ್ದೆಯನ್ನು ಭ್ರಷ್ಟಾಚಾರಿಗಳಿಗೇ ನೆರವಾಗುವ ರೀತಿಯಲ್ಲಿ ತಿದ್ದುಪಾಟು ಮಾಡಿ ಇದೀಗ ಅದನ್ನು ಅನುಮೋದನೆಗಾಗಿ ಸಂಸತ್ತಿನ ಮುಂದೆ ಇರಿಸಿದೆ! ಈ ಕಾಯ್ದೆ ಎಲ್ಲಾದರೂ ಜಾರಿಗೊಂಡಲ್ಲಿ ಭ್ರಷ್ಟ ರಾಜಕಾರಣಿ ಮತ್ತು ಅಧಿಕಾರಿಗಳ ಕೂಟಗಳಿಗೆ ಎಲ್ಲಾ ವಿಧದ ಗಂಭೀರ ತನಿಖೆಗಳಿಂದ ರಕ್ಷಣೆ ದೊರೆಯಲಿದೆ
(Organisation for Econnomic Co-operation and Development; OECD) ಒಇಸಿಡಿ ರಾಷ್ಟ್ರಗಳು ಮತ್ತು ಐರೋಪ್ಯ ದೇಶಗಳು ಒಂದು ಜಂಟಿ ಒಡಂಬಡಿಕೆ ಮಾಡಿಕೊಂಡಿವೆ. ಅದನ್ನು ತೆರಿಗೆ ವಿಚಾರಗಳಲ್ಲಿ ಪರಸ್ಪರ ಆಡಳಿತಾತ್ಮಕ ನೆರವಿನ ಒಡಂಬಡಿಕೆ ಎಂದು ಕರೆಯಲಾಗಿದೆ. ಅದರ ಉದ್ದೇಶ: 1) ತೆರಿಗೆ ವಿಚಾರಗಳಲ್ಲಿ ಪರಸ್ಪರರಿಗೆ ನೆರವಾಗುವುದು 2) ತೆರಿಗೆ ಕಾಯ್ದೆಗಳನ್ನು ಅನ್ವಯಿಸುವ ಮತ್ತು ಒತ್ತಾಯಪೂರ್ವಕವಾಗಿ ಹೊರಿಸುವ ವಿಷಯದಲ್ಲಿ ಸದಸ್ಯ ರಾಷ್ಟ್ರಗಳು ತಮ್ಮ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ಪರಿಣಾಮಕಾರಿಯಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳುವುದನ್ನು ಖಚಿತಪಡಿಸುವುದು. ಸದರಿ ಒಡಂಬಡಿಕೆಗೆ ಕೆಲವೊಂದು ತಿದ್ದುಪಡಿ ಮಾಡಲಾಗಿದ್ದು ಸ್ವಿಟ್ಝರ್‌ಲ್ಯಾಂಡ್ ಸೆಪ್ಟಂಬರ್ 2016ರ ಕೊನೆಯಲ್ಲಿ ಅದನ್ನೆಲ್ಲ ಅನುಮೋದಿಸಿದೆ ಮತ್ತು ಅದು ಅಧಿಕೃತವಾಗಿ ಜನವರಿ 2017ರಿಂದ ಜಾರಿಗೆ ಬರಲಿದೆ. ಪನಾಮಾ ದೇಶ ಸ್ವಿಟ್ಝರ್‌ಲ್ಯಾಂಡ್‌ಗೂ ಮೊದಲೇ ಈ ಒಡಂಬಡಿಕೆಯನ್ನು ಒಪ್ಪಿಕೊಂಡಿದೆ. ಸ್ವಿಟ್ಝರ್‌ಲ್ಯಾಂಡ್‌ನ ಜಿನೀವಾದ ಎಚ್‌ಎಸ್‌ಬಿಸಿ ಬ್ಯಾಂಕು ಮತ್ತು ‘‘ಪನಾಮಾ ಪೇಪರ್ಸ್’’ ಮೂಲಕ ಸೋರಿಕೆಯಾದ ಮಾಹಿತಿಗಳಿಗೆ ವಿಶ್ವದೆಲ್ಲೆಡೆ ವ್ಯಕ್ತವಾದ ತೀಕ್ಷ್ಣ ಪ್ರತಿಕ್ರಿಯೆಗಳೇ ಇದಕ್ಕೆ ಕಾರಣ.
ವಿಷಯ ಹೀಗಿದ್ದರೂ ನಮ್ಮಲ್ಲಿ ನಡೆದಿರುವುದೇ ಬೇರೆ. ಭಾರತ ಮತ್ತು ಸ್ವಿಟ್ಝರ್‌ಲ್ಯಾಂಡ್ ಇದೇ ನವೆಂಬರ್ 22ರಂದು ಭಾರೀ ಅನುಮಾನಗಳಿಗೆ ಎಡೆಮಾಡಿಕೊಡುವಂಥಾ ಜಂಟಿ ಘೋಷಣೆಯೊಂದಕ್ಕೆ ಸಹಿ ಹಾಕಿವೆ. ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಈ ಘೋಷಣೆಗೆ ಭಾರತದ ಪರವಾಗಿ ಕೇಂದ್ರ ನೇರ ತೆರಿಗೆ ಮಂಡಳಿಯ ಅಧ್ಯಕ್ಷರು ಸಹಿ ಹಾಕಿದ್ದಾರೆ. ಘೋಷಣೆಯ ಕುರಿತು ಮಂಡಳಿ ನೀಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ ಸ್ವಿಟ್ಝರ್‌ಲ್ಯಾಂಡ್ ಸರಕಾರ ಭಾರತೀಯರ ಸ್ವಿಸ್ ಬ್ಯಾಂಕ್ ಖಾತೆಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು 2019ರ ಸೆಪ್ಟಂಬರ್ ನಂತರದಿಂದ ತನ್ನಷ್ಟಕ್ಕೆ ತಾನು ಬಿಡುಗಡೆ ಮಾಡುವುದಕ್ಕೆ ಭಾರತ ಒಪ್ಪಿದೆ. ಆದರೆ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಇದು 2018ರ ನಂತರ ತೆರೆಯಲಾಗುವ ಖಾತೆಗಳಿಗಷ್ಟೇ ಸೀಮಿತವಾಗಿದೆ! ಇದರ ಅರ್ಥ ಒಂದೇ: ಕಾಳದಂಧೆಕೋರರಿಗೆ ತಮ್ಮ ಸಂಪತ್ತನ್ನು ಬೇರೆಡೆಗೆ ಸಾಗಿಸಲು ಧಾರಾಳ ಸಮಯಾವಕಾಶ ಒದಗಿಸಲಾಗಿದೆ.
ಫ್ರಾನ್ಸ್ ಸರಕಾರ ಎಚ್‌ಎಸ್‌ಬಿಸಿ ಜಿನೀವಾ ಶಾಖೆಯಲ್ಲಿ ಖಾತೆ ಹೊಂದಿರುವ 628 ಭಾರತೀಯರ ಹೆಸರುಗಳನ್ನು ಭಾರತಕ್ಕೆ ಕೊಟ್ಟು ನಾಲ್ಕು ವರ್ಷಗಳೇ ಸಂದಿವೆ. ಅವುಗಳ ಪೈಕಿ 428 ಮಂದಿಯ ಮೇಲೆ ನೇರ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಆದರೆ ಇದುವರೆಗೆ ಬರೀ 128 ಪ್ರಕರಣಗಳಲ್ಲಷ್ಟೇ ತೆರಿಗೆಯ ಪ್ರಮಾಣವನ್ನು ನಿರ್ಧರಿಸಲಾಗಿದೆೆ. ತೆರಿಗೆ ತಪ್ಪಿಸಿ, ಲೆಕ್ಕಪತ್ರ, ದಾಖಲೆಗಳನ್ನು ಒದಗಿಸಲು ವಿಫಲರಾಗಿರುವವರ ಮೇಲೆ ಒಟ್ಟು ದಾಖಲಿಸಲಾಗಿರುವ ಪ್ರಕರಣಗಳ ಸಂಖ್ಯೆ ಕೇವಲ 60. ‘‘ಪನಾಮಾ ಪೇಪರ್ಸ್’’ನಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 16ನೆ ಸ್ಥಾನದಲ್ಲಿದೆ. ಕೇವಲ ಸೋರಿಕೆಯಾಗಿರುವ ಕಡತಗಳಲ್ಲಷ್ಟೆ ಉಲ್ಲೇಖವಾಗಿರುವಂಥಾ 1668 ಖಾತೆದಾರರು ಮತ್ತು 26,999 ಖಾತೆಗಳಲ್ಲೆ ಸುಮಾರು ರೂ. 26,820 ಕೋಟಿಗಳ ಕಥೆ ಹುದುಗಿದೆ. 2014ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಮೋದಿ ವಿದೇಶಗಳಲ್ಲಿರುವ ಅಕ್ರಮ ಸಂಪತ್ತಿನ ಮೊತ್ತ ರೂ.6500 ಕೋಟಿ ಎಂದಿದ್ದರು. ಆದರೆ ಕಪ್ಪುಹಣ ಕಾಯ್ದೆ (ಬಹಿರಂಗಪಡಿಸದಿರುವ ವಿದೇಶಿ ಆದಾಯ ಸೊತ್ತು) ಮತ್ತು ತೆರಿಗೆ ಕಾಯ್ದೆ 2015ರ ನಂತರ ಇದೇ ಮೊತ್ತ ರೂ. 2400 ಕೋಟಿಗೆ ಇಳಿದಿದೆ! ಕೊನೆಗೆ ಏನಾಯಿತೆಂದರೆ ಸರಕಾರ 2014ರ ಚುನಾವಣೆಗಳ ಸಂದಭರ್ದಲ್ಲಿ ಬಾಜಪದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ; ತೆರಿಗೆಗಳ್ಳರ ಮೇಲೆ ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿದ ಹಿರಿಯ ನ್ಯಾಯವಾದಿ ರಾಮ್ ಜೇಟ್ಮಲಾನಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ ಮೇಲೆ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಯಿತು. ಅದರ ವರದಿ ಇನ್ನೂ ಬಹಿರಂಗವಾಗಿಲ್ಲ. ಇದೆಲ್ಲವನ್ನು ನೋಡಿದಾಗ ತಿಳಿಯುವುದಿಲ್ಲವೆೆ ಕಪ್ಪುಹಣವನ್ನು ಮಟ್ಟಹಾಕುತ್ತೇವೆ ಎನ್ನುವ ಮೋದಿ ಸರಕಾರದ ಮಾತು ಎಷ್ಟೊಂದು ಅಪ್ರಾಮಾಣಿಕ ಎಂದು.
(National Institute of Public Finance and Policy) ಕಾಳಧನಿಕರು ನೇರ ತೆರಿಗೆ ತಪ್ಪಿಸಿ ಆ ಹಣದ ಬಹುಪಾಲನ್ನು ವಿದೇಶಗಳಲ್ಲಿ ಸುರಕ್ಷಿತವಾಗಿ ಇರಿಸುತ್ತಾರೆ ಮತ್ತು ಚಿನ್ನ, ರಿಯಲ್ ಎಸ್ಟೇಟ್ ಇತ್ಯಾದಿಗಳಲ್ಲಿ ಹೂಡುತ್ತಾರೆ. ಪರಿಣಾಮವಾಗಿ ನೇರ ತೆರಿಗೆಗಳನ್ನು ಪಾವತಿಸುವಷ್ಟು ಆದಾಯ ಹೊಂದಿರದ ಸಾಮಾನ್ಯ ಜನರೆಲ್ಲಾ ಮಾರಾಟ ತೆರಿಗೆ, ವ್ಯಾಟ್ ಇತ್ಯಾದಿಗಳ ರೂಪದಲ್ಲಿ ಸಾಕಷ್ಟು ದೊಡ್ಡ ಮೊತ್ತದಲ್ಲಿ ಪರೋಕ್ಷ ತೆರಿಗೆಗಳನ್ನು ಪಾವತಿಸಬೇಕಾಗಿ ಬಂದಿದೆೆ. 2013ರಲ್ಲಿ ಕಪ್ಪು ಆರ್ಥಿಕತೆಯಲ್ಲಿರುವ ಒಟ್ಟು ಕಾಳಧನದ ಪ್ರಮಾಣ ಜಿಡಿಪಿಯ ಸುಮಾರು ಶೇ. 75ರಷ್ಟು ಇತ್ತು. ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ರಾಜನೀತಿ ಸಂಸ್ಥೆ ಕೊಟ್ಟಿರುವ ಗೋಪ್ಯ ವರದಿಯ ಪ್ರಕಾರ ಕಪ್ಪು ಆರ್ಥಿಕತೆಯ ಪ್ರಧಾನ ಕ್ಷೇತ್ರಗಳೆಂದರೆ ಉನ್ನತ ಶಿಕ್ಷಣ, ರಿಯಲ್ ಎಸ್ಟೇಟ್ ಮತ್ತು ಗಣಿಗಾರಿಕೆ. 2015-16ರ ಆರ್ಥಿಕ ಸಮೀಕ್ಷೆ ತೆರಿಗೆ ಜಿಡಿಪಿ ನಿಷ್ಪತ್ತಿಯನ್ನು ಹೆಚ್ಚಿಸಲು ಸೂಚಿಸುವುದರೊಂದಿಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚು ಖರ್ಚು ಮಾಡುವಂತೆ ಹೇಳಿದೆ. ಕಪ್ಪು ಆರ್ಥಿಕತೆಗೆ ಇತಿಶ್ರೀ ಹೇಳಿದರೆ, ವಿದೇಶಗಳಲ್ಲಿರುವ ಕಪ್ಪುಹಣವನ್ನು ತಂದರೆ ಇದು ಸಾಧ್ಯವಾಗಬಹುದು. ಆದರೆ ಸ್ವಿಟ್ಝರ್‌ಲ್ಯಾಂಡ್ ಜತೆಗಿನ ಒಪ್ಪಂದವನ್ನು ನೋಡಿದರೆ ಅಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ಮರಳಿ ತರುವ ವಿಚಾರದಲ್ಲಿ ಮೋದಿ ಸರಕಾರಕ್ಕೆ ಯಾವುದೇ ಆಸಕ್ತಿ ಇರುವಂತಿಲ್ಲ. ನೋಟು ರದ್ದತಿಗಾಗಿ ಮತ್ತು ಇದೀಗ ನಗದುರಹಿತ ವಹಿವಾಟಿಗಾಗಿ ಇಷ್ಟೊಂದು ಶಕ್ತಿ ಮತ್ತು ಸಂಪನ್ಮೂಲಗಳನ್ನು ವ್ಯಯಿಸುತ್ತಿರುವ ಸರಕಾರ ಯಾಕೆ ವಿದೇಶಗಳಲ್ಲಿರುವ ಕಪ್ಪುಹಣದ ಬಗ್ಗೆ ಸುಮ್ಮನಾಗಿದೆ ಮತ್ತು ಸ್ವಿಟ್ಝರ್‌ಲ್ಯಾಂಡ್ ಜತೆ ಇಂಥಾ ಕೆಲಸಕ್ಕೆ ಬಾರದ ಒಪ್ಪಂದ ಮಾಡಿಕೊಂಡಿದೆ ಎಂದು ಮತದಾರರು ಕೇಳಬೇಕಾಗಿದೆ. ಪ್ರತಿಯೊಬ್ಬ ಭಾರತೀಯನ ಜೇಬಿಗೆ ರೂ. 15 ಲಕ್ಷ ಹಾಕುವೆನೆಂದ ಮೋದಿಯ ಭರವಸೆ ಬರೀ ಚುನಾವಣಾ ಜುಮ್ಲಾ ಎನ್ನುವ ಸತ್ಯಾಂಶವನ್ನು ಮತದಾರರು ಈಗಲಾದರೂ ಅರ್ಥ ಮಾಡಿಕೊಳ್ಳುವರೇ?
ರಾಜಕೀಯ ಪಕ್ಷಗಳ ದೇಣಿಗೆ ಮತ್ತು ಪಾರದರ್ಶಕತೆ
(Foreign Contribution (Regulation) Act 2010; FCRA) ವೇದಾಂತ ಎಂಬ ಕಾರ್ಪೊರೇಟ್ ಸಂಸ್ಥೆಯಿಂದ ಹಣ ಪಡೆದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ವಿದೇಶಿ ದೇಣಿಗೆ ಕಾಯ್ದೆಯ ಉಲ್ಲಂಘನೆ ಮಾಡಿರುವುದಾಗಿ ದಿಲ್ಲಿ ಉಚ್ಚನ್ಯಾಯಾಲಯ ಮಾರ್ಚ್ 2014ರಲ್ಲಿ ತೀರ್ಪು ನೀಡಿತ್ತು. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಮೋದಿ ಸರಕಾರ ಈ ವರ್ಷದ ಫೆಬ್ರವರಿಯಲ್ಲಿ ಎಫ್‌ಸಿಆರ್‌ಎ ಕಾಯ್ದೆಗೆ ಅನುಕೂಲಕರವಾದ ತಿದ್ದುಪಡಿ ತಂದಿರುವ ಫಲವಾಗಿ ಈಗ ಆ ಪ್ರಕರಣವನ್ನು ಹಿಂತೆಗೆದುಕೊಳ್ಳಲಾಗಿದೆ!
ಕೇಂದ್ರ ಮಾಹಿತಿ ಆಯೋಗದ ಪೂರ್ಣ ಪೀಠ ಜೂನ್ 2013ರಲ್ಲಿ ನೀಡಿರುವ ತೀರ್ಪಿನ ಪ್ರಕಾರ ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ, ಬಿಎಸ್‌ಪಿ, ಸಿಪಿಎಂ ಮತ್ತು ಸಿಪಿಐ ಪಕ್ಷಗಳು ‘‘ಸಾರ್ವಜನಿಕ ಪ್ರಾಧಿಕಾರ’’ಗಳಾಗಿದ್ದು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿ ಬರುತ್ತವೆ. ಆದರೆ ಯಾವೊಂದು ಪಕ್ಷವೂ ಆಯೋಗದ ಆದೇಶವನ್ನು ಪರಿಪಾಲಿಸಿಲ್ಲ. ಆಯೋಗದ ನೋಟಿಸುಗಳಿಗೂ ಉತ್ತರಿಸಿಲ್ಲ. ಕೊನೆಗೆ ಮೇ 2015ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಯಿತು. ಈ ಕುರಿತು ಅದೇಆಗಸ್ಟ್‌ನಲ್ಲಿ ಅಫಿದವಿತ್ ಸಲ್ಲಿಸಿದ ಮೋದಿ ಸರಕಾರ ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತರಬಾರದೆಂದು ಹೇಳಿದೆ!
ತಾನು ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕಲಿದ್ದೇನೆ, ಕಪ್ಪುಹಣವನ್ನು ನಾಶಪಡಿಸಲಿದ್ದೇನೆ ಎಂದು ಘೋಷಿಸುವ ಮೋದಿ ಸರಕಾರ ಎಪ್‌ಸಿಆರ್‌ಎ ಕಾಯ್ದೆ ಅಡಿ ನಿಷಿದ್ಧವಾಗಿರುವ ದೇಣಿಗೆಗಳನ್ನು ಯಾವುದೇ ಮುಲಾಜಿಲ್ಲದೆ ಸ್ವೀಕರಿಸುತ್ತದೆ ಮಾತ್ರವಲ್ಲ ಅದರ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸದೆ ಗೌಪ್ಯವಾಗಿರಿಸಲು ಬಯಸುತ್ತದೆ. ಇದರರ್ಥವೇನು? ಆದುದರಿಂದ ಎಲ್ಲಿಯ ತನಕ ರಾಜಕೀಯ ಪಕ್ಷಗಳು ತಮ್ಮ ಹಣಕಾಸಿನ ವಿಷಯದಲ್ಲಿ ಪಾರದರ್ಶಕತೆ ಪಾಲಿಸುವುದಿಲ್ಲವೊ ಅಲ್ಲಿಯ ತನಕ ಕಪ್ಪುಹಣ ನಿರ್ಮೂಲನೆ ಎನ್ನುವುದು ಬರೀ ಬೂಟಾಟಿಕೆಯ ಮಾತಾಗಿ ಉಳಿಯುತ್ತದೆ ಎಂಬುದನ್ನು ಮತದಾರರು ಮನಗಾಣಬೇಕು. ಇಂಥವರು ಕಾಳಧನದ ವಿರುದ್ಧ ನಡೆಸುತ್ತಿರುವ ತಥಾಕಥಿತ ಹೋರಾಟ ಎಷ್ಟು ಸಾಚಾ ಆಗಿರಲು ಸಾಧ್ಯ ಎಂದು ಯೋಚಿಸಬೇಕು.
ಆದರೆ ಇವತ್ತಿನ ದುರಂತ ಏನೆಂದರೆ ಮೋದಿ ಸರಕಾರ ನೋಟು ರದ್ದತಿಯ ನಾಟಕವಾಡುತ್ತಾ 24X 7 ಪ್ರಚಾರಯಂತ್ರದ ಮೂಲಕ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದೆ. ಜನರನ್ನು ಭಾವನಾತ್ಮಕ ಮಾತುಗಳ ಮೂಲಕ ವಂಚಿಸಲಾಗುತ್ತಿದೆ. ಮೋದಿ ಎಂದರೆ ದೇಶವನ್ನು ಉದ್ಧಾರ ಮಾಡಲೆಂದು ಜನ್ಮವೆತ್ತಿ ಬಂದ ಪವಾಡ ಪುರುಷನೋ ಎಂಬಂತೆ (ಅನತಿ ಕಾಲದಲ್ಲಿ ಪ್ರವಾದಿ ಎಂದಾದರೂ ಆಶ್ಚರ್ಯವಿಲ್ಲ!) ನಂಬಿಸಲಾಗುತ್ತಿದೆ. ಗಡಿಕಾಯುವ ಸೈನಿಕರಿಗೆ ಹೋಲಿಸಿದರೆ ಜನರ ಸಂಕಷ್ಟಗಳು ನಗಣ್ಯ ಎಂದು ಬಿಂಬಿಸಲಾಗುತ್ತಿದೆ (ಆದರೆ ಇತ್ತೀಚಿನ ಘಟನೆಯೊಂದರಲ್ಲಿ ನೋಟು ರದ್ದತಿಗೆ ಒಬ್ಬ ಸೈನಿಕನೇ ಬಲಿಯಾಗಿದ್ದಾನೆ. ಆಗ್ರಾದ ನಿವೃತ್ತ ಯೋಧನೊಬ್ಬ ತನ್ನ ಹೃದಯ ಚಿಕಿತ್ಸೆಗೆ ಬೇಕಾಗಿದ್ದ ಹಣವನ್ನು ತನ್ನದೇ ಖಾತೆಯಿಂದ ಪಡೆಯಲು ಸತತ ಒಂದು ವಾರ ಪ್ರಯತ್ನಿಸಿ ವಿಫಲನಾದಾಗ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ). ಇಂದು ಒಂದಿಷ್ಟು ಕಷ್ಟವಾದರೂ ಶೀಘ್ರದಲ್ಲಿ ಭಾರೀ ಕ್ರಾಂತಿಕಾರಿ ಬದಲಾವಣೆಯಾಗಿ ‘‘ಒಳ್ಳೆಯ ದಿನಗಳು’’ ಬರಲಿವೆ ಎಂದು ಜನರ ಮಿದುಳನ್ನು ತೊಳೆಯಲಾಗುತ್ತಿದೆ. ಪರಿಣಾಮವಾಗಿ ದಶಕಗಳು ಉರುಳಿದರೂ ಕಡಮೆಯಾಗುವ ಬದಲು ದಿನೇ ದಿನೇ ಹೆಚ್ಚುತ್ತಲೇ ಇರುವ ಭ್ರಷ್ಟಾಚಾರ, ಕಾಳದಂಧೆಗಳಿಂದ ಬೇಸತ್ತ ಜನಸಾಮಾನ್ಯರು ಮೋದಿ ಸರಕಾರದ ಈ ಪುಂಖಾನುಪುಂಖ ಸುಳ್ಳುಗಳನ್ನು ನಿಜವೆಂದೇ ನಂಬುತ್ತಿದ್ದಾರೆ. ಆದರೆ ಸತ್ಯದ ಅರಿವಾಗುವಷ್ಟರಲ್ಲಿ ಕಾಲ ಮಿಂಚಿರಬಹುದು.
thewire.in (ಆಧಾರ: ನಲ್ಲಿ ಆಲ್ಬರ್ಟಿನಾ ಅಲ್ಮೇಡಾರ Double Standards; Time to Get Real About Foreign Money and Black Money in Politics; 12.12.2016Time to Blow the Whistle)







