ಲೋಕಸಭೆಗೆ ಸ್ಪರ್ಧಿಸಲಿದ್ದಾರೆಯೇ ರಮಾನಾಥ ರೈ ?

ಮಂಗಳೂರು, ಡಿ.18: ಈಗಾಗಲೇ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಗೆ ದ.ಕ. ಲೋಕಸಭಾ ಚುನಾವಣೆಯಲ್ಲಿ ಮುಂದಿನ ಬಾರಿ ಟಿಕೆಟ್ ಸಿಗುವುದು ಸಂಶಯ. ಹಾಗಾಗಿ ಹಾಲಿ ಡಿಸಿಸಿ ಅಧ್ಯಕ್ಷ ಮತ್ತು ಸಚಿವ ರಮಾನಾಥ ರೈಯವರನ್ನು ದ.ಕ. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಕಳೆದ ಚುನಾವಣೆ ಸಂದರ್ಭವೇ ಹಿರಿಯ ಉಪಾಧ್ಯಕ್ಷರಾಗಿದ್ದ ಇಬ್ರಾಹೀಂ ಕೋಡಿಜಾಲ್‌ರನ್ನು ಪ್ರಭಾರ ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಲಾಗಿತ್ತು. ರಮಾನಾಥ ರೈ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕವೂ ಡಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಕೂಗು ಕೇಳಿ ಬಂದಿತ್ತು. ತನ್ಮಧ್ಯೆ ಕಾಂಗ್ರೆಸ್‌ಗೆ ನೂತನ ಕಚೇರಿ ನಿರ್ಮಿಸಿಕೊಟ್ಟ ಬಳಿಕ ಸ್ಥಾನ ತ್ಯಜಿಸುವೆ ಎಂದು ರಮಾನಾಥ ರೈ ಹೇಳಿಕೊಂಡಿದ್ದರು.
ಅದರಂತೆ ನ.19ರಂದು ಜರಗಿದ ನೂತನ ‘ಕಾಂಗ್ರೆಸ್ ಭವನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ತೊರೆಯುವ ಇಂಗಿತವನ್ನು ರಮಾನಾಥ ರೈ ವ್ಯಕ್ತಪಡಿಸಿದ್ದರೂ, ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಸ್ಥಾನ ತೊರೆಯುವ ಪ್ರಕ್ರಿಯೆ ವಿಳಂಬವಾಗಿದೆ ಎನ್ನಲಾಗಿದೆ.
ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಾತಿ ಬಲದ ಲೆಕ್ಕಾಚಾರವೂ ನಡೆಸಲಾಗುತ್ತಿದೆ. ಜೈನ ಸಮುದಾಯ ಒಲವು ಗಳಿಸಲು ಮುಲ್ಕಿ-ಮೂಡುಬಿದಿರೆ ಶಾಸಕ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್‌ರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ತೇಲಿ ಬಿಡಲಾಗುತ್ತಿದೆ. ಈಗಾಗಲೇ ಮುಡಾ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಬಲ್ಲಾಳ್‌ರನ್ನು ನೇಮಿಸಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಬಂಟ ಸಮಾಜದ ಒಲವು ಗಳಿಸಲು ಡಿಸಿಸಿ ಉಪಾಧ್ಯಕ್ಷರೂ ಆಗಿರುವ ಮಾಜಿ ಮೇಯರ್ ಹಾಗೂ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆಗೆ ಅಧ್ಯಕ್ಷ ಸ್ಥಾನ ನೀಡುವ ಮಾತುಗಳು ಕೇಳಿ ಬರುತ್ತಿವೆ.
ಸಚಿವ ರಮಾನಾಥ ರೈ ಒಲವು ಕೂಡ ಶಶಿಧರ ಹೆಗ್ಡೆಯ ಪರ ಇರುವ ಹಿನ್ನೆಲೆಯಲ್ಲಿ ಅಂತಿಮವಾಗಿ ಶಶಿಧರ ಹೆಗ್ಡೆ ಡಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ ಅಚ್ಚರಿಯಿಲ್ಲ. ತನ್ಮಧ್ಯೆ ಬ್ಲಾಕ್‌ಗಳ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯರು, ಮಾಜಿ ಸದಸ್ಯರು ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ರೈ ಅಧ್ಯಕ್ಷ ಸ್ಥಾನ ತ್ಯಜಿಸಿದರೆ, ಮುಂದಿನ ಲೋಕಸಭೆಗೆ ಅವರನ್ನೇ ಅಭ್ಯರ್ಥಿಯಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.







