‘ಪೇಟರ್’ ಮತ್ತು ‘ಬ್ಯಾಂಕ್ರಪ್ಟ್ಸ್
ಬೌದ್ಧಿಕ ಸಿನೆಮಾದ ಇಬ್ಬಗೆ
.jpg)
ಮನೆಯಲ್ಲಿ ಧೂಮಪಾನ ಕೂಡದೆನ್ನುವ ಅನುರಾಧಾಳ ತಾಕೀತಿನಿಂದಾಗಿ ಮನೆಯ ಶೌಚದ ಕೊಠಡಿ ಧೂಮಪಾನ ವಲಯವಾಗಿ ಬಳಕೆಯಾಗುತ್ತದೆ. ಕಂಪ್ಯೂಟರಿನಲ್ಲಿ ಕಾಣಸಿಗುವ ಲೈಂಗಿಕತೆಯನ್ನು ಬಿಂಬಿಸುವ ಚಿತ್ರಗಳು ಅಶ್ಲೀಲವಲ್ಲದಿದ್ದರೂ, ಕೇಳಸಿಗುವ ಲೈಂಗಿಕ ಕ್ರಿಯೆಗಳ ಉತ್ಕಟಾನುಭವದ ನರಳಿಕೆ-ಚೀರಾಟಗಳು ಅಶ್ಲೀಲವೆನಿಸಬಹುದು. ಮೆಟರ್ನಿಟಿ ಲೀವ್ ಚಿತ್ರಕತೆಯ ಚರ್ಚೆಯಲ್ಲಿ ಪ್ರಸ್ತಾಪವಾಗುವ ಇಂಥ ಲೈಂಗಿಕ ವಿಷಯಗಳನ್ನು ಚಿತ್ರದಲ್ಲಿ ತಂದಾಗ ಸೆನ್ಸಾರ್ ಮಂಡಳಿ ಅವನ್ನು ಅಶ್ಲೀಲವೆಂದು ಆಕ್ಷೇಪಿಸಬಹುದು. ಆಗ ಶೌಚಗೃಹದ ಬಾಗಿಲಿನ ಮೇಲೆ ಅಥವಾ ತೆರೆಂು ಮೇಲೆ, ಧೂಮಪಾನ ಹಾನಿಕಾರಕ, ಅತಿಯಾದ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆಗಳನ್ನು ಅಂಟಿಸಿಬಿಟ್ಟರೆ ಅಶ್ಲೀಲತೆಯ ಸಮಸ್ಯೆ ಉದ್ಭವಿಸುವುದಿಲ್ಲ ಎಂಬ ಲೋಕೇಶ್-ತ್ರಿಪುರಾರಿ ಸಿನೆಮಾ ಸಹೋದರರ ಲೇವಡಿಯ ಮಾತುಗಳು, ಕಾನೂನುಬದ್ಧ ಎಚ್ಚರಿಕೆಯನ್ನು ಕಡ್ಡಾಯ ಮಾಡುವ ನಾಗರಿಕ ಸರಕಾರಗಳ, ಇಡೀ ಭಾರತದ ಚಿತ್ರೋದ್ಯಮ ಮತ್ತು ಸೆನ್ಸಾರ್ ಮಂಡಳಿಗಳ ಮೇಲಿನ ವ್ಯಾಖ್ಯೆಯಾಗುತ್ತವೆ.
ತಮಿಳುನಾಡಿನ ತೋಡರ ಹುಡುಗಿಯ ಜೊತೆ ಮದುವೆ-ರಹಿತ ದಾಂಪತ್ಯ, ಹಾವನ್ನು ತಿನ್ನುವ ಮೆಕ್ಸಿಕೋದ ಹುಡುಗಿಯ ಜೊತೆ ಲೈಂಗಿಕ ಸಂಬಂಧ, ಚೀನಿ ಹುಡುಗಿಯೊಂದಿಗೆ ಎಸ್ಕಾರ್ಟ್, ಹಾಗೆಯೇ ಬ್ರೆಝಿಲ್, ಜಪಾನೀ ಹುಡುಗಿಯರ ಜೊತೆ ಲೈಂಗಿಕ ಸಂಬಂಧ ಇತ್ತೆಂದು ಹೇಳಿಕೊಳ್ಳುವ ತ್ರಿಪುರಾರಿ, ಅನುರಾಧಾಳ ವಯಸ್ಸಿನ ಅರ್ಧದಷ್ಟು, ಅಥವಾ ಇನ್ನೂ ಎಳೆಯ ಹುಡುಗಿಯರ ಜೊತೆ ಲೈಂಗಿಕ ಸುಖ ಪಡೆಯುವ ತನಗೆ ಕೃತಕ ಸುಖ ಕೊಡುವ ಅಶ್ಲೀಲ ಚಿತ್ರಗಳನ್ನು ನೋಡುವ ಅಭಿರುಚಿಯಿಲ್ಲ ಎನ್ನುತ್ತಾನೆ. ಇಪ್ಪತ್ತು ವರ್ಷಗಳ ಹಿಂದೆ ಅಗಲ ಕಣ್ಣಿನ, ದೊಡ್ಡ ಕುಂಕುಮದ ಬಂಗಾಳಿ ಹುಡುಗಿ, ಈಗ ಇಪ್ಪತ್ತು ವರ್ಷ ಪ್ರಾಯದ ಮಗನ ತಾಯಿ ಆಗಿರುವ ಫಿಲ್ಮ್ ಇನ್‌ಸ್ಟಿಟ್ಯೂಟಿನ ಹಿರಿಯ ಸಹಪಾಠಿ, ಮಂಜುಳಾ ಘೋಷ್‌ನೊಂದಿಗೆ ಕೂಡಿದಾಗಲೂ ಮತ್ತು ಯಾವುದೇ ಲೈಂಗಿಕ ಕೂಟದಲ್ಲಿ ಸದಾ ಕಾಂಡೋಮ್ ಬಳಸುವ ತಾನು ಒಮ್ಮೆ ಮಾತ್ರ, ಅಂದರೆ ಅನುರಾಧಾಳೊಂದಿಗಿನ ಕೂಟದಲ್ಲಿ ಮಾತ್ರ ಬಳಸದ್ದರಿಂದ, ಪ್ರಿಯಾ ತನ್ನಿಂದ ಅನುರಾಧಾಳಲ್ಲಿ ಹುಟ್ಟಿದ ತನ್ನ ಮಗಳೆಂದು; ತನ್ನ ಮತ್ತು ಲೋಕೇಶ್-ಅನು ಮಧ್ಯೆ ಆಗಿರುವ ಒಪ್ಪಂದದಂತೆ ತಾನು ಲೋಕೇಶ್‌ಶರ್ಮಾ-ಅನುರಾಧಾ ಪಿಳ್ಳೆ ಸಂಸಾರದಲ್ಲಿ ತಲೆ ಹಾಕದಿರುವುದಕ್ಕೆಸದಾ ಬದ್ಧನೆಂದೂ ಸಾರುವ ತ್ರಿಪುರಾರಿ ಗುಪ್ತಾ; ಒಂದು ಕಿವಿಗೆ ಓಲೆ ಧರಿಸಿದ್ದು, ಒಂದು ಸಂದರ್ಭದಲ್ಲಿ, ‘ಬಾ ಬಾತ್‌ರೂಮಿಗೆ ಹೋಗೋಣ’ ಎಂದು ಲೋಕೇಶನನ್ನು ಸಂದಿಗ್ಧವಾಗಿ ಕರೆಯುವುದರ ಮೂಲಕ ‘ಗೇ’ ಇರಬಹುದೆ ಎಂಬ ವಿನೋದಭರಿತ ಗುಮಾನಿ ಹುಟ್ಟಿಸುತ್ತಾನೆ. ತನಗೆ ಅನುರಾಧಾಳಿಂದ ಮಕ್ಕಳಾಗಿಲ್ಲದಿರಲು ಕಾರಣ, ಮಕ್ಕಳು ತನಗೆ ಬೇಕಿಲ್ಲದಿರಬಹುದು; ಅಥವಾ ಪ್ರಿಯಾ ಅನುರಾಧಾಳ ದತ್ತುಮಗಳಾಗಿರಬಹುದು ಎಂಬ ಸಂದಿಗ್ಧ ಸಾಧ್ಯತೆಗಳನ್ನು ಪ್ರಸ್ತಾಪಿಸುವ ಲೋಕೇಶ್; ಹೆಂಡತಿ ಮನೆಯಲ್ಲಿಲ್ಲದಿದ್ದಾಗ ಕಂಪ್ಯೂಟರಿನಲ್ಲಿನ ಚಿತ್ರ ಮತ್ತು ಶಬ್ದಗಳಲ್ಲಿ ತನ್ನ ಲೈಂಗಿಕ ಬರಡುತನವನ್ನು ನೀಗಿಕೊಳ್ಳಲೆತ್ನಿಸುವ ಲೋಕೇಶ್; ಒಂದು ಸಂದರ್ಭದಲ್ಲಿ ತ್ರಿಪುರಾರಿಯಂತೆಯೇ ‘‘ನಡಿ ಬಾತ್‌ರೂಮಿಗೆ ಹೋಗೋಣ’’ ಎಂಬ ಸಂದಿಗ್ಧ ಆಹ್ವಾನದ ಮೂಲಕ ಆತ ಲೈಂಗಿಕವಾಗಿ ಅಸಮರ್ಥನಿರಬಹುದೆ? ಅಥವಾ ‘ಗೇ’ ಇರಬಹುದೇ ಎಂಬ ಗುಮಾನಿಯನ್ನು ಹುಟ್ಟಿಸುತ್ತಾನೆ.
ಸುಳ್ಳು, ಕಲ್ಪನೆ ಮತ್ತು ಕಲಾಸತ್ಯಗಳ ನಡುವಿನ ಸಂಬಂಧಗಳನ್ನು, ಹಣದ ಕೊರತೆ, ಅಂದರೆ ಅರ್ಥದಾರಿದ್ರ್ಯ, ಕಲ್ಪನಾ ಶ್ರೀಮಂತಿಕೆ ಮತ್ತು ವಾಸ್ತವ ಸತ್ಯಗಳ ಸಂಬಂಧಗಳೊಂದಿಗೆ ಜೊತೆ ಮಾಡಿ ಅವುಗಳ ಸ್ಥಾನಗಳನ್ನು ‘ಬ್ಯಾಂಕ್ರಪ್ಟ್ಸ್’ ಚಿತ್ರದಲ್ಲಿ ನೋಡುಗರು ಪರಿಶೀಲಿಸುವಂತೆ ರಾಮಚಂದ್ರ ಅನುವು ಮಾಡಿಕೊಡುತ್ತಾರೆ. ರೀಲ್ ಮತ್ತು ರಿಯಲ್ ಅನುಭವಗಳ ಪರಿಣತರೆಂದು ಗುರುತಿಸಿಕೊಳ್ಳುವ ಪ್ರಶಸ್ತಿ ವಿಜೇತ ಚಿತ್ರ ಮಾಡಿರುವ ಲೋಕೇಶ್ ಮತ್ತು ಅನುಭವದ ಗಣಿಯಾದ ತ್ರಿಪುರಾರಿ ನಡೆಸುವ ಸಂವಾದದಲ್ಲಿ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಮಾಡಿದ ಹೋರಾಟ ಸಹ ಲೇವಡಿಗೆ ಗುರಿಯಾಗುತ್ತದೆ. ತನ್ನ ಚಿತ್ರಕ್ಕೆದೊರೆತ ಪ್ರಶಸ್ತಿ, ತಮ್ಮ ಹಿರಿಯ ಸಹಪಾಠಿ ಮಂಜುಳಾ ಜ್ಯೂರಿ ಸದಸ್ಯರಲ್ಲಿ ಒಬ್ಬಳಾಗಿದ್ದುದರಿಂದ ಸಾಧ್ಯವಾಯಿತೆಂದು ಒಪ್ಪಿಕೊಳ್ಳುವ ಲೋಕೇಶ್, ‘‘ಇಗೋ ಅಣ್ಣಾ ಹಜಾರೆಗೆ ಫೋನಾಯಿಸುತ್ತೇನೆ’’ ಎಂದು ತ್ರಿಪುರಾರಿ ಬೆದರಿಸಿದಾಗ, ಆಗಲಿ ಎಂದು, ಮ್ಯಾಟರ್ನಿಟಿ ಲೀವ್ ಚಿತ್ರಮಾಡಲು ತಿರುಚಿನಾಪಳ್ಳಿಯ ಅಳಿಯನ ಮೂಲಕ ಕಪ್ಪುಹಣ ಒದಗಿಸುವ ಜಾರ್ಖಂಡ್‌ನ ಟ್ರ್ಯಾಫಿಕ್ ಎಸ್ಪಿಯ ಭ್ರಷ್ಟಾಚಾರವನ್ನೂ ಬಯಲಿಗೆಳೆಯುತ್ತೇನೆಂದು ಬ್ಲಾಕ್‌ಮೇಲ್ ಮಾಡಿ ಬಾಯಿ ಮುಚ್ಚಿಸಿ ತ್ರಿಪುರಾರಿಗೆ ಸರಿಸಾಟಿಯೆನಿಸುತ್ತಾನೆ. ಅಗಲ ಕಣ್ಣಿನ, ದೊಡ್ಡ ಕುಂಕುಮದ ಬಂಗಾಳಿ ಹುಡುಗಿ, ಫಿಲ್ಮ್ ಇನ್‌ಸ್ಟಿಟ್ಯೂಟಿನ ಹಿರಿಯ ಸಹಪಾಠಿ, ಮಂಜುಳಾ ಘೋಷ್ ನೈತಿಕವಾಗಿ ಅವಗುಣವೆಂದು, ಹಣದ ವ್ಯವಹಾರದಲ್ಲಿ ಜಾಣತನವೆಂದು, ರಾಜಕಾರಣದಲ್ಲಿ ಮುತ್ಸದ್ದಿತನವೆಂದು ಗುರುತಿಸುವ ದೊಡ್ಡವರ ಸುಳ್ಳು, ಮಕ್ಕಳಲ್ಲಿ, ಕಲಾಪ್ರಪಂಚದಲ್ಲಿ ಕಲ್ಪನಾವಿಲಾಸವೆಂದು ಮೆಚ್ಚುಗೆಗೆ ಪಾತ್ರವಾಗುತ್ತದೆ. ಅಷ್ಟೇ ಏಕೆ, ವಾಸ್ತವ ಪ್ರಪಂಚದಲ್ಲಿ ಸಾಮಾಜಿಕವಾಗಿ ಒಪ್ಪಿತವಾದ, ನೈತಿಕ ಪರಿಗಣನೆಯ ಚೌಕಟ್ಟಿನೊಳಗೆ ಬರದೆ ನೇತ್ಯಾತ್ಮಕವೆನಿಸುವ ಎಲ್ಲವೂ, ಕಲಾಕೃತಿಗಳಲ್ಲಿ ಸಾಕ್ಷಾತ್ಕಾರಗೊಳ್ಳುವ ಕಲಾನುಭವದಲ್ಲಿ ಇತ್ಯಾತ್ಮಕ ಆಯಾಮವನ್ನು ಪಡೆದುಕೊಳ್ಳುತ್ತವೆ. ಸಿಗರೇಟು ಸೇದುತ್ತಿಲ್ಲವೆಂದು, ಕುಡಿಯುತ್ತಿಲ್ಲವೆಂದು, ಊರಿನಲ್ಲಿಲ್ಲವೆಂದು, ಪ್ರಿಯಾ ದೂರದ ಡೆಹ್ರಾಡೂನಿನಲ್ಲಿದ್ದಾಳೆಂದು, ತನ್ನ ಪರಿಶೀಲನೆಗಾಗಿ ಬಂದ ಯಾರದ್ದೋ ಚಿತ್ರಕತೆಯನ್ನು ತಾನು ಬರೆದದ್ದೆಂದು,
ದೂರದೂರಿನಲ್ಲಿನ ಹೆಂಡತಿಗೆ, ನಿರ್ಮಾಪಕ ನಾಯರ್‌ಗೆ, ಅಚಾನಕ್ಕಾಗಿ ಮನೆಗೆ ಬಂದ ಸಹಪಾಠಿ-ಅಣ್ಣ ಟ್ರಿಪ್ಸ್ ಗೆ ಸುಳ್ಳುಹೇಳುವ ಲೋಕೇಶ್ ಏಕಕಾಲಕ್ಕೆ ಸತ್ಯದಾರಿದ್ರ್ಯನಂತೆ, ಅರ್ಥದಾರಿದ್ರ್ಯನಂತೆ ಆದರೆ ಕಲ್ಪನಾ ಶ್ರೀಮಂತನಂತೆ ಗೋಚರಿಸುತ್ತಾನೆ. ಲೋಕೇಶನಿಗೆ ವಿಳಾಸ ಕೊಟ್ಟ(ಗತಿಸಿದ) ಸ್ನೇಹಿತ, ಪ್ರಿಯಾ ಓದುವ ಶಾಲೆಗೆ ಬೇಟಿ ಕೊಟ್ಟೂ ಅದನ್ನು ಲೋಕೇಶ್‌ನಿಂದ ಮರೆಮಾಚುವ ಕಪಟ, ಚಿತ್ರಕ್ಕೆ ಕಪ್ಪುಹಣ ಹಣ ಒದಗಿಸುವ ನಿರ್ಮಾಪಕ ಮತ್ತು ಅವನೊಂದಿಗಿನ ತನ್ನ ಸಂಬಂಧದ ಸುಳ್ಳು, ತಾನು ಬಂದ ನಿಜವಾದ ಉದ್ದೇಶ ಈ ಎಲ್ಲ ವಿಷಯಗಳಿಗೂ ಸಂಬಂಧಿಸಿದಂತೆ ಸಹಪಾಠಿ-ತಮ್ಮ ಲೋಕೇಶ್ ನಿಗೆ ಸುಳ್ಳುಹೇಳುವ ತ್ರಿಪುರಾರಿ ಎಲ್ಲ ರೀತಿಯಲ್ಲೂ ಲೋಕೇಶ್‌ಗೆ ಸರಿಸಾಟಿ. ಅವರಿಬ್ಬರು ಹೇಳುವ ಸುಳ್ಳುಗಳ ಮೂಲಕವೇ ವಾಸ್ತವ ಸತ್ಯಗಳಾದ ಚಲನಚಿತ್ರೋದ್ಯಮದ ಬೌದ್ಧಿಕ ದಾರಿದ್ರ್ಯ, ಪ್ರಶಸ್ತಿ ನಿರ್ಣಯ ಸಮಿತಿ ಸದಸ್ಯರ ಅನೈತಿಕತೆ, ಸೆನ್ಸಾರ್ ಮಂಡಲಿಗಳ ಸಂವೇದನಾರಾಹಿತ್ಯ, ಬಂಡವಾಳಶಾಹಿ ತಾತ್ವಿಕತೆ-ರಾಜಕೀಯಗಳ ಧೂರ್ತತೆಗಳು ಸ್ಫುಟಗೊಳ್ಳುತ್ತವೆ. ಅರ್ಥದಾರಿದ್ರ್ಯದಿಂದ ಬಳಲುವ ನಟರು ಹೇಳುವ ಸುಳ್ಳುಗಳ ಮೂಲಕ ಕಲಾವಿದರ ಕಲ್ಪನಾ ಶ್ರೀಮಂತಿಕೆಯ ಸತ್ಯ ಸ್ಫುಟವಾಗುತ್ತದೆ. ಅರ್ಥ ಶ್ರೀಮಂತಿಕೆಯ ಜನರು ಹೇಳುವ ಸುಳ್ಳುಗಳಿಂದ ನಿರ್ವಹಿಸಲ್ಪಡುವ ಇಡೀ ವ್ಯವಸ್ಥೆಯ ಬಗ್ಗೆಯೇ ಜುಗುಪ್ಸೆ ಮೂಡಿದರೆ, ಸುಳ್ಳಿನ ಮೂಲಕ ನಿಜ ಹೇಳುವ ಕಲ್ಪನಾಶ್ರೀಮಂತಿಕೆಯ ಕಲಾವಿದರ ಬಗ್ಗೆ ಅನುಕಂಪ ಮೂಡುತ್ತದೆ. ಕಲೆ ಮತ್ತು ಕಲಾವಿದರು ಅವರ ಸತ್ಯಾನ್ವೇಷಣೆಗಾಗಿ ಮೆಚ್ಚುಗೆಗೆ ಪಾತ್ರವಾಗುತ್ತಾರೆ.
ಸಿನೆಮಾ, ಸುಳ್ಳಿನ ಮೂಲಕ ಸತ್ಯವನ್ನು ಅನ್ವೇಷಿಸುತ್ತದೆ ಎಂದು ಅಬ್ಬಾಸ್ ಕಿರೋಸ್ತಮಿ ಹೇಳಿದ್ದು ಇದೇ ಅರ್ಥದಲ್ಲೇ ಇರಬೇಕು.
ಪ್ರೆಂಚ್ ಚಿತ್ರ ‘ಪೇಟರ್’ ನಿರ್ದಿಷ್ಟವಾಗಿ ಪ್ರಾನ್ಸಿನ ರಾಜಕೀಯದಲ್ಲಿ, ವಿಶಾಲ ಅರ್ಥದಲ್ಲಿ ರಾಜಕೀಯ ಜಗತ್ತಿನಲ್ಲಿ, ಮತ್ತು ಸಿನೆಮಾ ಪ್ರಪಂಚದಲ್ಲಿ ಹಾಸುಹೊಕ್ಕಾಗಿರುವ ಪಿತೃ ಪ್ರತೀಕಗಳ ದಮನಕಾರಿ ಆಳ್ವಿಕೆಯನ್ನು ಲೇವಡಿ ಮಾಡುತ್ತದೆ. ‘ಹಾಲ್ ಎ ಕಂಗಾಲ್’, ರಾಜಕೀಯ ವಲಯದಲ್ಲಿನ ಪಿತೃ-ಪ್ರತೀಕಗಳನ್ನು ಮಾತ್ರವಲ್ಲದೆ, ಬೌದ್ಧಿಕವಾಗಿ ದಿವಾಳಿಯಾಗಿರುವ ವ್ಯಾಪಾರೀ ಚಿತ್ರರಂಗ ಮತ್ತು ಪ್ರಶಸ್ತಿ ಮಾರುಕಟ್ಟೆಯ ಕಲಾತ್ಮಕ ಚಿತ್ರರಂಗದಲ್ಲಿ ಸ್ಥಾಪಿತವಾಗಿರುವ ದಮನಕಾರಿ ಅಣ್ಣ ಪ್ರತೀಕಗಳನ್ನೂ ಲೇವಡಿಯ ಪರಿಧಿಯೊಳಕ್ಕೆತರುತ್ತದೆ. ಉಳಿದವರಿಗೆ ಅವಕಾಶವನ್ನೇ ಕೊಡದಂತೆ ಎಲ್ಲವನ್ನೂ ಆಕ್ರಮಿಸಿಕೊಳ್ಳುವ ದಮನಕಾರಿ ಅಣ್ಣ, ಹಿಂದಿ, ಕನ್ನಡ, ತಮಿಳು, ತೆಲುಗು, ಬಂಗಾಳಿ, ಮಲಯಾಳಂ ಎಂಬ ಪ್ರಾಂತೀಯ ಬೇದವಿಲ್ಲದೆ ಭಾರತೀಯ ಚಿತ್ರರಂಗದಲ್ಲಿ ಬೆೀರೂರಿರುವ ಅನಪೇಕ್ಷಿತ ವಿದ್ಯಮಾನ.
ಕನ್ನಡದ ಸಂಭಾವನಾಗ್ರಂಥ ಸಾಹಿತ್ಯದಲ್ಲಿ ಸಾಹಿತ್ಯದ ಹಿರಿಯರನ್ನು ಬೇರೆ ಬೇರೆ ಕಾರಣಗಳಿಗಾಗಿ ಅಣ್ಣ, ಅಕ್ಕ, ಪಿತಾಮಹ ಎಂದು ಸಂಬೋಧಿಸುವುದು ಮಾತ್ರವಲ್ಲ, ಪುರಾಣದ ವ್ಯಕ್ತಿಗಳೊಂದಿಗೆ ಸಮೀಕರಿಸಿ ಕನ್ನಡದ ಕಣ್ವ, ಭಾರ್ಗವ, ರಸಋಷಿ, ಸವ್ಯಸಾಚಿ, ಎಂದೆಲ್ಲಾ ಹೊಗಳುವ ಪರಿಪಾಠವಿದ್ದರೂ ಅವರ್ಯಾರಿಗೂ ದಮನಕಾರಿ ಛಾಯೆ ಸಿನೆಮಾ ಕ್ಷೇತ್ರದಲ್ಲಿ ಇರುವಷ್ಟು ಬಲವಾಗಿ ಅಂಟಿದಂತಿಲ್ಲ. ಶಾಸ್ತ್ರೀಯ ಮತ್ತು ಸಿನೆಮಾ ಸಂಗೀತ ಪ್ರಪಂಚದಲ್ಲೂ ಪಿತೃ ಮತ್ತು ಮಾತೃ ಪ್ರತೀಕಗಳು ಪರೋಕ್ಷವಾಗಿಯಾದರೂ ದಮನಕಾರಿಯಾಗಿ ಕೆಲಸ ಮಾಡಿವೆ. ರಾಷ್ಟ್ರೀಯವಾಗಿ ಲಿಂಕನ್, ಗಾಂಧಿ, ಲೆನಿನ್, ಮಾವೋ, ಹೊಚಿಮಿನ್ ಮುಂತಾದ ರಾಜಕೀಯ ನೇತಾರರು ಪಿತೃ ಪ್ರತೀಕಗಳಾಗಿ ಅವರವರ ದೇಶಗಳಲ್ಲಿ ಗೌರವ ಪಡೆದಿದ್ದಾರೆ. ಔಷಧ-ಪದ್ಧತಿ, ಪರಮಾಣುಶಕ್ತಿ ತಂತ್ರಜ್ಞಾನ, ರಾಕೆಟ್ ತಂತ್ರಜ್ಞಾನ ಮುಂತಾದ ವಿಜ್ಞಾನ ಸಂಬಂಧಿ ಕ್ಷೇತ್ರಗಳಲ್ಲೂ ಪಿತೃ ಪ್ರತೀಕಗಳ ಆರಾಧನೆ ರೂಢಿಯಲ್ಲಿದೆ. ಹೀಗಿದ್ದರೂ ಇದಕ್ಕೆವ್ಯಕ್ತಿಗತವಾಗಿ ಯಾರನ್ನೂ ದೂಷಿಸುವಂತಿಲ್ಲ. ಪ್ರಜಾತಂತ್ರದ ಬಂಡವಾಳವಾದಿ ಮತ್ತು ಸಮಾಜವಾದಿ ಮಾದರಿಗಳಲ್ಲಿ ಪಿತೃ ಅಥವಾ ಮಾತೃ ಪ್ರತೀಕಗಳು ರಾಜಕೀಯವಾಗಿ ಪ್ರಶ್ನೆಗೊಳಗಾಗುತ್ತವೆ. ಸಹನಶೀಲ ಸಮಾಜಗಳಲ್ಲಿ ಲೇವಡಿಗೂ ಗುರಿಯಾಗುತ್ತವೆ. ಆದರೆ ಆರ್ಥಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ದಮನಕಾರಿಯಾಗೇ ಮುಂದುವರೆಯುತ್ತಿರುತ್ತವೆ. ಊಳಿಗಮಾನ್ಯ, ಅಥವಾ ಅರೆ ಊಳಿಗಮಾನ್ಯ ಮಾದರಿಗಳ ಸಮಾಜದಲ್ಲಿ ಪಿತೃ ಅಥವಾ ಮಾತೃ ಪ್ರತೀಕಗಳು ದಮನಕಾರಿಯಾಗಿದ್ದುಕೊಂಡು, ಪ್ರಶ್ನಿಸುವವರನ್ನು ಶಿಕ್ಷಿಸುವುದು ಮಾತ್ರವಲ್ಲ, ರಾಜಕೀಯ ಅಶಿಕ್ಷಿತರಾದ ಜನಸಾಮಾನ್ಯರ ಆರಾಧನೆಗೂ ಪಾತ್ರವಾಗುತ್ತವೆ. ಪ್ಯಾಶಿಸ್ಟ್ ಮಾದರಿಯ ಸಮಾಜದಲ್ಲಿ ಪಿತೃ ಅಥವಾ ಮಾತೃ ಪ್ರತೀಕಗಳು, ಪ್ರಶ್ನಿಸುವುದೇ ಅಸಾಧ್ಯ ಎಂಬಷ್ಟುದಮನಕಾರಿಯಾಗಿರುತ್ತವೆ. ಆಗ ವ್ಯಂಗ್ಯ, ಲೇವಡಿ, ಕಟಕಿಗಳಂಥ ಪರ್ಯಾಯ ಮಾರ್ಗಗಳು ಕಲಾವಿದರಿಗೆ ಅನಿವಾರ್ಯವಾಗುತ್ತವೆ. ಹೇಗೇ ಆದರೂ, ಪಿತೃ ಅಥವಾ ಮಾತೃ ಪ್ರತೀಕಗಳ ವಿರುದ್ಧ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಸೆಣಸುವುದು ನೈಜ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಕೆಲಸ ಗುರುತರವಾದದ್ದು. ಪಿತೃ ಅಥವಾ ಮಾತೃ ಪ್ರತೀಕಗಳ ಅಡಿಪಾಯವಾದ ಊಳಿಗಮಾನ್ಯ ಮತ್ತು ಪ್ಯಾಶಿಸ್ಟ್ ಧೋರಣೆಗಳನ್ನು ಬಗಲಲ್ಲಿಟ್ಟುಕೊಂಡ ಬಂಡವಾಳವಾದದ ಬಗ್ಗೆ ಅರಿವನ್ನು ಬೆಳೆಸಿಕೊಳ್ಳುವುದು ಮೊದಲ ಹೆಜ್ಜೆ. ರಾಜಕೀಯವಾಗಿ ಪ್ರಶ್ನಿಸುವುದು ಎರಡನೆಯ ಹೆಜ್ಜೆ. ಆಗ ಮಾತ್ರ ಅದು ಪೋಷಿಸುವ ಮಾತೃ-ಪಿತೃ ಪ್ರತೀಕಗಳ ದಮನಕಾರಿ ಹಿಡಿತದಿಂದ ಹೊರಬರುವುದು ಸಾಧ್ಯ. ‘ಪೇಟರ್’ ಮತ್ತು ‘ಬ್ಯಾಂಕ್ರಪ್ಟ್ಸ್’ ಸಿನೆಮಾ ಭಾಷೆಯಲ್ಲಿ ಅಂಥ ಪ್ರಯತ್ನ ಮಾಡುವ ಚಿತ್ರಗಳು.







