ರಾಜ್ಯದಲ್ಲಿನ ಬರಗಾಲಕ್ಕೆ ಅರಣ್ಯ ನಾಶವೇ ಕಾರಣ: ಪ್ರಮೋದ್ ಮಧ್ವರಾಜ್

ಉಡುಪಿ, ಡಿ.18: ಅರಣ್ಯ ಇಲಾಖೆಯ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಅರಣ್ಯ ಹಾಗೂ ವನ್ಯಜೀವಿಗಳು ಉಳಿಯಲು ಸಾಧ್ಯ. ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಅರಣ್ಯ ನಾಶದ ಪರಿಣಾಮ ಇಂದು ಬರಗಾಲದಂತಹ ಸಮಸ್ಯೆ ಎದುರಾಗುತ್ತಿದೆ. ಹಾಗಾಗಿ ಮುಂದಿನ ಜನಾಂಗದ ಭವಿಷ್ಯ ಉತ್ತಮವಾಗಿಸುವ ಹೊಣೆ ಅರಣ್ಯ ಇಲಾಖೆಯ ಮೇಲಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಕುಂದಾಪುರ ವಿಭಾಗ ಮತ್ತು ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇದರ ವತಿಯಿಂದ ಉಡುಪಿ ಕಿದಿಯೂರು ಹೊಟೇಲಿನ ಶೇಷಶಯನ ಸಭಾಂಗಣದಲ್ಲಿ ಆಯೋಜಿಸಲಾದ ಹೊಸ ವರ್ಷದ ಡೈರಿ ಬಿಡುಗಡೆ, ಅಭಿನಂದನಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿ 1.4 ಲಕ್ಷ ಸರಕಾರಿ ನೌಕರರ ಹುದ್ದೆ ಖಾಲಿ ಇದೆ. ಸಿಬ್ಬಂದಿಗಳು ಸರಿಯಾದ ಸಂಖ್ಯೆಯಲ್ಲಿ ಇದ್ದಾಗ ಮಾತ್ರ ಯಾವುದೇ ಸರಕಾರ ಉತ್ತಮ ಕೆಲಸ ಮಾಡಲು ಸಾಧ್ಯ. ಇಂದು ರಾಜ್ಯ ಸರಕಾರ ತನ್ನ ಒಟ್ಟು ಬಜೆಟ್‌ನಲ್ಲಿ 60 ಸಾವಿರ ಕೋಟಿ ರೂ. ಸರಕಾರಿ ನೌಕರರ ಸಂಬಳಕ್ಕೆ ವಿನಿಯೋಗಿಸುತ್ತಿದೆ. ಅರಣ್ಯ ಇಲಾಖೆಯ ರಕ್ಷಕರ ಮತ್ತು ವೀಕ್ಷಕರ ಬೇಡಿಕೆ ಕುರಿತು ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿ ಈಡೇರಿಸಲು ಪ್ರಯತ್ನ ಮಾಡಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಡಾ.ಸಂಜಯ್ ಎಸ್.ಬಿಜೂರು, ಕುಂದಾಪುರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮರನಾಥ್, ಕಾರ್ಕಳ ಕುದುರೆಮುಖ ವನ್ಯ ಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಮರೀಯ ಕ್ರಿಸ್ತರಾಜ ಡಿ. ಮಾತನಾಡಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಚ್.ದೇವರಾಜ ಪಾಣ ವಹಿಸಿದ್ದರು. ಉಡುಪಿ ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ. ಭಟ್, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಬಾಬಾ ರೈ, ಮೂಡಬಿದಿರೆ ಉಪವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ಎಚ್.ಆರ್., ಉಡುಪಿ ಅರಣ್ಯ ಸಂಚಾರಿದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸದಾನಂದ, ವನ್ಯ ಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಭಾಸ್ಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ನೂತನ ವರ್ಷದ ಡೈರಿ ಬಿಡುಗಡೆ, ಕ್ರೀಡಾಕೂಟದಲ್ಲಿ ಸಾಧನೆಗೈದ ಅರಣ್ಯ ರಕ್ಷಕ, ವೀಕ್ಷಕರಿಗೆ ಸನ್ಮಾನ, ಅರಣ್ಯ ರಕ್ಷಕ, ವೀಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿಶೇಷ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು. ಸಂಘಧ ಪ್ರಧಾನ ಕಾರ್ಯದರ್ಶಿ ಕೇಶವ ಪೂಜಾರಿ ಎಂ. ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಲೋಕೇಶ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







