ಮುನ್ನೂರು ಗ್ರಾಮದಲ್ಲಿ ನಗದುರಹಿತ ವ್ಯವಹಾರಕ್ಕೆ ಚಾಲನೆ

ಉಳ್ಳಾಲ , ಡಿ.18 : ಪ್ರಧಾನಿ ನರೇಂದ್ರ ಮೋದಿಯವರು ನೋಟ್ ಬ್ಯಾನ್ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಬಹಳ ಪರಿಣಾಮಕಾರಿಯಾಗಿದೆ. ಇದರಿಂದ ಕಾಳಸಂತೆ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಬಹುದಾಗಿದ್ದು, ವಿದ್ಯಾರ್ಥಿಗಳು ಪ್ರದಾನಿಯವರ ಕ್ಯಾಶ್‌ಲೆಸ್ ಯೋಜನೆಯನ್ನು ಬೆಂಬಲಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲು ಕರೆ ನೀಡಿದರು.
ಅವರು ನಿಟ್ಟೆ ವಿಶ್ವವಿದ್ಯಾಲಯ,ಸಿಂಡಿಕೇಟ್ ಬ್ಯಾಂಕ್ ಹಾಗೂ ಮುನ್ನೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆದಿತ್ಯವಾರ ನಡೆದ ನಗದುರಹಿತ ಮುನ್ನೂರು ಗ್ರಾಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗದುರಹಿತ ಯೋಜನೆ ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಪ ಗ್ರಾಮದಲ್ಲಿ ಜಾರಿಗೆ ತರಲಾಗಿದ್ದು 10 ದಿನದಲ್ಲೇ ಜನ ಜಾಗೃತರಾಗಿ ನಗದುರಹಿತ ಗ್ರಾಮವಾಗಿ ಮಾರ್ಪಟ್ಟಿದೆ. ಇದೀಗ ಮುನ್ನೂರು ಗ್ರಾಮದಲ್ಲೂ ಯೋಜನೆ ಜಾರಿಗೆ ತರಲಾಗಿದ್ದು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿದರೆ ಹತ್ತೇ ದಿನದಲ್ಲಿ ನಗದುರಹಿತಗೊಂಡು ದ.ಕ.ಜಿಲ್ಲೆಯ ಎರಡನೇ ಕ್ಯಾಶ್‌ಲೆಸ್ ಗ್ರಾಮವಾಗುವುದರಲ್ಲಿ ಸಂದೇಹವಿಲ್ಲ. ನೋಟು ನಿಷೇಧದಿಂದಾಗಿ ತಿಂಗಳಲ್ಲೇ 13 ಲಕ್ಷ ಕೋಟಿ ಹಣ ಬ್ಯಾಂಕ್‌ಗಳಿಗೆ ಹರಿದು ಬಂದಿವೆ,ಕಾಶ್ಮೀರದಲ್ಲಿ ನಡೆಯುತ್ತಿದ್ದ ಗಲಭೆಗಳು ನಿಂತಿವೆ, 799 ನಕ್ಸಲರು ಶರಣಾಗತರಾಗಿದ್ದಾರೆ, ಶೇ.50ರಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ, ನಗದುರಹಿತ ವ್ಯವಹಾರದಿಂದ ಜನಸಾಮಾನ್ಯರಿಗೆ ಸದ್ಯದ ಮಟ್ಟಿನಲ್ಲಿ ತೊಂದರೆಗಳಾಗುವುದು ಸಹಜ, ಆದರೆ ಅದು ತಾತ್ಕಾಲಿಕ.ಇಲ್ಲಿ ನಡೆಯುವ ಯಾವುದೇ ವ್ಯವಹಾರಗಳೂ ನಗದು ಮೂಲಕ ಆಗಿರುವುದರಿಂದ ಲೆಕ್ಕಕ್ಕೆ ಸಿಗದ ಹಣವಾಗಿ ಮಾರ್ಪಟ್ಟು ಶೇ.20ರಷ್ಟಿರುವ ಶ್ರೀಮಂತರು ಭ್ರಷ್ಟರು ಎನಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ನಗದುರಹಿತ ವ್ಯವಹಾರ ಸಹಕಾರಿ, ಇದರಿಂದ ಸರ್ಕಾರದ ಬಳಿ ಹಣ ಹೆಚ್ಚು ಜಮೆಯಾಗಿ ಹೆಚ್ಚು ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ ಎಂದು ಹೇಳಿದರು.
ಸಿಂಡಿಕೇಟ್ ಬ್ಯಾಂಕ್ ಕಾರ್ಯ ನಿರ್ವಾಹಕ ನಿರ್ದೇಶಕ ಎನ್.ಕೆ.ತಿಂಗಳಾಯ,ಡಿಜಿಎಂ ಎನ್.ಎಸ್.ಸೋಮಯಾಜಿ,ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ,ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಆರ್.ಶೆಟ್ಟಿ,ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಎಸ್.ಮುಡಿತ್ತಾಯ,ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







